ಸೋಷಿಯಲ್ ಮೀಡಿಯಾವು ಪ್ರತಿಭೆಗಳನ್ನು ಪ್ರದರ್ಶಿಸಲಿರುವ ಒಂದು ಅದ್ಭುತ ವೇದಿಕೆಯಾಗಿದೆ. ಅದೆಷ್ಟೋ ಜನರು ನೃತ್ಯ, ಆಕ್ಟಿಂಗ್, ಚಿತ್ರಕಲೆ, ಸಂಗೀತ ಹೀಗೆ ತಮ್ಮ ತಮ್ಮ ಪ್ರತಿಭೆಗಳಿಗೆ ಸಂಬಂಧಿಸಿ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಜನರನ್ನು ಮನರಂಜಿಸುತ್ತಿರುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ನೃತ್ಯಕ್ಕೆ ಸಂಬಂಧಿಸಿದ ರೀಲ್ಸ್ ವಿಡಿಯೋಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇವುಗಳಲ್ಲಿ ಕೆಲವೊಂದು ಡಾನ್ಸ್ ವಿಡಿಯೋಗಳು ಹುಚ್ಚುತನವೆಂದು ಕಂಡ್ರೆ, ಇನ್ನೂ ಕೆಲವೊಂದು ಡಾನ್ಸರ್ಸ್ ಗಳ ವಿಡಿಯೋಗಳು ನಮ್ಮ ಮನ ಗೆಲ್ಲುತ್ತವೆ. ಸದ್ಯ ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಝೊಮ್ಯಾಟೊ ಡೆಲಿವರಿ ಹುಡುಗನ ಅದ್ಭುತ ನೃತ್ಯ ಪ್ರತಿಭೆಯನ್ನು ಕಂಡು ನೆಟ್ಟಿಗರು ಭೇಷ್ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಝೊಮ್ಯಾಟೊ ಫುಡ್ ಡೆಲಿವರಿ ಬಾಯ್ ರಸ್ತೆ ಮಧ್ಯದಲ್ಲಿ ʼಉಲ್ಜಾ ಜಿಯಾʼ ಎಂಬ ಹಿಂದಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುತ್ತಿರುವುನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು ಝೊಮ್ಯಾಟೊ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವಂತಹ ಮೊಸಾನ್ (@mosaan_2o) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ರಾತ್ರಿಯ ವೇಳೆ ತನ್ನ ಫುಡ್ ಡೆಲಿವರಿ ಕೆಲಸವನ್ನು ಮುಗಿಸಿ ಬಂದಂತಹ ಮೊಸಾನ್ ತಮ್ಮ ಖುಷಿಗಾಗಿ ರಸ್ತೆ ಮಧ್ಯದಲ್ಲಿ ʼಉಲ್ಜಾ ಜಿಯಾʼ ಎಂಬ ಹಿಂದಿ ಹಾಡಿಗೆ ಸಖತ್ ಆಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ
ಫೆಬ್ರವರಿ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಾಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಸಹೋದರ ನಾನು ನನ್ನ ಆರ್ಡರ್ ಗಾಗಿ ಕಾಯುತ್ತಿದ್ದೇನೆ, ಇನ್ನಾ ಬಂದಿಲ್ಲʼ ಅಂತ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಓಹೋ ಇದೇ ಕಾರಣಕ್ಕೋ ನಾನು ಆರ್ಡರ್ ಮಾಡಿದ ಬಿರಿಯಾನಿ ಬರಲು ತಡವಾಗಿದ್ದುʼ ಎಂದು ಈ ಯುವಕನ ಕಾಲೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಆರ್ಡರ್ ಮಾಡಿದ ಬಟರ್ ಚಿಕನ್ ಎಲ್ಲಿದೆ ಬ್ರೋʼ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಯುವಕ ನೃತ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ