ಈ ಜಗತ್ತಿನಲ್ಲಿ ಕೆಲವೊಂದು ಪ್ರಾಣಿಗಳಿವೆ. ಅವುಗಳು ಕಾಣಲು ತುಂಬಾ ಸೌಮ್ಯ ಸ್ವಾಭಾವ ಹಾಗೂ ದುರ್ಬಲವಿರುವಂತೆ ಕಾಣುತ್ತದೆ. ಆದರೆ ಅವುಗಳ ನಿಜವಾದ ಶಕ್ತಿ, ಯುಕ್ತಿ ಹಾಗೂ ಧೈರ್ಯವನ್ನು ಕಂಡರೆ ನಾವು ಅಚ್ಚರಿಪಡುವುದಂತೂ ನಿಜ. ಅಂತಹ ಶಕ್ತಿ ಮತ್ತು ಯುಕ್ತಿಯನ್ನು ಹೊಂದಿರುವ ಪ್ರಾಣಿಗಳಲ್ಲಿ ಬೀವರ್ (Beaver) ಕೂಡಾ ಒಂದು. ನೋಡಲು ಇಲಿಗಳಂತೆ ಕಾಣುವ ಈ ಪ್ರಾಣಿ ಸುಮಾರು 18 ರಿಂದ 30 ಕೆಜಿಯಷ್ಟು ತೂಕವನ್ನು ಹೊಂದಿರುತ್ತವೆ. ಹೆಚ್ಚಾಗಿ ಜಲಮೂಲಗಳ ಸುತ್ತಲೂ ವಾಸಿಸುವ ಈ ಪ್ರಾಣಿಯನ್ನು ಪರಿಸರ ವ್ಯವಸ್ಥೆಯ ಎಂಜಿನಿಯರ್ ಎಂದು ಕರೆಯುತ್ತಾರೆ. ಈ ಪುಟ್ಟ ಪ್ರಾಣಿಗಳು ಕೇವಲ ತಮ್ಮ ಹಲ್ಲುಗಳಿಂದ ಮರಗಳನ್ನು ಕಚ್ಚಿ, ಕಡಿದು ಧರೆಗುರುಳಿಸುತ್ತವೆ. ಈಗ ಇಂತಹದ್ದೇ ಈ ಪುಟ್ಟ ಪ್ರಾಣಿಯ ಶಕ್ತಿಪ್ರದರ್ಶನದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪ್ರಾಣಿಯ ಶಕ್ತಿಪ್ರದರ್ಶನ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮನುಷ್ಯರು ಬಿಡಿ, ಬೇರೆ ಯಾವ ಪ್ರಾಣಿಯಾದರು ಕೇಲವ ತನ್ನ ಹಲ್ಲುಗಳಿಂದ ಮರವನ್ನು ಕಚ್ಚಿ ಕಡಿದು ತುಂಡರಿಸುವುದನ್ನು ನೋಡಿದ್ದೀರಾ? ಬಹುತೇಕ ಎಲ್ಲರೂ ಇಲ್ಲ ಎಂದೇ ಹೇಳುತ್ತಾರೆ. ಆದರೆ ಈ ವಿಡಿಯೋದಲ್ಲಿ ಬೀವರ್ ಎಂಬ ಪ್ರಾಣಿ ಕೇಲವ ತನ್ನ ಹಲ್ಲುಗಳ ಸಹಾಯದಿಂದ ಬೃಹದಾಕಾರದ ಮರವೊಂದನ್ನು ಬಾಯಿಯಿಂದ ಕಚ್ಚಿ, ಕಡಿದು ತುಂಡರಿಸುತ್ತದೆ. ಈ ವಿಡಿಯೋವನ್ನು @gunsnrosesgirl13 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇಲ್ಲಿ ಬೀವರ್ ಕೇವಲ ತನ್ನ ಹಲ್ಲುಗಳಿಂದ ಮರವನ್ನು ಕಡಿಯುತ್ತಾ ಕೊನೆಗೆ ಮರವನ್ನು ಹೇಗೆ ಧರೆಗುರುಳಿಸುತ್ತದೆ ಎಂಬುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
How a beaver fells a tree
pic.twitter.com/M3y8stwlGh— Science girl (@gunsnrosesgirl3) November 22, 2023
ವೀಡಿಯೋದಲ್ಲಿ ಬೀವರ್ ಬೃಹದಾಕಾರದ ಮರದ ಬಳಿ ಬಂದು, ಆ ಮರದ ಕೆಳಭಾಗವನ್ನು ಕೇವಲ ತನ್ನ ಹಲ್ಲುಗಳ ಸಹಾಯದಿಂದ ಕಚ್ಚಿ, ಮರದ ತೊಗಡೆ, ತಿರುಳುಗಳನ್ನೆಲ್ಲಾ ಕಿತ್ತು ಹಾಕಿ ಕೊನೆಗೆ ಮರವನ್ನೇ ಧರೆಗುರುಳಿಸುತ್ತದೆ. ಈ ಪ್ರಾಣಿಯ ಬುದ್ಧಿ ಶಕ್ತಿ ಹಾಗೂ ತಾಳ್ಮೆಯನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ನವೆಂಬರ್ 22 ರಂದು X ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 17.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಬರಿಗೈಯಲ್ಲಿ ದೈತ್ಯ ಅನಕೊಂಡ ಹಿಡಿದು, ಒಲವಿನ ಮುತ್ತಿಟ್ಟ ಎಂಟೆದೆ ಭಂಟ
ಸಸ್ಯಹಾರಿಗಳಾಗಿರುವ ಈ ಪ್ರಾಣಿಗಳು ಹಣ್ಣು, ನೆನೆದ ಎಲೆ, ಹುಲ್ಲುಗಳು ಹಾಗೂ ಮರದ ತಿರುಗಳುಗಳನ್ನು ತಿಂದು ಬದುಕುತ್ತವೆ. ತನ್ನ ಆಹಾರಕ್ಕಾಗಿ ಈ ಪ್ರಾಣಿಗಳು ಬೃಹದಾಕಾರದ ಮರಗಳನ್ನು ಕೆಡವಿ ಹಾಕುತ್ತವೆ. ಅಷ್ಟೇ ಅಲ್ಲದೆ ಇವುಗಳು ನೀರಿರುವ ಪ್ರದೇಶದಲ್ಲಿ ವಾಸಿಸುವ ಕಾರಣ ತಮ್ಮ ರಕ್ಷಣೆಗಾಗಿ ಅಲ್ಲಿ ಸುವ್ಯವಸ್ಥಿತವಾದ ಅಣೆಕಟ್ಟುಗಳನ್ನು ಕಟ್ಟುವ ಸಲುವಾಗಿ ಮರಗಳನ್ನು ಕೆಡವಿ ಹಾಕುತ್ತವೆ. ಮತ್ತು ಈ ಮರದ ದಿಮ್ಮಿಗಳ ಸಹಾಯದಿಂದ ಭದ್ರವಾದ ಅಣೆಕಟ್ಟುಗಳನ್ನು ನಿರ್ಮಿಸುತ್ತವೆ. ಹಾಗೂ ಈ ಮರದ ದಿಮ್ಮಿಗಳಿಂದ ತಮಗಾಗಿ ವ್ಯವಸ್ಥಿತವಾದ ಸೂರುಗಳನ್ನು ಸಹ ಕಟ್ಟಿಕೊಳ್ಳುತ್ತವೆ. ಈ ಕಾರಣಕ್ಕಾಗಿಯೇ ಈ ಪ್ರಾಣಿಯನ್ನು ಪರಿಸರ ವ್ಯವಸ್ಥೆಯ ಎಂಜಿನಿಯರ್ ಎಂದು ಕರೆಯಲಾಗುತ್ತದೆ.
ಟ್ರೀ ಜರ್ನಿ ವೆಬ್ಸೈಟ್ನ ವರದಿಯ ಪ್ರಕಾರ, ಬೀವರ್ ಪ್ರಾಣಿಗಳು ಒಂದು ಮರವನ್ನು ಕೇವಲ 8 ನಿಮಿಷಗಳಲ್ಲಿ ಸಂಪೂರ್ಣವಾಗಿ ಕತ್ತರಿಸಿ, ಆ ಮರಗಳನ್ನು ಧರೆಗುರುಳಿಸುತ್ತವಂತೆ. ಹಾಗಾದರೆ ನೀವೇ ಯೋಚಿಸಿ ಈ ಪ್ರಾಣಿ ಎಷ್ಟು ಬಲಶಾಲಿಯಾಗಿರಬಹುದು ಎಂದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ