Trending : ಆಸ್ಟ್ರೇಲಿಯಾದ ಈ ನಾಲ್ಕು ವರ್ಷದ ಮಗು ತನ್ನ ತಾಯಿಯ ಆರೋಗ್ಯ ಏರುಪೇರಾಗುವುದನ್ನು ಕಂಡಾಗ ಗಾಬರಿಗೆ ಒಳಗಾಗದೆ, ತುರ್ತು ನಂಬರಿಗೆ ಕರೆ ಮಾಡಿ ಆಕೆಯ ಜೀವ ಉಳಿಸಿದೆ. ಈ ಘಟನೆ ಸಂಭವಿಸುವ ಹಿಂದಿನ ದಿನವೇ ಮಗುವಿನ ತಾಯಿ ತುರ್ತು ನಂಬರಿಗೆ ಯಾಕೆ, ಯಾವಾಗ ಕರೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದನ್ನು ಕಲಿಸಿದ್ದರು. ಕಾಕತಾಳೀಯವೆಂಬಂತೆ ಈ ಘಟನೆ ನಡೆದಿದೆ. ಮಗುವಿನ ಕರೆಗೆ ಸ್ಪಂದಿಸಿದ ಆ್ಯಂಬುಲೆನ್ಸ್ ಟ್ಯಾಸ್ಮೇನಿಯಾ ಈ ವಿಶೇಷ ಘಟನೆಯನ್ನು ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಜೊತೆಗೆ ಈ ಮಗುವಿನ ಆಡಿಯೋ ರೆಕಾರ್ಡಿಂಗ್ ಅನ್ನೂ.
ಹಸಿ ಗೋಡೆಯಲ್ಲಿ ಹಳ್ಳ ಒಗೆದಂತೆ ಮಕ್ಕಳು. ಎಳವೆಯಲ್ಲಿ ಏನು ಕಲಿಸುತ್ತೇವೋ ಅದನ್ನೆ ಪಟ್ಟನೆ ಹಿಡಿದುಕೊಂಡು ಬಿಡುತ್ತವೆ. ಆಸ್ಟ್ರೇಲಿಯದಲ್ಲಿರುವ ನಾಲ್ಕರ ಈ ಪೋರ ಮಾಂಟಿ ಕೂಡ ಅಷ್ಟೇ. ಹಿಂದಿನ ದಿನವಷ್ಟೇ ಇವನ ತಾಯಿ ತುರ್ತು ಕರೆಯ ಪ್ರಾಮುಖ್ಯತೆ ಕುರಿತು ತಿಳಿಸಿದ್ದಾರೆ. ಆದರೆ, ಮಾರನೇ ದಿನವೇ ಇವನ ತಾಯಿ ಮನೆಯೊಳಗೆ ತಲೆತಿರುಗಿ ಬಿದ್ದಿದ್ದಾರೆ. ತಕ್ಷಣವೇ ಆ್ಯಂಬುಲೆನ್ಸ್ ಟ್ಯಾಸ್ಮೇನಿಯಾಗೆ ಫೋನ್ ಮಾಡಿದ ಈ ಪೋರ, ‘ಮಮ್ಮಿ ತಲೆತಿರುಗಿ ಬಿದ್ದಿದ್ದಾರೆ’ ಎಂದು ತುರ್ತುಸೇವಾ ಸಿಬ್ಬಂದಿಗೆ ತಿಳಿಸಿದ್ದಾನೆ.
ಮಾಂಟಿಗೆ ಅಗತ್ಯ ಸಲಹೆಗಳನ್ನು ಕೊಟ್ಟ ಸಿಬ್ಬಂದಿ ನಂತರ ವೈದ್ಯರನ್ನು ಮನೆಗೆ ಕಳಿಸಿದೆ. ಮಾಂಟಿಯ ಸಮಾಧಾನ ಚಿತ್ತ, ಸಮಯಪ್ರಜ್ಞೆಗೆ ಬಂದ ವೈದ್ಯರು ಮಾರುಹೋಗಿದ್ದಾರೆ. ಫೇಸ್ಬುಕ್ನಲ್ಲಿ ಈ ಆಡಿಯೋ ಕ್ಲಿಪ್ ಹಾಕಿದ ನಂತರ ನೆಟ್ಟಿಗರು ಮಾಂಟಿ ಕೇವಲ ಹೀರೋ ಅಲ್ಲ, ಸೂಪರ್ ಹೀರೋ! ಎಂದು ಹಾರೈಸಿ ಖುಷಿಪಟ್ಟಿದ್ದಾರೆ.
‘ನನ್ನನ್ನು ಉಳಿಸಿದ ನನ್ನ ಮಗನ ಬಗ್ಗೆ ತುಂಬಾ ಹೆಮ್ಮ ಇದೆ. ಅವ ನನ್ನ ಪುಟ್ಟ ಹೀರೋ.’ ಎಂದ ಅವನ ತಾಯಿ ವೆಂಡಿ ಹೇಳಿದ್ದಾರೆ. ತನ್ನ ಅಮ್ಮನನ್ನು ನೋಡಿಕೊಳ್ಳಲು ನೇಮಿಸಿದ್ದ ನರ್ಸ್ಗೆ, ತುರ್ತು ಸಂದರ್ಭದಲ್ಲಿ ಫೋನ್ ಅನ್ಲಾಕ್ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾನೆ. ಮಾಂಟಿಯ ಧೈರ್ಯಕ್ಕಾಗಿ ಪ್ರಶಂಸಾ ಪ್ರಮಾಣಪತ್ರವನ್ನು ತುರ್ತು ಸೇವಾ ಸಂಸ್ಥೆಯು ನೀಡಿದೆ.
ಈ ಪೋಸ್ಟ್ಗೆ ನೂರಾರು ಜನರು ಮೆಚ್ಚುಗೆಯಿಂದ ಪ್ರತಿಕ್ರಿಯಿಸಿದ್ದಾರೆ. ‘ಎಂಥಾ ಅದ್ಭುತ! ಒಳ್ಳೆಯ ಕೆಲಸ ಮಾಡಿದ್ದೀ ಮಾಂಟಿ. ನಿಜಕ್ಕೂ ನೀನು ಹೀರೋ’ ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಜಾಣ ಮಾಂಟಿ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ‘ನಿನ್ನ ಅಮ್ಮನ ಜೀವ ಉಳಿಸಿದ್ದೀಯಾ, ನನಗೆ ಖುಷಿಯಾಯ್ತು ಇದರಿಂದ’ ಎಂದಿದ್ದಾರೆ ಮತ್ತೊಬ್ಬರು.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:20 pm, Thu, 8 September 22