ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತು, ಅಧಿಕಾರ ಈ ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯ ಗುಣ ಇರಬೇಕು ಎಂದು ಹೇಳ್ತಾರೆ. ಆದರೆ ಇಂದು ಕೆಲವೊಬ್ಬರು ತಮ್ಮ ಹಣ, ಅಧಿಕಾರದ ಸೊಕ್ಕಿನಿಂದ ಸಾಮಾನ್ಯ ಜನರ ಮೇಲೆ ತಮ್ಮ ದರ್ಪ ತೋರಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮನೆಯ ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಪರಿಹರಿಸಲು ಬಂದಂತಹ ಇಬ್ಬರು ಎಂಜಿನಿಯರ್ಗಳ ಮೇಲೆ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಎಂಜಿನಿಯರ್ ಒಬ್ಬರ ಕಾಲ್ಬೆರಳು ಮುರಿತಕ್ಕೊಳಗಾಗಿದೆ.
ಈ ಘಟನೆ ಮುಂಬೈಯ ಘನ್ಸೋಲಿಯಲ್ಲಿರುವ ಅಮನ್ ಮಿತ್ತಲ್ ಅವರ ಮನೆಯಲ್ಲಿ ನಡೆದಿದ್ದು, ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಸರಿಪಡಿಸಲು ಬಂದ ಏರ್ಟೆಲ್ ಎಂಜಿನಿಯರ್ಗಳಾದ ಭೂಷನ್ ಗುಜರ್ ಮತ್ತು ಸಾಗರ್ ಮಂಧಾರೆ ಅವರ ಮೇಲೆ ಅಮನ್ ಮಿತ್ತಲ್ ಮತ್ತು ಅವರ ಸಹೋದರ ಹಲ್ಲೆ ನಡೆಸಿದ್ದಾರೆ.
ಡಿಸೆಂಬರ್ 30 ರಂದು ಈ ಘಟನೆ ನಡೆದಿದ್ದು, ಮನೆಯ ವೈಫೈ ಸರಿಪಡಿಸುವ ವೇಳೆಯಲ್ಲಿ ಎಂಜಿನಿಯರ್ಗಳು ಮತ್ತು ಮಿತ್ತಲ್ ಸಹೋದರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಕೊನೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ಮಿತ್ತಲ್ ಸಹೋದದರು ರಾಡ್ ಮತ್ತು ಪೈಪ್ನಿಂದ ಎಂಜಿನಿಯರ್ಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಒಬ್ಬ ಎಂಜಿನಿಯರ್ ನ ಕಾಲ್ಬೆರಳು ಮುರಿತಕ್ಕೊಳಗಾಗಿದೆ.
ಈ ಘಟನೆಯ ಬಳಿಕ 2015 ನೇ ಬ್ಯಾಚ್ನ ಐಎಎಸ್ ಅಧಿಕಾರಿ ಹಾಗೂ ಮಹರಾಷ್ಟ್ರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿಯಾಗಿರುವ ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ವಿರುದ್ಧ ಹಿಂಸಾಚಾರದ ಅರೋಪದ ಮೇಲೆ ರಬಲೆ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆದರೆ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಅಲ್ಲದೆ ಮಿತ್ತಲ್ ಸಹೋದರರು ಕೂಡಾ ಎಂಜಿನಿಯರ್ ಗಳ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ನೋಡಿ…
ವಿಚಾರಣೆಗಾಗಿ ಅಮನ್ ಮಿತ್ತಲ್ ಮತ್ತು ದೇವೇಶ್ ಮಿತ್ತಲ್ ಅವರಿಗೆ ನೋಟಿಸ್ ನೀಡಿರುವುದಾಗಿ ರಬಲೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ರಾಜೇಂದ್ರ ಕೋಟೆ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ