Video: ನಿವೃತ್ತಿ ಹೊಂದಿದ ನೆಚ್ಚಿನ ಶಿಕ್ಷಕನಿಗೆ ಬಂಡಿ ಮೆರವಣಿಗೆ, ಹೇಗಿತ್ತು ನೋಡಿ ವಿದ್ಯಾರ್ಥಿಗಳಿಂದ ಅದ್ಧೂರಿ ಬೀಳ್ಕೊಡುಗೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 12:45 PM

ತಮ್ಮ ನೆಚ್ಚಿನ ಶಿಕ್ಷಕರು ವರ್ಗಾವಣೆಯಾದರೆ ಅಥವಾ ನಿವೃತ್ತಿಯನ್ನು ಹೊಂದಿದರೆ ವಿದಾರ್ಥಿಗಳು ಆ ಶಿಕ್ಷಕನಿಗೆ ಕಣ್ಣೀರಿನ ವಿದಾಯ ಹೇಳಿ ಬೀಳ್ಕೊಡುಗೆ ನೀಡುತ್ತಾರೆ. ಈ ರೀತಿಯ ಸಾಕಷ್ಟು ಸನ್ನಿವೇಶಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ ಇದೇ ರೀತಿಯ ವಿಡಿಯೋವೊಂದು ವೈರಲ್‌ ಆಗಿದ್ದು, ನಿವೃತ್ತಿ ಹೊಂದಿದ ಶಿಕ್ಷಕನ್ನು ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ್ದಾರೆ. ಈ ಭಾವನಾತ್ಮಕ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

Video: ನಿವೃತ್ತಿ ಹೊಂದಿದ ನೆಚ್ಚಿನ ಶಿಕ್ಷಕನಿಗೆ ಬಂಡಿ ಮೆರವಣಿಗೆ, ಹೇಗಿತ್ತು ನೋಡಿ ವಿದ್ಯಾರ್ಥಿಗಳಿಂದ ಅದ್ಧೂರಿ ಬೀಳ್ಕೊಡುಗೆ
ವೈರಲ್​​ ವಿಡಿಯೋ
Follow us on

ಶಿಕ್ಷಕರೆಂದರೆ ಪಾಠ ಬೋಧಿಸುವವರು ಮಾತ್ರವಲ್ಲ. ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರೂ ಹೌದು. ಹೀಗೆ ಪಠ್ಯದ ಜೀವನ ಮೌಲ್ಯವನ್ನು ಕಲಿಸುವ ಗುರುಗಳು ಬೇರೆ ಶಾಲೆಗೆ ವರ್ಗಾವಣೆಯಾದರೆ ಅಥವಾ ನಿವೃತ್ತಿ ಹೊಂದಿದರೆ ವಿದ್ಯಾರ್ಥಿಗಳಿಗೆ ತುಂಬಾನೇ ನೋವಾಗುತ್ತದೆ. ಹೀಗೆ ಒಲ್ಲದ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷನಿಗೆ ಕಣ್ಣೀರ ವಿದಾಯ ಹೇಳಿ ಬೀಳ್ಕೊಡುತ್ತಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸುಂದರ ಬಂಧದ ಇಂತಹ ಭಾವನಾತ್ಮಕ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಈ ಹಿಂದೆಯೂ ವೈರಲ್‌ ಆಗಿತ್ತು. ಇದೀಗ ಅಂತಹದೇ ವಿಡಿಯೋವೊಂದು ಹರಿದಾಡುತ್ತಿದ್ದು, ನಿವೃತ್ತಿ ಹೊಂದಿದ ಶಿಕ್ಷಕನ್ನು ಬಂಡಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಶಿಕ್ಷಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ್ದಾರೆ.

ಈ ಘಟನೆ ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ದುಗ್ಗೊಂಡಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ್ದಾರೆ. ಈ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜನಾರ್ಧನ್‌ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದವರು. ಇದೀಗ ಅವರು ನಿವೃತ್ತಿಯನ್ನು ಹೊಂದಿದ್ದು, ಪ್ರೀತಿಯ ಶಿಕ್ಷಕನನ್ನು ಅದ್ಧೂರಿಯಾಗಿ ಬೀಳ್ಕೊಡಬೇಕೆಂದು ವಿದ್ಯಾರ್ಥಿಗಳು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಅದ್ಧೂರಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ಪೋಸ್ಟ್ ಸುಧಾಕರ್‌ (sudhakarudumula) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ನಿವೃತ್ತಿ ಹೊಂದಿದ ಶಿಕ್ಷಕನನ್ನು ಬಂಡಿಯ ಮೇಲೆ ಕೂರಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಿದ ಹಾಗೂ ನೆಚ್ಚಿನ ಶಿಕ್ಷಕನಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರೈಲ್ವೆ ಹಳಿಯ ಮೇಲೆ ಸೈಕಲ್‌, ಸಿಲಿಂಡರ್ ಇಟ್ಟು ವಿಡಿಯೋ ಮಾಡಿದ ಯೂಟ್ಯೂಬರ್, ಲೈಕ್ಸ್‌, ವೀವ್ಸ್‌ಗಾಗಿ ಜನರ ಜೀವದ ಜತೆ ಚೆಲ್ಲಾಟ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ದೃಶ್ಯ ಕಾಣ ಸಿಗುವುದು ಬಹಳ ಅಪರೂಪʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೆಚ್ಚಿನ ಶಿಕ್ಷಕನಿಗೆ ವಿದ್ಯಾರ್ಥಿಗಳ ಈ ಬೀಳ್ಕೊಡುಗೆ ಸಮಾರಂಭ ನಿಜಕ್ಕೂ ಹೃಯಸ್ಪರ್ಶಿಯಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ