Viral Video : ಪುಟ್ಟಮಕ್ಕಳಿಗೆ ಆರೋಗ್ಯ ಸುಸ್ಥಿತಿಯಲ್ಲಿ ಇರದೇ ಇದ್ದರೆ ಹೆತ್ತವರಿಗೆ ಹೇಳತೀರದಷ್ಟು ಮನಸ್ಸು ಚಡಪಡಿಸುತ್ತದೆ. ಇನ್ನು ಶಾಶ್ವತವಾದ ಸಮಸ್ಯೆಗೆ ಈಡಾದರಂತೂ ಆ ನೋವನ್ನು ವಿವರಿಸಲಸಾಧ್ಯ. ಆದರೆ ಚಿಕಿತ್ಸೆಯಿಂದ ಪರಿಹಾರವಿದೆ ಎಂದು ಸಣ್ಣ ದಾರಿ ತೋರಿದರೂ ಆಶಾಭಾವ ಗರಿಗೆದರುತ್ತದೆ. ಆದರೂ ಎಲ್ಲರಂತಿರಲು ಆಗದು ಎಂಬ ನೋವು ಮಾತ್ರ ಥಣ್ಣಗೆ ಕೊರೆಯುತ್ತಲೇ ಇರುತ್ತದೆ. ಈಗಿಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಮಗುವಿಗೆ ಶ್ರವಣದೋಷ ನಿವಾರಣೆಗೆ ಕಾಕ್ಲಿಯರ್ ಇಂಪ್ಲ್ಯಾಂಟ್ ಮಾಡಲಾಗಿದೆ. ಮಗುವಿಗೆ ಬೇಸರವಾಗಬಾರದೆಂದು ಅಪ್ಪನೂ ಕಾಕ್ಲಿಯರ್ ಇಂಪ್ಲ್ಯಾಂಟ್ ಹೋಲುವ ಹಚ್ಚೆಯನ್ನು ಹಾಕಿಸಿಕೊಂಡಿದ್ದಾನೆ.
ಐರಿಶ್ನಲ್ಲಿ ವಾಸಿಸುತ್ತಿದ್ದಾರೆ ಈ ಅಪ್ಪಮಗ ಜೋಡಿ. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗುತ್ತಿದ್ದಾರೆ. ಇಷ್ಟು ಪ್ರೀತಿಸುವ ತಂದೆಯರು ಈಗ ಸಿಗುವುದು ಅತೀ ವಿರಳ ಎನ್ನುತ್ತಿದ್ದಾರೆ. ಮಗುವಿಗೆ ತನ್ನ ತಲೆಯಲ್ಲಿರುವ ಹಚ್ಚೆ ತೋರಿಸಿದಾಗ ಮಗುವಿನ ಮುಖ ಗಮನಿಸಿದ್ದೀರಾ? ಒಂದು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದಾರೆ. ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಈ ವಿಡಿಯೋ ತಲುಪಿದೆ.
ಈ ವಿಡಿಯೋ ನೋಡಿದ ಯಾರಿಗೂ ಅಪ್ಪನೆಂದರೆ ಏನು ಅವನ ಶಕ್ತಿ ಮತ್ತು ಪ್ರೀತಿ ಎಂಥದು ಎನ್ನುವುದು ಅನುಭವಕ್ಕೆ ಬರುತ್ತದೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿ ನನ್ನ ಕಣ್ಣುಗಳು ತುಂಬಿಕೊಳ್ಳುತ್ತಿವೆ ಹಾಗೆಯೇ ಸಣ್ಣನಗುವೂ ಅರಳುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮಿಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ನೆಟ್ಟಿಗರನೇಕರು ಹಾರೈಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ