Viral Video: ಗಿನ್ನೀಸ್ ವಿಶ್ವದಾಖಲೆ; ನಿಂಜಾ ಪ್ರಶಸ್ತಿ ಪಡೆದ 71 ವರ್ಷದ ಹಿರಿಯ ಮಹಿಳೆ
Ninja: “ವಯಸ್ಸು ಮತ್ತು ಅನನುಭವ ಎಂದೂ ನಮಗೆ ತಡೆಗೋಡೆಯಾಗಬಾರದು. ಹೊರಟ ಹಾದಿಯಲ್ಲಿ ಅವನ್ನೆಲ್ಲ ದಾಟುತ್ತ ಮುನ್ನಡೆಯಬೇಕು” ಎನ್ನುತ್ತಾರೆ ಅಮೆರಿಕಾದ ಅತ್ಯಂತ ಹಿರಿವಯಸ್ಸಿನ ಮಹಿಳಾ ನಿಂಜಾ ಯೋಧರಾಗಿರುವ ವರ್ಜಿನಿಯಾ ಲೆನೋರ್ ಮ್ಯಾಕ್‌ಕೋಲ್. ಗಿನ್ನೀಸ್ ವಿಶ್ವದಾಖಲೆಗೈದ ಇವರಿಗೆ ನೆಟ್ಟಿಗರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
GWR: ಜಪಾನ್ ದೇಶದ ಸಮರ ಕಲೆಗಳಲ್ಲಿ ಮುಖ್ಯವಾದುದು ನಿಂಜುತ್ಸು (Ninjutsu). ಅದರಲ್ಲಿ ಪರಿಣತಿ ಪಡೆದವರನ್ನು ನಿಂಜಾ ಎನ್ನುತ್ತಾರೆ. ಈ ಪದದ ಬಳಕೆ ಎಷ್ಟು ಸಾರ್ವತ್ರಿಕವಾಗಿದೆಯೆಂದರೆ ಯಾವುದೇ ಕ್ಷೇತ್ರದಲ್ಲಿ ಪರಿಣತಿ ಪಡೆದವರನ್ನೂ ನಿಂಜಾ ಎಂದು ಗುರುತಿಸತೊಡಗಿದ್ದಾರೆ. ಅದಿರಲಿ, ನಿಂಜುತ್ಸು ಎಂಬ ಸಮರಕಲೆಯನ್ನು ಕಲಿಯುವುದು ಸುಲಭದ ಮಾತಲ್ಲ. ಅಪಾರ ಶ್ರಮ, ದೇಹದಂಡನೆ, ಮತ್ತು ಏಕಾಗ್ರತೆ ಬಯಸುವ ಇಂಥವನ್ನು ಜಪಾನ್, ಚೈನಾ ಮೊದಲಾದ ದೇಶಗಳಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಲಿಸುತ್ತಾರೆ. ಆದರೆ ಅಮೆರಿಕಾದ ವರ್ಜಿನಿಯಾ ಲಿನೋರ್ ಮ್ಯಾಕ್ಕೊಲ್ (Virginia Lenore Maccoll) ತಮ್ಮ 71 ನೆಯ ವಯಸ್ಸಿನಲ್ಲಿ ‘ಹಿರಿಯ ಮಹಿಳಾ ನಿಂಜಾ’ ಎಂಬ ಬಳುವಳಿ ಪಡೆದುಕೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ತನ್ಮೂಲಕ ವಯಸ್ಸು ಎನ್ನುವುದು ಒಂದು ಸಂಖ್ಯೆಯಷ್ಟೇ ಎಂಬ ನಾಣ್ಣುಡಿಯನ್ನು ನಿಜ ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ : Viral Video: ಕಂಡೀರಾ ಚೀನಾದ ಈ ಬಾಲಬಾಣಸಿಗನ; ಅಚ್ಚರಿಗೊಂಡ ನೆಟ್ಟಿಗರು
ಗಿನ್ನೀಸ್ ಸಂಸ್ಥೆಯು ಬಿಡುಗಡೆ ಮಾಡಿರುವ ವರ್ಜಿನಿಯಾ ವಿಡಿಯೋದಲ್ಲಿ ಅವರು ತಮ್ಮ ದಾರಿಯಲ್ಲಿ ಎದುರಾಗುವ ವಿವಿಧ ಬಗೆಯ ತಡೆಗಳನ್ನು ಲೀಲಾಜಾಲವಾಗಿ ನಿವಾರಿಸುವುದನ್ನು ಕಾಣಬಹುದು. ಅವರು ಮೇಲೇರುವುದು, ಎತ್ತರದಿಂದ ಹಾರುವುದು, ಸರಳುಗಳಿಂದ ಜೋತಾಡುವುದು ಇತ್ಯಾದಿ ಸಾಹಸಗಳನ್ನು ಮಾಡಿದ್ದಾರೆ.
ವಿಶ್ವದಾಖಲೆ ಮಾಡಿದ 71ರ ವರ್ಜಿನಿಯಾ
View this post on Instagram
“ಸುಮಾರು 66ನೇ ವಯಸ್ಸಿನಿಂದ ಸ್ಪರ್ಧೆಗಳಲ್ಲಿ ಭಾಗವಹಿಸತೊಡಗಿದ ಇವರು 7೦ ವರ್ಷ 90 ದಿನಗಳಿದ್ದಾಗ ಸ್ಪರ್ಧಿಸಿ ಅತ್ಯಂತ ಹಿರಿಯ ನಿಂಜಾ ಪಟುವಾಗಿ ಹೊಮ್ಮಿದ್ದಾರೆ,” ಎಂದು ಗಿನ್ನಿಸ್ ಸಂಸ್ಥೆಯು ಘೋಷಿಸಿದೆ. ನಿಂಜುತ್ಸು ಕಲಿತುಕೊಂಡು ಸ್ಪರ್ಧಿಸುವಂತೆ ಸ್ಫೂರ್ತಿಯಾಗಿ ನಿಂತವರು ಅವರ ಮಗಳು. “ನನ್ನ ಗಂಡ ನನ್ನ ನಂಬರ್ ಒನ್ ಅಭಿಮಾನಿ,” ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ : Viral Video: ಮುಂಬೈ ಲೋಕಲ್ ರೈಲಿನಲ್ಲಿ ಬೆಡಗಿಯ ಬೆಲ್ಲಿ ಡ್ಯಾನ್ಸ್; ನೆಟ್ಟಿಗರ ಆಕ್ರೋಶ
ನಿಮ್ಮ ಈ ಉತ್ಸಾಹ ಮತ್ತು ಬದ್ಧತೆ ಅನೇಕರಿಗೆ ಮಾದರಿ ಎಂದು ನೆಟ್ಟಿಗರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಮುಖದಲ್ಲಿರುವ ಹೊಳಪು ವಯಸ್ಸನ್ನು ನಿವಾಳಿಸಿ ಒಗೆಯುತ್ತದೆ ಎಂದಿದ್ದಾರೆ ಒಬ್ಬರು. ನಿಮ್ಮ ಮೈಮುಖದ ಮೇಲಿನ ನೆರಿಗೆಗಳಲ್ಲಿ ಅದೆಂಥ ಚೆಲುವಿದೆ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ