ಫೋಟೋ ಕೇಳಿದ್ದಕ್ಕೆ ‘ಬಂಗಾರ’ದ ಬಳೆಯನ್ನೇ ಕೊಟ್ಟ ಹುಡುಗಿ: ಮೆಟ್ರೋದಲ್ಲೊಂದು ಹೃದಯಸ್ಪರ್ಶಿ ಘಟನೆ

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದ ಹೃದಯ ಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳೆಯನ್ನು ಇಷ್ಟಪಟ್ಟ ಸಹ-ಪ್ರಯಾಣಿಕಳಿಗೆ ಹುಡುಗಿಯೊಬ್ಬಳು ತನ್ನ ಬಳೆಯನ್ನೇ ನೀಡಿರುವ ಘಟನೆ ನಡೆದಿದೆ. ಮಹಿಳೆ ಈ ಸನ್ನಿವೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಹುಡುಗಿಯ ದಯಾಗುಣಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಫೋಟೋ ಕೇಳಿದ್ದಕ್ಕೆ ಬಂಗಾರದ ಬಳೆಯನ್ನೇ ಕೊಟ್ಟ ಹುಡುಗಿ: ಮೆಟ್ರೋದಲ್ಲೊಂದು ಹೃದಯಸ್ಪರ್ಶಿ ಘಟನೆ
ಹುಡುಗಿ ನೀಡಿರುವ ಬಳೆ

Updated on: Jan 16, 2026 | 8:02 PM

ಬೆಂಗಳೂರು, ಜನವರಿ 16: ನೂಕು ನುಗ್ಗಲು, ಕೆಲ ಪ್ರಯಾಣಿಕರ ಅಸಂಮಜಸ ವರ್ತನೆಯಂತಯ ವಿಷಯಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಬೆಂಗಳೂರಿನ ನಮ್ಮ ಮೆಟ್ರೋವೀಗ ಹೃದಯ ಸ್ಪರ್ಶಿ ಘಟನೆಯೊಂದರ ಕಾರಣಕ್ಕೆ ಸೋಶಿಯಲ್​​ ಮೀಡಿಯಾಗಳಲ್ಲಿ ಟ್ರೆಂಡಿಂಗ್​​ನಲ್ಲಿದೆ. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಬ್ಯಾಂಗಲ್​​ ಫೋಟೋ ಕೇಳಿದ್ದಕ್ಕೆ ಹುಡುಗಿಯೊಬ್ಬಳು ಬಳೆಯನ್ನೇ ನೀಡಿರುವ ಘಟನೆ ನಡೆದಿದ್ದು, ಈ ಕುರಿತು ಮಹಿಳೆ ಮಾಡಿರುವ ಪೋಸ್ಟ್​​ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಕಿಯ ನಡೆಯನ್ನು ಹಲವರು ಕೊಂಡಾಂಡಿದ್ದಾರೆ.

ಮಹಿಳೆಯ ಪೋಸ್ಟ್​​ನಲ್ಲಿ ಏನಿದೆ?


ಮೆಟ್ರೋ ಪ್ರಯಾಣದ ವೇಳೆ ನನ್ನ ಪಕ್ಕವೇ ಕುಳಿತಿದ್ದ ಹುಡುಗಿಯ ಕೈನಲ್ಲಿ ಚಿನ್ನದ ಬಳೆಗಳನ್ನು ಗಮನಿಸಿದೆ. ಅದು ನನಗೆ ಬಹಳ ಇಷ್ಟವಾದ ಕಾರಣ, ಅಂತಹುದ್ದೇ ಬಳೆಯನ್ನು ಮಾಡಿಸಿಕೊಳ್ಳಲು ಅದರ ಫೋಟೋ ತೆಗೆದುಕೊಳ್ಳಬಹುದೇ ಎಂದು ಆಕೆಯನ್ನು ಕೇಳಿದ್ದಷ್ಟೇ. ಆಕೆ ತನ್ನ ಕೈಗಳಲ್ಲಿದ್ದ ಬಳೆಯನ್ನೇ ತೆಗೆದು ನನಗೆ ನೀಡಿದಳು. ಇದರ ವಿನ್ಯಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅಕ್ಕಸಾಲಿಗನಿಗೆ ಇದು ನೆರವಾಗಬಹುದು ಎಂದಳು. ಅವಳ ನಡೆಯಿಂದ ನಾನು ಆಶ್ಚರ್ಯಕ್ಕೆ ಒಳಗಾದೆ. ಈ ವೇಳೆಗೆ, ಇದು ಬಂಗಾರದ ಬಳೆಯಲ್ಲ ಎಂದು ನಕ್ಕು ಆಕೆ ತಿಳಿಸಿದಳು. ಆಕೆಗಿರುವ ದಯಾ ಗುಣದ ನೆನಪಿಗಾಗಿ ಆ ಬಳೆಯನ್ನು ನಾನು ಸ್ವೀಕರಿಸಿದೆ. ಮೆಟ್ರೋದಲ್ಲಿನ ಎಲ್ಲ ಸನ್ನಿವೇಶಗಳೂ ಕೆಟ್ಟದಾಗಿರಲ್ಲ. ಕೆಲವು ಬಹಳ ಸುಂದರವಾಗಿರುತ್ತವೆ ಎಂದು ಮಹಿಳೆ ಬರೆದುಕೊಂಡಿದ್ದಾರೆ. ಪೋಸ್ಟ್​​ ಜೊತೆಗೆ ಬಳೆಯ ಫೋಟೋವನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಕಂಪನಿಯಲ್ಲಿ 1 ವರ್ಷ ಅನುಭವ ಇರುವವರಿಗೆ 35 ಲಕ್ಷದ ಪ್ಯಾಕೇಜ್? 5 ವರ್ಷ ದುಡಿದವರಿಗೆ ಮರ್ಯಾದೆಯೇ ಇಲ್ಲ

ಇನ್ನು ಮಹಿಳೆ ಮಾಡಿರುವ ಈ ಪೋಸ್ಟ್​​ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಅಭಿಪ್ರಾಯಗಳು, ಮೆಚ್ಚುಗೆಗಳು ವ್ಯಕ್ತವಾಗಿವೆ. ಈ ಪೋಸ್ಟ್ ನನ್ನ ಮುಖದಲ್ಲಿ ನಗು ತರಿಸಿದೆ. ಆ ಹುಡುಗಿ ತುಂಬಾ ಒಳ್ಳೆಯ ಮನಸ್ಸಿನವಳು ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಇಂದು ಇಂಟರ್ನೆಟ್‌ನಲ್ಲಿ ನೋಡಿದ ಅತ್ಯುತ್ತಮ ವಿಷಯ ಇದು ಎಂದು ಮತ್ತೊಬ್ಬರು ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:58 pm, Fri, 16 January 26