ಬಹಳಷ್ಟು ಬಾರಿ ಹೀಗೇನೋ ಆಗಿಬಿಡಬಹುದು ಎಂದು ನಾವು ಅಂದುಕೊಂಡೇ ಇರುವುದಿಲ್ಲ. ವಿಶೇಷವಾದದ್ದು ಏನೋ ಆಗಿಬಿಡುತ್ತದೆ. ಅದು ಒಳ್ಳೆಯದೂ ಆಗಿರಬಹುದು. ಕೆಟ್ಟದ್ದೂ ಆಗಿರಬಹುದು. ಅಪಾಯವನ್ನು ಕೂಡ ತಂದೊಡ್ಡಬಲ್ಲದು. ತಮಾಷೆಗೆ ಅಥವಾ ಮನರಂಜನೆಗೆ ಏನೋ ಮಾಡಲು ಹೋಗಿ ಇನ್ನೇನೋ ಆಗಬಹುದು. ಹಾಗಾಗಿ, ಯಾವತ್ತೂ ನಾವು ಜಾಗರೂಕರಾಗಿ, ಎಚ್ಚರದಿಂದಲೇ ನಡೆದುಕೊಳ್ಳುವುದು ಉತ್ತಮ. ತಮಾಷೆಗೆ ಏನಾದರೂ ಮಾಡಿದರೂ ಪ್ರಜ್ಞೆ ಇರಬೇಕು.
ವಿಶೇಷವಾಗಿ ಪ್ರಾಣಿಗಳ ಜೊತೆಗಿರುವಾಗ ಈ ಎಚ್ಚರ ಅತ್ಯಗತ್ಯ. ಯಾಕೆಂದರೆ, ಪ್ರಾಣಿಯೊಂದರ ತಲೆಯಲ್ಲಿ ಏನು ಓಡುತ್ತಿದೆ ಮತ್ತು ಅದು ಏನು ಮಾಡಬಲ್ಲದು ಎಂದು ನಾವು ಊಹಿಸಲು ಸಾಧ್ಯವಿಲ್ಲ. ಸಾಧು ಪ್ರಾಣಿ ಅಥವಾ ಸಾಕು ಪ್ರಾಣಿ ಕೂಡ ಅಚಾನಕ್ ಆಗಿ ಊಹಿಸಲಾಗದಂತೆ ನಡೆದುಕೊಳ್ಳಬಹುದು. ಹಾಗಾಗಿ ಎಲ್ಲಾ ಬಾರಿಯೂ ಜಾಗ್ರತೆಯಿಂದಲೇ ಪ್ರಾಣಿಗಳೊಂದಿಗೆ ತಮಾಷೆ ಮಾಡಬೇಕು.
ಅಂಥಾ ಸಂದರ್ಭದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂದೆ-ತಾಯಿಯ ಜೊತೆಗೆ ಇರುವಾಗಲೇ ಜಿರಾಫೆಯೊಂದು ಮಗುವನ್ನು ಎತ್ತಿ ನೇತಾಡಿಸಿದೆ. ಇನ್ನೇನು ಗಾಳಿಯಲ್ಲಿ ಹಾರುತ್ತಾನೆ ಹುಡುಗ ಎಂಬಾಗ ಹೆತ್ತವರು ಅವನನ್ನು ಹಿಡಿದು ಎಳೆದು ಕೆಳಗೆ ಇಳಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಂತೆ, ಒಬ್ಬ ಹುಡುಗ ತನ್ನ ತಂದೆ ಮತ್ತು ತಾಯಿ ಜೊತೆಗೆ ಜಿರಾಫೆ ಮುಂಭಾಗದಲ್ಲಿ ನಿಂತುಕೊಂಡಿದ್ದಾನೆ. ಅದರಲ್ಲಿ ಕಾಣುವಂತೆ, ಆ ಹುಡುಗ ಜಿರಾಫೆಗೆ ಎಲೆಯೊಂದನ್ನು ತಿನ್ನಿಸಲು ಹೊರಟಿದ್ದಾನೆ. ಆತ ಜಿರಾಫೆಗೆ ಆಹಾರ ಕೊಡಲು ಮುಂದಾಗಿದ್ದು ಎಲೆಯನ್ನು ಜಿರಾಫೆಯ ಬಾಯಿಗೆ ಒಡ್ಡಿದ್ದಾನೆ. ಆಗ ಜಿರಾಫೆ ಎಲೆಯನ್ನು ಕಚ್ಚಿ ಹಿಡಿದು ಎಳೆದಿದೆ. ಮಗು ಕೂಡ ಎಲೆಯನ್ನು ಹಿಡಿದು ಎತ್ತಿದ ರಭಸಕ್ಕೆ ಗಾಳಿಯಲ್ಲಿ ತೇಲುವಂತಾಗಿದೆ. ಆಗ ಭಯಗೊಂಡ ಹೆತ್ತವರು ಮಗುವನ್ನು ಹಿಡಿದು ಎಳೆದು ಕೆಳಗಿಳಿಸಿದ್ದಾರೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜನರು ವಿವಿಧ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ಹೇಳುತ್ತಿದ್ದಾರೆ. ಪ್ರಾಣಿಗಳ ಜೊತೆಗೆ ಎಷ್ಟು ಜಾಗರೂಕರಾಗಿ ಇದ್ದರೂ ಸಾಲದು ಎಂದು ಕೆಲವರು ಹೇಳಿದ್ದಾರೆ. ಅದೇ ವೇಳೆ, ಮಗುವಿನ ಹೆತ್ತವರ ಬಗ್ಗೆ ಕೂಡ ಜನರು ಕಮೆಂಟ್ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Man Chews Snake: ಕೊರೊನಾಗೆ ಔಷಧ ಎಂದು ಸತ್ತ ಹಾವನ್ನೇ ಜಗಿದ ಭೂಪ!
Published On - 8:04 pm, Fri, 28 May 21