ಕಾಡನಲ್ಲಿ ಬಲಿಷ್ಠ ಪ್ರಾಣಿಗಳು, ಚಿಕ್ಕ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುತ್ತಿರುತ್ತವೆ. ಸಿಂಹಗಳು ಒಂಟಿಯಾಗಿ ಬೇಟೆಯಾಡಿದರೆ ತೋಳಗಳು ಗುಂಪುಗಳಾಗಿ ಬೇಟೆಯಾಡುತ್ತವೆ. ಹೀಗಿದ್ದರೂ ಶಕ್ತಿಗಿಂತ ಯುಕ್ತಿ ಮೇಲು ಎಂದು ತೋರಿಸಿ ಅದೆಷ್ಟೋ ಸಣ್ಣಪುಟ್ಟ ಪ್ರಾಣಿಗಳು ದೈತ್ಯರ ಬೇಟೆಯಿಂದ ತಪ್ಪಿಸಿಕೊಳ್ಳುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಎರಡು ತೋಳಗಳು ಸೇರಿ ಮೊಲವನ್ನು ಬೇಟೆಯಾಡಲು ಪ್ರಯತ್ನಿಸುತ್ತವೆ. ಆದರೆ ಈ ಪುಟ್ಟ ಮೊಲವು ತೋಳಗಳ ಬೇಟೆಯಿಂದ ತಪ್ಪಿಸಿಕೊಂಡು, ಎಂತಹದ್ದೇ ಪರಿಸ್ಥಿತಿ ಎದುರಾದರೂ ಬದುಕುವ ಹಾಗೂ ಜಯಿಸುವ ಛಲವನ್ನು ಬಿಡಬಾರದೆಂಬುದನ್ನು ತೋರಿಸಿಕೊಟ್ಟಿದೆ.
ಈ ವೈರಲ್ ವೀಡಿಯೋವನ್ನು Figen (@TheFigen) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು “ಜೀವನ ಎಂದರೇನು…. ಎಂದಿಗೂ ಬಿಟ್ಟುಕೊಡಬೇಡಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ತೋಳಗಳೆರಡು ಪುಟ್ಟ ಮೊಲವನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ತೋಳಗಳೆರಡು ಮೊಲವನ್ನು ಅಟ್ಟಾಡಿಸಿಕೊಂಡು ಹೋಗುತ್ತದೆ. ಇನ್ನೇನು ಈ ಮೊಲ ತೋಳಗಳಿಗೆ ಆಹಾರವಾಗಿಬಿಡುತ್ತದೆ ಎನ್ನುವಷ್ಟರಲ್ಲಿ ಮೊಲ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಹೀಗೆ ಛಲ ಬಿಡದ ಮೊಲ, ನಿಮಗಿಂತ ನಾನೇನು ಕಡಿಮೆಯಿಲ್ಲ, ಒಬ್ಬಂಟಿಯಾಗಿದ್ದರೆ ಏನಂತೆ ಗೆಲ್ಲುವ ಛಲ, ದೈರ್ಯ ನನಗಿದೆ ಎನ್ನುತ್ತಾ ಯುಕ್ತಿಯಿಂದ ತೋಳಗಳ ಬೇಟೆಯಿಂದ ತಪ್ಪಿಸಿಕೊಂಡು ದೂರ ಓಡಿಹೋಗುತ್ತದೆ. ಆ ಸಂದರ್ಭದಲ್ಲಿ ತೋಳಗಳ ಮುಖದಲ್ಲಿ ಹತಾಶೆಯ ಭಾವನೆಯನ್ನು ಕಾಣಬಹುದು. ಕೊನೆಯಲ್ಲಿ ತೋಳಗಳ ಬೇಟೆಯಿಂದ ಪಾರದ ಮೊಲದ ಮುಖದಲ್ಲಿ ಗೆಲುವಿನ ಉತ್ಸಾಹವನ್ನು ಕಾಣಬಹುದು.
ಇದನ್ನೂ ಓದಿ: ಬುಸ್ ಕಿಸ್ ಎನ್ನವಂತಿಲ್ಲ ಸುಮ್ಮನಿರಬೇಕು ಎಂದು ಕಾಳಿಂಗ ಸರ್ಪಕ್ಕೆ ಸ್ನಾನ ಮಾಡಿಸಿದ ಎಂಟೆದೆ ಭಂಟ
ಜೀವನದಲ್ಲಿ ಏನೇ ಕಷ್ಟ ಬರಲಿ, ಆದರೆ ಸೋಲನ್ನು ಒಪ್ಪಿಕೊಳ್ಳಬಾರದು, ಧೈರ್ಯದಿಂದ ಮುನ್ನುಗ್ಗಿ ಜೀವನವನ್ನು ಗೆಲ್ಲಬೇಕು ಎಂಬ ಜೀವನ ಪಾಠವನ್ನು ಈ ಮೊಲದಿಂದ ನಾವು ಕಲಿಯಬಹುದು.
What is life……… Never give up! pic.twitter.com/3djOLKV8CW
— Figen (@TheFigen_) October 17, 2023
ಅಕ್ಟೋಬರ್ 17 ರಂದು ಹಂಚಿಕೊಳ್ಳಲಾದ ಈ ವೀಡಿಯೋ 8.5 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು “ಓಡುವ ವೇಗಕ್ಕಿಂತ ತಂತ್ರಗಾರಿಕೆ ಮುಖ್ಯ” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಕೇವಲ ಸೆಕೆಂಡುಗಳ ಅಂತರದಲ್ಲಿ ನಮ್ಮ ಜೀವನವು ತಲೆಕೆಳಗಾಗಬಹುದು. ಹಾಗಾಗಿ ದೃತಿಗೆಡದೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು “ಜೀವನದಲ್ಲಿ ಅಡೆತಡೆಗಳು, ಹೋರಾಟಗಳು ಇದ್ದೇ ಇರುತ್ತವೆ, ಆದರೆ ಜಯಿಸುವ ಛಲವನ್ನು ಕಳೆದುಕೊಳ್ಳಬಾರದು” ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮೊಲದ ಬದುಕುವ ಛಲ ಮತ್ತು ತಂತ್ರಗಾರಿಕೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:29 pm, Wed, 18 October 23