GWR : ಗಿನ್ನೀಸ್ ದಾಖಲೆ ಮಾಡಿರುವವರ ಕೌಶಲ, ಸಾಹಸ ಮತ್ತು ಚಟುವಟಿಕೆಗಳನ್ನು ಗಮನಿಸಿದರೆ ಅಬ್ಬಬ್ಬಾ ಎನ್ನಿಸುವುದುಂಟು. ಖಂಡಿತ ಇವೆಲ್ಲ ಸಾಮಾನ್ಯರಿಂದ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಚ್ಚರಿ, ಆತಂಕ ಹುಟ್ಟಿಸುತ್ತವೆ. ಇತ್ತೀಚೆಗಷ್ಟೇ ಜೀವಕ್ಕೆ ಅಪಾಯಕಾರಿ ಎನ್ನಿಸಿದ ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ಪಟ್ಟಿಯಿಂದ ಕೈಬಿಟ್ಟ ಸುದ್ದಿಯನ್ನು ಓದಿದ್ದಿರಿ. ವಿಚಿತ್ರ ಕೌಶಲದಲ್ಲಿ ಗಿನ್ನೀಸ್ ವಿಶ್ವ ದಾಖಲೆ ಮಾಡಿರುವ 33 ವರ್ಷದ ಅಮೆರಿಕದ ಕಿಂಬರ್ಲಿ ವಿಂಟರ್ (Kimberly Winter) ಸುದ್ದಿಯಲ್ಲಿರುವುದು ಏಕೆ ಎಂದು ಓದಿ ಮತ್ತು ನೋಡಿ. ಇವರು ಅತೀ ದೊಡ್ಡ ಪ್ರಮಾಣದಲ್ಲಿ ತೇಗಿನ (Burp) ಶಬ್ದವನ್ನು ಹೊರಡಿಸುವಲ್ಲಿ ದಾಖಲೆ ಮಾಡಿದ್ದಾರೆ. ಈಕೆ ತೆಗೆದ ತೇಗಿನ ಶಬ್ದ 107.3 ಡೆಲಿಬಲ್, ಅಂದರೆ ದ್ವಿಚಕ್ರವಾಹನದ ಸದ್ದಿಗೆ ಸಮವಾಗಿತ್ತು.
2009ರಲ್ಲಿ ಇಟಲಿಯ ಎಲಿಸಾ ಕಾಗ್ನೋನಿ 107 ಡೆಸಿಬಲ್ ಪ್ರಮಾಣದಲ್ಲಿ ತೇಗು ತೆಗೆದು ದಾಖಲೆ ನಿರ್ಮಿಸಿದ್ದರು. ಕಿಂಬರ್ಲಿ ಈಗ 107.3 ಡೆಸಿಬಲ್ ಪ್ರಮಾಣದ ತೇಗು ಹೊರಡಿಸಿ ಆಕೆಯ ದಾಖಲೆಯನ್ನು ಮುರಿದು ವಿಶ್ವದ ಗಮನ ಸೆಳೆದಿದ್ದಾರೆ. ವಿಂಟರ್, ರೆಕಾರ್ಡಿಂಗ್ ರೂಮಿನಲ್ಲಿ ಮೈಕ್ರೋಫೋನ್ನಿಂದ 2.5 ಮೀಟರ್ ದೂರದಲ್ಲಿ ನಿಂತು ತೇಗಿನ ಧ್ವನಿಯನ್ನು ರೆಕಾರ್ಡ್ ಮಾಡಿದ್ದಾರೆ. 2021ರಲ್ಲಿ ಪುರುಷರ ವಿಭಾಗದಲ್ಲಿ ಗಿನ್ನೀಸ್ ದಾಖಲೆ ಮಾಡಿದ ಆಸ್ಟ್ರೇಲಿಯಾದ ನೆವಿಲ್ಲೆ 112.4 ಡೆಸಿಬಲ್ ತೇಗುಶಬ್ದ ಹೊರಡಿಸಿದ್ದರು. ಆ ಧ್ವನಿ ಎಲೆಕ್ಟ್ರಿಕ್ ಡ್ರಿಲ್ ಅಥವಾ ಟ್ರಂಬೋನ್ಗಿಂತ ಜೋರಾಗಿ ಇತ್ತು. ಈ ಕೆಳಗಿನ ವಿಡಿಯೋದಲ್ಲಿ ಗಮನಿಸಿ.
NEW: The record for the loudest burp has been beaten for the first time in over 10 years ? pic.twitter.com/b9rqVBog7T
— Guinness World Records (@GWR) November 30, 2021
ಮಹಿಳೆಯರ ವಿಭಾಗದಲ್ಲಿ ದಾಖಲೆ ಮುರಿದ ವಿಂಟರ್ ಕಾಫಿ, ಬಿಯರ್, ಬೆಳಗಿನ ಉಪಹಾರ ಸೇವಿಸಿ ದೊಡ್ಡ ಪ್ರಮಾಣದಲ್ಲಿ ತೇಗಿನ ಶಬ್ದ ಹೊರಡಿಸಿ ಹಳೆಯ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಬ್ದ ಜೋರಾಗಿ ಹೊಮ್ಮಲು ಆಕೆ ಮೊದಲು ಆಳವಾಗಿ ಉಸಿರು ತೆಗೆದುಕೊಂಡು ನಂತರ ಕೌಶಲದಿಂದ ತೇಗನ್ನು ಹೊಮ್ಮಿಸುವುದಾಗಿ ಹೇಳಿದ್ದಾರೆ. ಹೀಗೆ ಜೋರಾಗಿ ತೇಗು ತೆಗೆಯುವ ಹುಚ್ಚು ಈಕೆಗೆ ಬಾಲ್ಯದಿಂದಲೇ ಇತ್ತು. ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈಕೆ ತನ್ನ ಈ ಕೌಶಲವನ್ನು ಪ್ರಚುರಪಡಿಸಿಕೊಳ್ಳುತ್ತ ಜೋರಾದ ಧ್ವನಿಯಲ್ಲಿ ತೇಗು ತೆಗೆಯುವ ವಿಶ್ವದ ಕೆಲವರಲ್ಲಿ ತಾನೂ ಒಬ್ಬಾಕೆ ಎನ್ನಿಸಿಕೊಂಡಿದ್ದರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:24 pm, Thu, 3 August 23