ತಾಯಿಯ ಪ್ರೀತಿಯೇ ಹಾಗೆ, ಯಾರದ್ದೇ ಮಗು ಆಗಿರಲಿ, ಮಗುವು ಹಸಿವಿನಿಂದ ಬಳಲುತ್ತಿದೆ ಎಂದರೆ ತಾಯಿ ಕರುಳು ಸುಮ್ಮನೆ ಇರಲ್ಲ. ಅನಾಥ ಮಗುವು ಹಸಿವಿನಿಂದ ಅಳುವುದನ್ನು ಕಂಡು ಮಹಿಳಾ ಪೊಲೀಸ್ ಪೇದೆಯ ಹೃದಯವು ಮಿಡಿದಿದೆ. ಹೌದು, ಮಹಿಳಾ ಪೊಲೀಸ್ ಪೇದೆ ಯೋಗಿತಾ ಶಿವಾಜಿ ದುಕ್ರೆಯವರು ಹಸಿವಿನಿಂದ ಬಳಲುತ್ತಿದ್ದ ಮಗುವಿಗೆ ಹಾಲುಣಿಸಿದ್ದಾರೆ.
ಬುಲ್ಧಾನಾದ ಲೋನಾರ್‌ನಲ್ಲಿರುವ ಅನಾಥಾಶ್ರಮಕ್ಕೆ ಮಹಿಳೆಯೊಬ್ಬರು ಒಂದು ದಿನದ ಮಗುವಿನೊಂದಿಗೆ ಬಂದಿದ್ದರು. ಈ ಹೆಣ್ಣು ಮಗುವನ್ನು ಅನಾಥಶ್ರಮಕ್ಕೆ ಸೇರಿಸುವಂತೆ ಮಹಿಳೆಯು ವಿನಂತಿಸಿದ್ದಾಳೆ. ಆದರೆ ಮೊದಲು ಠಾಣೆಗೆ ತೆರಳಿ ದೂರು ನೀಡಿ, ಬಳಿಕ ಪೊಲೀಸರ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅನಾಥಾಶ್ರಮದ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ. ಆ ಬಳಿಕ ಮಹಿಳೆ ಬುಲ್ಧಾನಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆಯಲ್ಲಿ ನಾನು ಬೆಳಿಗ್ಗೆಯಿಂದ ಈ ಒಂದು ದಿನದ ಮಗುವಿನಿಂದ ಅಲೆದಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.
ಆದರೆ ಆ ಮಗುವು ಹಸಿವಿನಿಂದ ಅಳುತ್ತಿದ್ದು, ಇದನ್ನು ಬುಲ್ಧಾನಾ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರು ಮಗುವು ಅಳುವುದನ್ನು ಗಮನಿಸಿದ್ದಾರೆ. ಈ ವೇಳೆಯಲ್ಲಿ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರಿಗೆ ತನ್ನ ಒಂದೂವರೆ ವರ್ಷದ ಮಗನ ನೆನಪಾಗಿದೆ. ಆ ತಕ್ಷಣವೇ ಎಲ್ಲರ ಅನುಮತಿ ಪಡೆದು ಹಸಿವಿನಿಂದ ಅಳುತ್ತಿರುವ ಮಗುವಿಗೆ ಹಾಲುಣಿಸಿ ಸಮಾಧಾನಪಡಿಸಿದ್ದಾರೆ.
ಇದನ್ನೂ ಓದಿ: ಭಿಕ್ಷೆ ಬೇಡುವ ಹುಡುಗಿಯ ಇಂಗ್ಲಿಷ್ಗೆ ವಿದೇಶಿಗ ಫುಲ್ ಫಿದಾ, ವಿಡಿಯೋ ವೈರಲ್
ಮಗುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಹೆಣ್ಣು ಮಗುವು ಆರೋಗ್ಯವಾಗಿದ್ದಾಳೆ. ತೂಕ ಕಡಿಮೆ ಇರುವ ಕಾರಣ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಭಗವತ್ ಭೂಸಾರಿ ಮಾಹಿತಿ ನೀಡಿದ್ದಾರೆ. ಈ ಮಹಿಳಾ ಪೊಲೀಸ್ ಪೇದೆ ಯೋಗಿತಾ ದುಕ್ರೆಯವರ ಈ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ