Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಕ್ಕಳನ್ನು ಅಲ್ಲಾ ಹು ಅಕ್ಬರ್ ಎಂದು ಪಠಿಸುವಂತೆ ಹೇಳಲಾಗಿದೆಯೇ?
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಬಾಂಗ್ಲಾದೇಶದಲ್ಲೇ ಅಲ್ಲ, ಇದು ಭಾರತದ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಆಗಿದೆ.
ಯುವಕನೊಬ್ಬ ಕೆಲ ಮಕ್ಕಳಿಗೆ ಥಳಿಸಿ ಬಲವಂತವಾಗಿ ಜೈ ಶ್ರೀ ರಾಮ್ ಎಂಬ ಧಾರ್ಮಿಕ ಘೋಷಣೆ ಕೂಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಕೆಲ ಬಳಕೆದಾರರು ಇದಕ್ಕೆ ಬೇರೆಯದೆ ಬಣ್ಣ ಬಳಿಸು ಫೇಸ್ಬುಕ್, ಎಕ್ಸ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ವೈರಲ್ ಆಗಿದ್ದು, ಮೂಲಭೂತವಾದಿಗಳು ಅಲ್ಪಸಂಖ್ಯಾತ ಹಿಂದೂ ಮಕ್ಕಳನ್ನು ಹಿಂಸಿಸಿ ‘ಅಲ್ಲಾ ಹು ಅಕ್ಬರ್’ ಎಂದು ಜಪಿಸುವಂತೆ ಹೇಳುತ್ತಿದ್ದಾರೆ ಎಂದು ಬರೆದುಕೊಳ್ಳುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದಿಂದ ಬಂದ ವಿಡಿಯೋ. ಇಸ್ಲಾಮಿಸ್ಟ್ ಬಾಂಗ್ಲಾದೇಶದ ಹಿಂದೂ ಮಕ್ಕಳನ್ನು ಹೊಡೆಯುತ್ತಿದ್ದಾನೆ ಮತ್ತು ಅಲ್ಲಾ ಹು ಅಕ್ಬರ್ ಎಂದು ಜಪಿಸುವಂತೆ ಒತ್ತಾಯಿಸುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋ ಬಾಂಗ್ಲಾದೇಶದಲ್ಲೇ ಅಲ್ಲ, ಇದು ಭಾರತದ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಆಗಿದೆ.
ವೈರಲ್ ವಿಡಿಯೋದ ನಿಜಾಂಶ ತಿಳಿಯಲು ನಾವು ಸಂಬಂಧಿತ ಕೀವರ್ಡ್ ಮೂಲಕ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ಡಿಸೆಂಬರ್ 7, 2024 ರಂದು ಭಾರತದ ಮಾಧ್ಯಮ ಸಂಸ್ಥೆ ಟಿವಿ9 ಭಾರತ್ವರ್ಷ್ ಇದೇ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ಒಳಗೊಂಡ ಸುದ್ದಿಯನ್ನು ಪ್ರಕಟಿಸಿರುವುದು ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಡಿಸೆಂಬರ್ 6 ರ ಶುಕ್ರವಾರದಂದು ಮಧ್ಯಪ್ರದೇಶ ಪೊಲೀಸರು, ರತ್ಲಾಮ್‌ನಲ್ಲಿ ಮೂವರು ಮಕ್ಕಳನ್ನು ಹೊಡೆದು ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯಿಸಿದ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆಎ. ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ರತ್ಲಾಮ್‌ನ ಹೆಚ್ಚುವರಿ ಎಸ್ಪಿ ರಾಕೇಶ್ ಖಾಹಾ ತಿಳಿಸಿದ್ದಾರೆ ಎಂಬ ಮಾಹಿತಿ ಇದರಲ್ಲಿ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿ 3 ಮಕ್ಕಳ ಮೇಲೆ ಹಲ್ಲೆ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಲಾಗಿದೆ, ವಿಡಿಯೋ ಕಾಣಿಸಿಕೊಂಡ ನಂತರ, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಡಿಯೋ ಒಂದು ತಿಂಗಳಿಗಿಂತ ಹಳೆಯದಾಗಿದ್ದು, ಆರೋಪಿಯನ್ನು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧಿಗಳನ್ನು ಹಿಡಿಯಲು ಸೈಬರ್ ತಂಡ ಮತ್ತು ಪೊಲೀಸರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಗುರುವಾರ ರಾತ್ರಿ ಒಬ್ಬ ವ್ಯಕ್ತಿ 6, 9 ಮತ್ತು 11 ವರ್ಷ ವಯಸ್ಸಿನ ಮಕ್ಕಳಿಗೆ ಚಪ್ಪಲಿಯಿಂದ ಥಳಿಸುತ್ತಿರುವುದನ್ನು ಮತ್ತು ಮಕ್ಕಳನ್ನು ಬಲವಂತವಾಗಿ ಧಾರ್ಮಿಕ ಘೋಷಣೆಗಳನ್ನು ಪಠಿಸುವಂತೆ ಮಾಡಿದ ವಿಡಿಯೋ ವೈರಲ್ ಆಗಿದೆ. ಇದಾದ ನಂತರ ಮುಸ್ಲಿಂ ಸಮುದಾಯದ ಸದಸ್ಯರು ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಬ್ಯಾಂಕ್ನೊಳಗೆ ಬಂದು ಮಹಿಳಾ ಮ್ಯಾನೇಜರ್ನ ಫೋನ್ ಒಡೆದು ಬೆದರಿಕೆ ಹಾಕಿದ ವ್ಯಕ್ತಿ; ವಿಡಿಯೋ ವೈರಲ್
ಹೀಗಾಗಿ ವೈರಲ್ ವಿಡಿಯೋ ಬಾಂಗ್ಲಾದೇಶದ್ದಲ್ಲ, ಇದು ಭಾರತದ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಿಂದ ಬಂದಿದೆ ಎಂದು ಟಿವಿ9 ಕನ್ನಡ ವಾಸ್ತವ ಪರಿಶೀಲನೆಯಿಂದ ಸ್ಪಷ್ಟವಾಗಿದೆ. ಇಲ್ಲಿ ಓರ್ವ ಯವಕ ಮೂವರು ಮಕ್ಕಳನ್ನು ಥಳಿಸಿ ಧಾರ್ಮಿಕ ಘೋಷಣೆಗಳನ್ನು ಕೂಗಲು ಹೇಳಿದ್ದಾರೆ. ಆದ್ದರಿಂದ ವೈರಲ್ ಆಗುತ್ತಿರುವ ಪೋಸ್ಟ್ ಎಂದು ನಾವು ಖಚತವಾಗಿ ಹೇಳುತ್ತೇವೆ.
ಬಾಂಗ್ಲಾದೇಶ ಎಂದು ಅನೇಕ ಸುದ್ದಿ ವೈರಲ್:
ಕಳೆದ ಕೆಲವು ತಿಂಗಳುಗಳಿಂದ ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ ಎಂದು ಸುಳ್ಳು ಹೇಳಿಕೆಯೊಂದಿಗೆ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೆ ಬಾಂಗ್ಲಾದೇಶದಲ್ಲಿ 76 ವರ್ಷದ ಮೊಹಮ್ಮದ್ ರೊಜೊಬ್ ಅಲಿ ನಾಲ್ಕನೇ ಬಾರಿಗೆ 12 ವರ್ಷದ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ಹರಿದಾಡಿತ್ತು. ಆದರೆ, ಅದು ಸ್ಕ್ರಿಪ್ಟ್ ಮಾಡಲಾದ ವಿಡಿಯೋ ಆಗಿತ್ತು. ಬಳಿಕ ಬಾಂಗ್ಲಾದೇಶಿ ಮುಸ್ಲಿಮರು ಅಲ್ಲಿರುವ ಹಿಂದೂ ದೇವಾಲಯವನ್ನು ಧ್ವಂಸ ಮಾಡುತ್ತಿದ್ದಾರೆ ಎಂದ ಮತ್ತೊಂದು ವಿಡಿಯೋ ಸಂಚಲನ ಸೃಷ್ಟಿಸಿತು. ಆದರೆ, ಅದು ಬಾಂಗ್ಲಾದೇಶದ ಸಿರಾಜ್‌ಗಂಜ್‌ನಲ್ಲಿರುವ ಮುಸ್ಲಿಂ ಸಂತ ಅಲಿ ಪಾಗ್ಲಾ ಅವರ ದೇಗುಲವನ್ನು ಜನರು ಧ್ವಂಸಗೊಳಿಸಿದ ವಿಡಿಯೋ ಆಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ