Viral Video : ಬೆಟ್ಟಗುಡ್ಡಗಳ ಚಾರಣ ಅಥವಾ ಕಾಲನಡಿಗೆಯಲ್ಲಿ ಚಲಿಸುವುದು ಅದ್ಭುತ ಅನುಭವ. ಕಾಡು, ನದಿ, ಬೆಟ್ಟ, ಹಸಿರನ್ನು ನೋಡುತ್ತ ಸಂಚರಿಸುವಾಗ ಆಯಾಸದೊಂದಿಗೆ ಉಲ್ಲಾಸವೂ ಇಲ್ಲಿ ಸಿಗುತ್ತಾ ಹೋಗುತ್ತದೆ. ಸ್ಥಳೀಯ ಸಂಸ್ಕೃತಿಯನ್ನು ಅರಿತುಕೊಳ್ಳಲು ಅವಕಾಶ ಒದಗುತ್ತಾ ಹೋಗುತ್ತದೆ. ಅನೇಕರಿಗೆ ಓಡುವುದು ಪ್ರೀತಿಯ ಹವ್ಯಾಸ. ಪ್ರಕೃತಿಯನ್ನು ಸವಿಯಲು ಹೀಗೆ ಒಂಟಿಯಾಗಿ ವಿಹರಿಸುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ಧಾರೆ. ಫ್ರಾನ್ಸ್ನ ಈ ಮಹಿಳೆ ಟ್ರಯಲ್ ರನ್ನರ್. ಈಕೆ ಕಾಡಿನಲ್ಲಿ ಓಡುತ್ತಿದ್ಧಾಗ ಅಚಾನಕ್ಕಾಗಿ ಕುರಿಗಳ ಹಿಂಡು ಸಿಕ್ಕಿದೆ. ಈಕೆ ಓಡುತ್ತಿದ್ದಂತೆ ಎಷ್ಟೋ ದೂರದ ತನಕ ಅವಳನ್ನೇ ಹಿಂಬಾಲಿಸಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಎಲೀನರ್ ಸ್ಕೋಲ್ಝ್ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಸೆಪ್ಟೆಂಬರ್ 18ರಂದು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ನಾನು ನೋಡಿದ ಅತ್ಯುತ್ತಮ ಸಂಗತಿಗಳಲ್ಲಿ ಇದೂ ಒಂದು. ಈ ಕುರಿಗಳು ಇನ್ನೂ ಆಕೆಯನ್ನು ಬೆನ್ನುಹತ್ತಿ ಹೋಗಬಹುದು ಎಂದೆನ್ನಿಸುತ್ತದೆಯಾ ನಿಮಗೆ?’ ಎಂಬ ಶೀರ್ಷಿಕೆ ಈ ವಿಡಿಯೋಗಿದೆ.
ಸ್ಕೋಲ್ಝ್ ಫ್ರಾನ್ಸ್‌ನಲ್ಲಿ ಒಬ್ಬರೇ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ಈ ಸುಂದರ ದೃಶ್ಯ ಕಂಡು ವಿಡಿಯೋ ಮಾಡಿದ್ದಾರೆ.
ಸ್ಕೋಲ್ಝ್ ಈ ಓಟಗಾರ್ತಿಯನ್ನು ಮಾತನಾಡಿಸಲು ನಿಲ್ಲಿಸಿದಾಗ ಕೆಲ ನಿಮಿಷಗಳ ಕಾಲ ಕುರಿಗಳ ಹಿಂಡೂ ನಿಲ್ಲುತ್ತದೆ. ಮತ್ತೆ ಅವಳು ಓಡಲು ಶುರುಮಾಡುತ್ತಿದ್ದಂತೆ ಅವು ಹಿಂಬಾಲಿಸುತ್ತವೆ.
ಈ ವಿಡಿಯೋ ಈತನಕ ಸುಮಾರು 12 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಸುಮಾರು 7.5 ಲಕ್ಷ ಜನರು ಈ ವಿಡಿಯೋ ಮೆಚ್ಚಿದ್ದಾರೆ.
ಒಬ್ಬರು, ‘ಈ ದೃಶ್ಯ ನೋಡುತ್ತಿದ್ದರೆ ಕಳೆದುಹೋಗಬೇಕೆನ್ನಿಸುತ್ತದೆ. ಈಕೆ ಅದೆಷ್ಟು ಮೈಲು ಓಡಿರಬಹುದು, ಆಕೆಯನ್ನು ಈ ಹಿಂಡು ಅದೆಷ್ಟು ದೂರ ಹಿಂಬಾಲಿಸಿರಬಹುದು?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇನ್ನೊಬ್ಬರು, ‘ಇದು ಬಹಳ ಮುದ್ಧಾಗಿದೆ. ಹೀಗೆ ಹಿಂಡಿಗೆ ಹಿಂಡನ್ನೇ ಕದಿಯುವುದು!’ ಎಂದು ತಮಾಷೆ ಮಾಡಿದ್ದಾರೆ.
ಮತ್ತೊಬ್ಬರು, ‘ಎಂಥ ಉಲ್ಲಾಸದಾಯಕ ವಿಡಿಯೋ ಇದು’ ಎಂದಿದ್ದಾರೆ.
ಇಂಥ ಅಪರೂಪದ ಕ್ಷಣಗಳನ್ನು ಅನುಭವಿಸಲಾದರೂ ಹೀಗೆ ಆಗಾಗ ಹೀಗೆ ನಡಿಗೆಯಲ್ಲಿ ಸಾಗಬೇಕು. ಇವೆಲ್ಲವೂ ಎಷ್ಟು ಹಣ ಕೊಟ್ಟರೂ ಸಿಗದಂಥ ಅನನ್ಯ ಕ್ಷಣಗಳು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ