Viral Video: ಲಂಡನ್ ಸಿಟಿ ವಿವಿ ಘಟಿಕೋತ್ಸವದಲ್ಲಿ ಕರ್ನಾಟಕದ ಬಾವುಟ ಪ್ರದರ್ಶಿಸಿದ ಕನ್ನಡಿಗ; ಮೆಚ್ಚುಗೆ ಮಹಾಪೂರ
ನಮಗೆ ಭಾರತದ ಧ್ವಜ ಗೊತ್ತಿತ್ತು. ಕರ್ನಾಟಕಕ್ಕೂ ಧ್ವಜ ಇದೆಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿದ ಕ್ಷಣ ಎಂದು ಹಲವು ಮೆಚ್ಚಿಕೊಂಡಿದ್ದಾರೆ.
ಬೆಂಗಳೂರು: ಲಂಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ (London City University) ಕರ್ನಾಟಕದ ನಾಡಧ್ವಜ (Karnataka Flag) ಅನಾವರಣಗೊಳಿಸಿದ ಅಪರೂಪದ ಘಟನೆಯೊಂದರ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ ಪದವಿ ಪಡೆಯುವ ಸಂದರ್ಭದಲ್ಲಿ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಯು ಕನ್ನಡ ಧ್ವಜವನ್ನು ಅನಾವರಣಗೊಳಿಸಿದ. ಲಂಡನ್ ಸಿಟಿ ಯುನಿವರ್ಸಿಟಿ ವ್ಯಾಪ್ತಿಗೆ ಬರುವ ಬೇಯ್ಸ್ ಬ್ಯುಸಿನೆಸ್ ಸ್ಕೂಲ್ನಲ್ಲಿ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ನಾನು ಪದಿವಿ ಪಡೆದಿದ್ದೇನೆ. ನನಗದು ಹೆಮ್ಮೆಯ ಕ್ಷಣ. ಹೀಗಾಗಿ ಬ್ರಿಟನ್ನಲ್ಲಿ ನಾನು ಕನ್ನಡದ ನಾಡಧ್ವಜ ಅನಾವರಣಗೊಳಿಸಿದೆ ಎಂದು ಆದೀಶ್ ಆರ್.ವಾಲಿ (Adhish R Wali) ಎನ್ನುವ ಯುವಕ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.
ಈ ವಿಡಿಯೊ ಟ್ವಿಟರ್ನಲ್ಲಿ ವೈರಲ್ ಆಗಿದ್ದು, 1,550 ಮಂದಿ ರಿಟ್ವೀಟ್ ಮಾಡಿದ್ದಾರೆ. 7,646 ಮಂದಿ ಲೈಕ್ ಮಾಡಿದ್ದು, 712 ಮಂದಿ ಕಾಮೆಂಟ್ ಮಾಡಿದ್ದಾರೆ. ಸುಮಾರು 5 ಲಕ್ಷ ಜನರು ವಿಡಿಯೊ ನೋಡಿದ್ದಾರೆ. ಬಹುತೇಕರು ಆದೀಶ್ರ ನಾಡಪ್ರೇಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಬ್ಬರು ಮಾತ್ರ, ‘ಅಲ್ಲಿ ನೀವು ನಮ್ಮ ರಾಷ್ಟ್ರಧ್ವಜ ಅನಾವರಣಗೊಳಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದೀಶ್ ಅವರಿಗೆ ಮೆಚ್ಚುಗೆ ಸೂಚಿಸಿರುವ ‘ಬೀದರ್ ಅಪ್ಡೇಟ್’ ಹೆಸರಿನ ಟ್ವಿಟರ್ ಖಾತೆ, ‘ಯಾರಿಗೇ ಆದರೂ ತಮ್ಮ ನೆಲದ ಬಗ್ಗೆ ಮಣ್ಣಿನ ಬಗ್ಗೆ ಒಂದು ಪ್ರೀತಿ, ಅಭಿಮಾನ ಇದ್ದೇ ಇರುತ್ತದೆ. ತಮ್ಮ ದೇಶದ ಜೊತೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಮಾನ ಮತ್ತು ಹೆಮ್ಮೆ ಇರುತ್ತದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದೆ.
I graduated with MS in Management from City University of London – Bayes Business School (Cass). A moment of pride as I unfurled our Karnataka state flag during the ceremony in London, UK. – ARW #ARW? #karnataka #bidar #kannada #kannadiga #london #uk #England @bidarupdates pic.twitter.com/Hofb01W0WX
— Adhish R. Wali (@AdhishWali) January 21, 2023
ಟ್ವಿಟರ್ನಲ್ಲಿ ಸರಿ-ತಪ್ಪು ವಾಗ್ವಾದ
‘ನಮಗೆ ಭಾರತದ ಧ್ವಜ ಗೊತ್ತಿತ್ತು. ಕರ್ನಾಟಕಕ್ಕೂ ಧ್ವಜ ಇದೆಯೇ? ನೀನು ಎಂಎಸ್ ಮಾಡಿದ್ದೀ, ಅದಕ್ಕಾಗಿ ಅಭಿನಂದನೆಗಳು. ಆದರೆ ಒಂದಿಷ್ಟು ವಿಷಯಗಳನ್ನು ಕಲಿಸಲು ಆಗುವುದಿಲ್ಲ. ಪದವಿಗಳು ಬುದ್ಧಿವಂತಿಕೆಯನ್ನು ತಂದುಕೊಡುವುದಿಲ್ಲ’ ಎಂದು ಮಿನಿ ತ್ರಿಪಾಠಿ ಎನ್ನುವವರು ತಮ್ಮ ರಿಪ್ಲೈನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನು ಮಧು ರಾಜಪ್ಪ ಒಪ್ಪಿಲ್ಲ. ‘ಹೌದು, ಖಂಡಿತ ನಿಜ. ಒಂದಿಷ್ಟು ವಿಷಯಗಳನ್ನು ಕಲಿಸಲು ಆಗುವುದಿಲ್ಲ. ಭಾರತವು ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಹೆಸರುವಾಸಿಯಾದುದು. ಇದನ್ನು ಒಪ್ಪಿಕೊಳ್ಳಲು, ಗೌರವಿಸಲು ಬಾರದವರಿಗೆ ರಾಷ್ಟ್ರೀಯವಾದದ ಉಪದೇಶ ಮಾಡುವ ಯಾವುದೇ ಹಕ್ಕು ಇರುವುದಿಲ್ಲ’ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Twitter: ಆದಾಯಕ್ಕಾಗಿ ಯೂಸರ್ ನೇಮ್ ಮಾರಾಟಕ್ಕೆ ಮುಂದಾದ ಟ್ವಿಟರ್; ಹೆಚ್ಚಾಗುತ್ತಿದೆ ಹ್ಯಾಕ್ ಆಗುವ ಆತಂಕ
ಮತ್ತಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:03 pm, Mon, 23 January 23