ರಸ್ತೆ ಅಪಘಾತದ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋದಲ್ಲಿ ಕೆಲವರು ರಸ್ತೆಯ ಬದಿಯಲ್ಲಿ ನಿಂತಿದ್ದು, ಮಧ್ಯದಲ್ಲಿ ಕೆಲವು ಹಳದಿ ಬಣ್ಣದ ವಸ್ತುಗಳನ್ನು ಇಡಲಾಗಿದೆ. ಅಷ್ಟರಲ್ಲಿ ಕಪ್ಪು ಬಣ್ಣದ ಕಾರೊಂದು ವೇಗವಾಗಿ ಬಂದು ರಸ್ತೆಯಲ್ಲಿ ಇಟ್ಟಿದ್ದ ವಸ್ತುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಕಾರು ನಿಯಂತ್ರಣ ತಪ್ಪಿ ಬಿದ್ದಿರುವುದನ್ನು ಕಂಡು ಅಲ್ಲಿದ್ದ ಜನರು ಪ್ರಾಣ ಉಳಿಸಿಕೊಳ್ಳಲು ಓಡಲಾರಂಭಿಸಿದ್ದಾರೆ. ಇದಾದ ನಂತರ, ಕಾರಿನ ಸುತ್ತಲೂ ಜನರ ದೊಡ್ಡ ಗುಂಪು ಸೇರುತ್ತದೆ.
ಫೇಸ್ಬುಕ್, ಇನ್ಸ್ಟಾದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಜೈಪುರದ್ದು ಎಂದು ಹೇಳಲಾಗಿದೆ. ಜೊತೆಗೆ ‘ಬಿಕನೇರಿಯ ಸಿಂಹಿಣಿ’ ಈ ರಸ್ತೆ ಅಪಘಾತಕ್ಕೆ ಬಲಿಯಾದರು ಎಂದು ಅವರ ಫೋಟೋಗಳನ್ನು ಈ ವೀಡಿಯೊದಲ್ಲಿ ಪೋಸ್ಟ್ ಮಾಡಲಾಗಿದೆ.
ಬಿಕನೇರಿಯ ಸಿಂಹಿಣಿ ಸೋನು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದು, ಅಫೀಮು ಪ್ರಚಾರ ಮಾಡಿದ ಆರೋಪದ ಮೇಲೆ ಆಗಸ್ಟ್ 2024 ರಲ್ಲಿ ಪೊಲೀಸರು ಬಂಧಿಸಿದ್ದರು. ವರದಿಗಳ ಪ್ರಕಾರ, ಈ ಮಹಿಳೆಯ ನಿಜವಾದ ಹೆಸರು ಮೋನಿಕಾ ರಾಜಪುರೋಹಿತ್.
ಸದ್ಯ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬಿಕನೇರಿಯ ಸಿಂಹಿಣಿ ಯಾವುದೇ ಅಪಘಾತಕ್ಕೆ ಬಲಿಯಾಗಿಲ್ಲ. ಅಲ್ಲದೆ, ವೈರಲ್ ಆಗುತ್ತಿರುವ ವಿಡಿಯೋ ಯಾವುದೇ ಆಕಸ್ಮಿಕವಲ್ಲ, ಇದು ಸಿನಿಮಾ ಒಂದರ ಶೂಟಿಂಗ್ನದ್ದಾಗಿದೆ.
ಹೆಸರಾಂತ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಇಂತಹ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರೆ, ಖಂಡಿತವಾಗಿಯೂ ಅದರ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಆದರೆ, ನಿಜಾಂಶವನ್ನು ಕಂಡುಹಿಡಿಯಲು ಗೂಗಲ್ ಮೂಲಕ ಕೆಲ ವರ್ಡ್ ಹಾಕಿ ಸರ್ಚ್ ಮಾಡಿದಾಗ ಅಂತಹ ಯಾವುದೇ ಸುದ್ದಿ ವರದಿ ನಮಗೆ ಕಂಡುಬಂದಿಲ್ಲ.
ಇದಾದ ನಂತರ ನಾವು ‘ಬಿಕಾನೇರ್‌ನ ಶೆರ್ನಿ ಸೋನು’ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದ್ದೇವೆ. ಡಿಸೆಂಬರ್ 3 ರಂದು, ಈ ಖಾತೆಯಿಂದ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅವರು ಗೆಳತಿಯ ಜೊತೆ ಜಿಮ್‌ನಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಡಿಸೆಂಬರ್ 4 ರಂದು, ಅವರು ತಮ್ಮ ಕಾರಿನೊಂದಿಗೆ ಪೋಸ್ ನೀಡುವ ಫೋಟೋಗಳು ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಇದರಿಂದ ಅವರು ಇತ್ತೀಚೆಗೆ ಯಾವುದೇ ರಸ್ತೆ ಅಪಘಾತಕ್ಕೆ ಬಲಿಯಾಗಿಲ್ಲ ಎಂಬುದು ಖಚಿತವಾಗಿದೆ.
ಇನ್ನು ವೈರಲ್ ವಿಡಿಯೋದ ನಿಜಾಂಶ ತಿಳಿಯಲು ನಾವು ವಿಡಿಯೊದ ಕೀಫ್ರೇಮ್‌ಗಳನ್ನು ಹಿಮ್ಮುಖವಾಗಿ ಸರ್ಚ್ ಮಾಡಿದ್ದೇವೆ. ಆಗ ನವೆಂಬರ್ 24 ರ ಪೋಸ್ಟ್‌ನಲ್ಲಿ ನಾವು ಈ ವಿಡಿಯೋವನ್ನು ಕಂಡುಕೊಂಡಿದ್ದೇವೆ. ಡಾನ್ 360 ಹೆಸರಿನ ಸಿನಿಮಾದ ಚಿತ್ರೀಕರಣದ ವಿಡಿಯೋ ಇದಾಗಿದೆ ಎಂದು ಇಲ್ಲಿ ಹೇಳಲಾಗಿದೆ.
‘ಡಾನ್ 360′, ‘ಸಿನಿಮಾ’ ಮತ್ತು ‘ಸ್ಟಂಟ್’ ಎಂಬ ಕೀವರ್ಡ್‌ಗಳನ್ನು ಗೂಗಲ್ನಲ್ಲಿ ಹುಡುಕುವ ಮೂಲಕ, ಘಟನೆಯ ವಿಭಿನ್ನ ಕೋನದ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದ ಆರಂಭದಲ್ಲಿ, ಯಾರೋ ‘ಆಕ್ಷನ್’ ಎಂದು ಹೇಳುತ್ತಾರೆ. ನಂತರ ಕಾರು ರಸ್ತೆಯಲ್ಲಿ ಚಲಿಸಲು ಪ್ರಾರಂಭಿಸುತ್ತದೆ. ಈ ಇಡೀ ಘಟನೆಯನ್ನು ಕೆಲವರು ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಪಘಾತದ ನಂತರ, ಇಲ್ಲಿದ್ದ ಜನರು ಪಲ್ಟಿಯಾದ ಕಾರನ್ನು ಸರಿಪಡಿಸುತ್ತಾರೆ ನಂತರ ಒಬ್ಬ ವ್ಯಕ್ತಿ ಆ ಕಾರಿನಿಂದ ಹೊರಬರುವುದು ಕಾಣಬಹುದು. ಇದನ್ನು ನೋಡಿದ ತಕ್ಷಣ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ.
ಇದನ್ನೂ ಓದಿ: Viral Video: ಕಾಮನಬಿಲ್ಲಿನಂತಹ ಬಣ್ಣಬಣ್ಣದ ಪರ್ವತಗಳಿರುವ ದೇಶವಿದು; ವಿಡಿಯೋ ವೈರಲ್
ಡಾನ್ 360 ಮುಂಬರುವ ತೆಲುಗು ಸಿನಿಮಾ ಆಗಿದ್ದು, ಪ್ರಿಯಾ ಹೆಗ್ಡೆ ಮತ್ತು ಭರತ್ ಕೃಷ್ಣ ನಟಿಸಿದ್ದಾರೆ. ಹೀಗಾಗಿ ವೈರಲ್ ಆಗಿರುವ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಇದು ಡಾನ್ 360 ಚಿತ್ರದ ಶೂಟಿಂಗ್‌ನದ್ದು ಎಂಬುದು ಸ್ಪಷ್ಟವಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ