Fact Check: ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡುವಾಗ ವ್ಯಕ್ತಿ ಸಾವನ್ನಪ್ಪಿದ್ದು ನಿಜವೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2024 | 4:00 PM

ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದರಲ್ಲಿ ಯಾವುದೂ ನಿಜವಿಲ್ಲ, ಇದೊಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬುದು ಕಂಡುಬಂದಿದೆ.

Fact Check: ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡುವಾಗ ವ್ಯಕ್ತಿ ಸಾವನ್ನಪ್ಪಿದ್ದು ನಿಜವೇ?
ಈ ವೈರಲ್ ವಿಡಿಯೋದ ಸತ್ಯಾಸತ್ಯತೆ
Follow us on

ಸಲೂನ್ ಅಂಗಡಿಗೆ ಹೋದಾಗ ತಲೆಗೆ ಮಸಾಜ್ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಮಸಾಜ್ ಸಮಯದಲ್ಲಿ ಅನಿರೀಕ್ಷಿತ ಪರಿಣಾಮಗಳು ಸಂಭವಿಸುತ್ತವೆ. ಕುತ್ತಿಗೆಯನ್ನು ತಿರುಗಿಸಿ ನೆಟಿಗೆ ತೆಗೆಯುವುದರಿಂದ ನರಗಳಿಗೆ ಹಾನಿಯಾಗುತ್ತದೆ ಮತ್ತು ತಲೆನೋವು ಉಂಟಾಗುತ್ತದೆ. ಕೆಲ ಸಂದರ್ಭಗಳಲ್ಲಿ, ಕೆಲವರು ಪಾರ್ಶ್ವವಾಯುಗೆ ತುತ್ತಾಗಬಹುದು. ಅಂತಹ ಘಟನೆಗಳನ್ನು “ಸಲೂನ್ ಸ್ಟ್ರೋಕ್” ಅಥವಾ “ಬ್ಯೂಟಿ ಪಾರ್ಲರ್ ಸ್ಟ್ರೋಕ್” ಎಂದು ಹೇಳುತ್ತಾರೆ. ಹಠಾತ್ ಮತ್ತು ಬಲವಂತದ ಕತ್ತಿನ ಚಲನೆಯು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಮಿದುಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ಅನೇಕ ತಜ್ಞರು ಸೂಚಿಸಿದ್ದಾರೆ.

ಇದೀಗೆ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಲೂನ್ ಅಂಗಡಿಯಲ್ಲಿ ತಲೆಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕ್ಷೌರಿಕರು ತಲೆ ಮತ್ತು ಕುತ್ತಿಗೆಗೆ ಹೊಡೆಯುವ ಮೂಲಕ ಮಸಾಜ್ ಮಾಡುತ್ತಾರೆ. ಮಸಾಜ್ ಸಮಯದಲ್ಲಿ ಯುವಕನು ಅಸ್ವಸ್ಥಗೊಂಡಿರುವುದು ಕಂಡುಬಂದಿದೆ.

ಫೇಸ್​ಬುಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು, ‘‘ಕಟ್ಟಿಂಗ್ ಸಲೂನ್ ಗಳಲ್ಲಿ ಮಸಾಜ್ ಮಾಡಿಸಿಕೊಳ್ಳುವ ಅಭ್ಯಾಸ ಬಹಳ ಜನರಿಗೆ ಇರುತ್ತದೆ. ಇದು ಎಷ್ಟು ಅಪಾಯಕಾರಿ ಎಂಬುದನ್ನು ಈ ವಿಡಿಯೋನಲ್ಲಿ ನೋಡಿ. ಜಾಗ್ರತೆಯಾಗಿರಿ.’’ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಬಳಕೆದಾರ, ‘‘ಕ್ಷೌರದಂಗಡಿಗೆ ಮಸಾಜ್ ಮಾಡಲು ಬಂದ ವ್ಯಕ್ತಿ. ಮಸಾಜ್ ಪ್ರಕ್ರಿಯೆಯಲ್ಲಿ, ವ್ಯಕ್ತಿ ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದಕ್ಕೆ ಅತಿಯಾದ ಮಸಾಜ್ ಕಾರಣ’’ ಎಂದು ಬರೆದಿದ್ದಾರೆ.


Fact Check:

ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದರಲ್ಲಿ ಯಾವುದೂ ನಿಜವಿಲ್ಲ, ಇದೊಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬುದು ಕಂಡುಬಂದಿದೆ. ಜನರಲ್ಲಿ ಜಾಗೃತಿ ಮೂಡಿಸಲು ಈ ವಿಡಿಯೋ ಮಾಡಲಾಗಿದೆಯಂತೆ. ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಈ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮಾಡಿರುವ ವಿಡಿಯೋವನ್ನು ಅಸಲಿ ಎಂದು ಪರಿಗಣಿಸಿ ಅನೇಕರು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಈ ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬ ಎಚ್ಚರಿಕೆಯ ಸಂದೇಶವನ್ನು ಕೊನೆಯಲ್ಲಿ ಬಹಿರಂಗಪಡಿಸಲಾಗುತ್ತದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ದಕ್ಷಿಣ ಭಾರತದ ನಟಿ ಸಂಜನಾ ಗಲ್ರಾನಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ನವೆಂಬರ್ 10 ರಂದು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂಬ ಸಂದೇಶವನ್ನು ಕೂಡ ಅವರು ನೀಡಿದ್ದಾರೆ.

“ಈ ಪೇಜ್ ಸ್ಕ್ರಿಪ್ಟ್ ಮಾಡಿದ ಡ್ರಾಮಾ, ಜಾಗೃತಿಯ ವಿಡಿಯೋಗಳನ್ನು ಒಳಗೊಂಡಿದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಕಿರುಚಿತ್ರಗಳನ್ನು ಮನರಂಜನೆ, ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಮಾಡಲಾಗಿದೆ. ವಿಡಿಯೋಗಳಲ್ಲಿ ಚಿತ್ರಿಸಲಾದ ಎಲ್ಲಾ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕವಾಗಿವೆ. ಜಾಗೃತಿ ಮೂಡಿಸಲು, ಮನರಂಜನೆಗಾಗಿ ಉದ್ದೇಶಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಥರ್ಡ್ ಐ ಎಂಬ ಯೂಟ್ಯೂಬ್ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘‘ಹೀಗೂ ಆಗಬಹುದು- ಕ್ಷೌರಿಕರೊಬ್ಬರು ಮಸಾಜ್ ಮಾಡಿದಾಗ ಸಲೂನ್‌ನಲ್ಲಿ ಏನಾಯಿತು ಎಂಬುದನ್ನು ವೀಕ್ಷಿಸಿ’’ ಎಂದು ಶೀರ್ಷಿಕೆ ನೀಡಲಾಗಿದೆ. ಜೊತೆಗೆ ವಿವರಣೆಯ ಕೆಳಗೆ ಇದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಎಂದು ಬರೆಯಲಾಗಿದೆ. 3RD EYE ಎಂಬ ಯೂಟ್ಯೂಬ್ ಚಾನಲ್​ನಲ್ಲಿ ಈ ರೀತಿ ಜಾಗೃತಿಗಾಗಿ ಮಾಡಿದ ವಿಡಿಯೋಗಳು ತುಂಬಾ ಇವೆ.

ಹೀಗಾಗಿ ಕ್ಷೌರದಂಗಡಿಯಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ನೈಜ ಘಟನೆಯಲ್ಲ. ಜಾಗೃತಿಗಾಗಿ 3RD EYE ಎಂಬ ಯೂಟ್ಯೂಬ್ ಚಾನಲ್ ಮಾಡಿದ ಸ್ಕ್ರಿಪ್ಟ್ ವಿಡಿಯೋ ಆಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ