ಮಗಳು ಹುಟ್ಟಿದ್ದಕ್ಕೆ ಉಚಿತವಾಗಿ ಗೋಲ್ಗಪ್ಪ ಹಂಚಿದ ಈ ಅಪ್ಪ

| Updated By: ಶ್ರೀದೇವಿ ಕಳಸದ

Updated on: Nov 25, 2022 | 3:37 PM

Madhyapradesh : ಆ ದಿನ ಸುಮಾರು 4,000 ಗೋಲ್ಗಪ್ಪ ಹಂಚಿದ್ದಾರೆ ಮಧ್ಯಪ್ರದೇಶದ ಗೋಲ್ಗಪ್ಪಾವಾಲಾ ಸಂಜಿತ್. ನಿಮ್ಮ ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ ಹೇಗೆ ಸಂಭ್ರಮಿಸುತ್ತೀರಿ ಅಥವಾ ಸಂಭ್ರಮಿಸಿದ್ದೀರಿ? ಹಂಚಿಕೊಳ್ಳಬಹುದಾ?

ಮಗಳು ಹುಟ್ಟಿದ್ದಕ್ಕೆ ಉಚಿತವಾಗಿ ಗೋಲ್ಗಪ್ಪ ಹಂಚಿದ ಈ ಅಪ್ಪ
ಮಗಳು ಹುಟ್ಟಿದ್ದಕ್ಕೆ ಉಚಿತವಾಗಿ ಗೋಲ್ಗಪ್ಪಾ ಹಂಚಿದ್ದ ಈ ಅಪ್ಪ
Follow us on

Viral Video : ಮಗಳು ಹುಟ್ಟಿದ್ದಕ್ಕೆ ಮಧ್ಯಪ್ರದೇಶದ ಗೋಲ್ಗಪ್ಪವಾಲಾ ಸಂಜಿತ್ ಚಂದ್ರವಂಶಿ ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಆ ದಿನ ತನ್ನ ತಳ್ಳುಗಾಡಿಯ ಅಂಗಡಿಗೆ ಬರುವ ಜನರಿಗೆಲ್ಲ ಉಚಿತವಾಗಿ ಗೋಲ್ಗಪ್ಪ ಹಂಚಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಗಂಡುಮಗು ಹುಟ್ಟಿದರೆ ಜನ ಸಂಭ್ರಮಿಸುತ್ತಾರೆ, ಆದರೆ ಹೆಣ್ಣುಮಗು ಹುಟ್ಟಿದ್ದಕ್ಕೆ ಹೀಗೆ ಸಂಭ್ರಮಿಸುವವರನ್ನ ನೋಡಿರುವುದು ಕಡಿಮೆ. ಇಂಥವರ ಸಂತತಿ ಹೆಚ್ಚಲಿ ಎನ್ನುತ್ತಿದ್ದಾರೆ.

ಹೆಣ್ಣು! ಎಂದತಕ್ಷಣ ಗರ್ಭದಲ್ಲಿಯೇ ಅದನ್ನು ಕತ್ತುಹಿಸುಕುವ ಸಾಕಷ್ಟು ಸ್ವಾರ್ಥ ಜನರು ನಮ್ಮ ಸುತ್ತಮುತ್ತಲಿದ್ದಾರೆ. ಇಂಥ ಸಂದರ್ಭದಲ್ಲಿ ನರಸ್ಲಾ ಗ್ರಾಮದ ಗೋಲ್ಗಪ್ಪವಾಲಾ ಸಂಜಿತ್​ ಅವರ ನಡೆ ಮಾತ್ರ ವಿಶೇಷ ಮತ್ತು ಆದರ್ಶನೀಯ. ದಿನವೂ ಇವರು ಪೋಲಾ ಮೈದಾನದ ಬಳಿ ತಮ್ಮ ತಳ್ಳುಗಾಡಿಯ ಮೇಲೆ ಗೋಲ್ಗಪ್ಪ ಮಾರಾಟ ಮಾಡುತ್ತಾರೆ. ಆದರೆ ಆ ದಿನ ಇವರು ಉಚಿತವಾಗಿ ಗೋಲ್ಗಪ್ಪ ಹಂಚುತ್ತಿದ್ದರು. ಜನರೆಲ್ಲ ಮುಗಿಬಿದ್ದು ಗೋಲ್ಗಪ್ಪ ತಿನ್ನುತ್ತಿದ್ದರು. ಏನಿಲ್ಲವೆಂದರೂ ಸುಮಾರು 4,000 ಗೋಲ್ಗಪ್ಪಗಳನ್ನು ಇವರು ಆ ದಿನ ಬಂದವರಿಗೆಲ್ಲ ಹಂಚಿ ಸಂಭ್ರಮಿಸಿದರು.

ಸಂಜಿತ್​ ಮನೆತನದಲ್ಲಿ ಹುಟ್ಟಿದ ಮೊದಲ ಹೆಣ್ಣುಮಗು ಎಂಬ ಖುಷಿ ಇದಕ್ಕೆ ಕಾರಣವಾಗಿತ್ತು. ‘ನನಗೆ ಮೂರು ಜನ ಸಹೋದರರಿದ್ದಾರೆ. ಮನೆಯಲ್ಲಿ ಒಂದಾದರೂ ಹೆಣ್ಣಮಗು ಬೇಕು ಎಂಬ ಆಸೆ ಬಹಳದಿನಗಳಿಂದ ಇತ್ತು. ನನ್ನ ಹೆಂಡತಿ ಇದೀಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಗು ನಮ್ಮ ಕುಟುಂಬಕ್ಕೆ ದೊಡ್ಡ ಬೆಳಕಿದ್ದಂತೆ. ಹಾಗಾಗಿ ಹೀಗೆ ನಮ್ಮ ಖುಷಿಯನ್ನು ಹಂಚಿಕೊಂಡೆವು’ ಎಂದಿದ್ದಾರೆ.

ಗೋಲ್ಗಪ್ಪ ತಿನ್ನಲು ಬಂದಿದ್ದ ವಿದ್ಯಾರ್ಥಿನಿ ಆರತಿ ಸಾಹು, ‘ಹೆಣ್ಣೆಂದರೆ ಇಂದಿನ ಕಾಲದಲ್ಲಿಯೂ ಹೊರೆ ಎಂಬಂತೆ ನೋಡುತ್ತಾರೆ. ಆದರೆ ಸಂಜಿತಣ್ಣ ಹೆಣ್ಣು ಹುಟ್ಟಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ. ಇವರ ಈ ನಡೆ ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಭರವಸೆಯನ್ನು ಕೊಡುತ್ತಿದೆ’ ಎಂದಿದ್ದಾಳೆ.

ನಿಮ್ಮ ಮನೆಯಲ್ಲಿ ಹೆಣ್ಣು ಹುಟ್ಟಿದರೆ ನೀವೇನು ಮಾಡುತ್ತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:30 pm, Fri, 25 November 22