ಸೌರಮಂಡಲದಲ್ಲಿರುವ ಸಾಕಷ್ಟು ಕ್ಷುದ್ರಗ್ರಹಗಳು ಚಲಿಸುತ್ತವೆ. ಕೆಲವೊಮ್ಮೆಈ ಕ್ಷುದ್ರಗ್ರಹಗಳು ನಮ್ಮ ಭೂಮಿಗೂ ಬಂದು ಅಪ್ಪಳಿಸೋ ಭೀತಿಯನ್ನು ಹುಟ್ಟಿಸುತ್ತವೆ. ಇದೀಗ ಅಂತಹದ್ದೇ ಭಯವೊಂದು ಹುಟ್ಟಿಕೊಂಡಿದ್ದು, ಬೃಹತ್ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಯ ಕಡೆಗೆ ನುಗ್ಗಿ ಬರುತ್ತಿದೆ ಎಂದು ಇಸ್ರೋ ತಿಳಿಸಿದೆ. ಅದರಿಂದ ಪಾರಾಗಲು ಜಾಗತಿಕ ಮಟ್ಟದಲ್ಲಿ ರಕ್ಷಣಾ ಸಾಮಾರ್ಥ್ಯ ಅಭಿವೃದ್ಧಿಪಡಿಸಲು ಇಸ್ರೋ ಸೇರಿದಂತೆ ವಿವಿಧ ರಾಷ್ಟ್ರಗಳ ಬಾಹ್ಯಾಕಾಶ ಸಂಸ್ಥೆಗಳು ಮುಂದಾಗಿವೆ.
370 ಮೀಟರ್ ವ್ಯಾಸವನ್ನು ಹೊಂದಿರುವ ʼಅಪೋಫಿಸ್ʼ ಹೆಸರಿನ ಕ್ಷುದ್ರಗ್ರಹವು ಭೂಮಿಯ ಸಮೀಪ ಹಾದು ಹೋಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಪೋಫಿಸ್ ಎಂಬ ದೊಡ್ಡ ಕ್ಷುದ್ರಗ್ರಹವನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದೊಂದು ಅತೀ ದೊಡ್ಡ ಕ್ಷುದ್ರಗ್ರವಾಗಿದ್ದು, ಇದಕ್ಕೆ ಈಜಿಪ್ಟಿನ ಗಾಡ್ ಆಫ್ ಚೋಸ್‌ನ ಹೆಸರನ್ನು ಇಡಲಾಗಿದೆ. ಭೂಮಿಯತ್ತ ನುಗ್ಗಿ ಬರುತ್ತಿರುವ ಈ ಬೃಹತ್ ಕ್ಷುದ್ರಗ್ರಹ ಏಪ್ರಿಲ್ 13, 2029 ರಂದು ಭೂಮಿಯ ಅತೀ ಸಮೀಪದಲ್ಲಿ ಹಾದುಹೋಗಲಿದೆ ಎಂದು ಇಸ್ರೋ ತಿಳಿಸಿದೆ. ʼಪ್ಲಾನೆಟರಿ ಡಿಫೆನ್ಸ್ʼ ಎಂಬ ಹೊಸ ವ್ಯವಸ್ಥೆಯ ಮೂಲಕ ಇಸ್ರೋ ಈ ಕ್ಷುದ್ರಗ್ರಹಗಳ ಚಲನೆಯನ್ನು ಗಮನಿಸುತ್ತಿದೆ. ಬಾಹ್ಯಾಕಾಶ ವಸ್ತುಗಳಿಂದ ಉಂಟಾಗುವ ಹಾನಿಯಿಂದ ಭೂಮಿಯನ್ನು ರಕ್ಷಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ.
“ಈ ಬೃಹತ್ ಕ್ಷುದ್ರಗ್ರಹವು ಮಾನವನ ಅಸ್ತಿತ್ವಕ್ಕೆ ಅಪಾಯಕಾರಿಯಾಗಿದೆ, ನಮ್ಮ ನೆಟ್‌ವರ್ಕ್ ಫಾರ್ ಆಬ್ಜೆಕ್ಟ್ಸ್ ಟ್ರ್ಯಾಕಿಂಗ್ ಮತ್ತು ಅನಾಲಿಸಿಸ್ (NETRA) ಅಪೊಫಿಸ್ ಕ್ಷುದ್ರಗ್ರಹವನ್ನು ಬಹಳ ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದೆ. ಮಾನವನ ವಾಸಕ್ಕೆ ಭೂಮಿಯೊಂದೇ ಇರುವುದು. ಇಂತಹ ಸಂದರ್ಭದಲ್ಲಿ ಕ್ಷುದ್ರ ಗ್ರಹಗಳು ಭೂಮಿಗೆ ಬಂದಪ್ಪಳಿಸುವ ಅಪಾಯಗಳನ್ನು ತಡೆಯಲು ಭಾರತವು ಎಲ್ಲಾ ದೇಶಗಳ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಹಕರಿಸುತ್ತದೆ” ಎಂದು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ್ ಎನ್.ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
2004 ರಲ್ಲಿ ಅಫೋಫಿಸ್ ಎಂಬ ಕ್ಷುದ್ರಗ್ರಹವನ್ನು ಪತ್ತೆ ಮಾಡಿದ ಖಗೋಳಶಾಸ್ತ್ರಜ್ಞರು ಇದು ಭೂಮಿಯ ಸಮೀಪಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಹೇಳಿದ್ದರು ಇದೀಗ ಇದರ ಚಲನೆಯನ್ನು ಗಮನಿಸಲಾಗುತ್ತಿದ್ದು, ಈ ಕ್ಷುದ್ರಗ್ರಹ ಏಪ್ರಿಲ್ 13, 2029 ರಂದು ಭೂಮಿಯ ಸಮೀಪ ಹಾದು ಹೋಗಿ ಪುನಃ 2036 ರಲ್ಲಿ ಹಿಂತಿರುಗಲಿದೆ ಎಂದು ಹೇಳಲಾಗುತ್ತಿದೆ. ಆದರೆ 2029 ರಲ್ಲಿ ಈ ಕ್ಷುದ್ರಗ್ರಹ ಭೂಮಿಯ ಸಮೀಪ ಬಂದರೂ ಡಿಕ್ಕಿಯಾಗುವ ಸಾಧ್ಯತೆ ಇಲ್ಲ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಎಂದು ಕೆಲ ಅಧ್ಯಯನಗಳು ಹೇಳಿವೆ. ಇದು ಭೂಮಿಯ 32,000 ಕಿಮೀ ಸಮೀಪ ಬರಲಿದೆ ಎಂದು ಹೇಳಲಾಗುತ್ತಿದ್ದು, ಬೇರೆ ಯಾವುದೇ ಬೃಹತ್ ಕ್ಷುದ್ರಗ್ರಹ ಇಷ್ಟು ಸಮೀಪಕ್ಕೆ ಬಂದಿಲ್ಲ.
This animation shows the distance between the Apophis asteroid and Earth at the time of the asteroid’s closest approach. The blue dots are the many man-made satellites that orbit our planet, and the pink represents the International Space Station https://t.co/vY5x57y1FK pic.twitter.com/WKt8YiBjLh
— Massimo (@Rainmaker1973) April 29, 2019
ಈ ಅಪೋಫಿಸ್ ಕ್ಷುದ್ರಗ್ರಹ ಭಾರತದ ಅತಿದೊಡ್ಡ ವಿಮಾನವಾಹಕ ನೌಕೆ INS ವಿಕ್ರಮಾದಿತ್ಯ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂಗಿಂತ ದೊಡ್ಡದಾಗಿದೆ. 340 ರಿಂದ 450 ಮೀಟರ್ ವ್ಯಾಸ ಮತ್ತು 140 ಮೀಟರ್ ಎತ್ತರವಿರುವ ಈ ಕ್ಷುದ್ರಗ್ರಹವು ಭೂಮಿಯ ಸಮೀಪ ಹಾದು ಹೋದರೆ, ಸಂಭಾವ್ಯ ಅಪಾಯಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಭೂಮಿಯ ಸನಿಹಕ್ಕೆ ಬಂದು ಸ್ಫೋಟಗೊಂಡರೆ ಇದರಿಂದ ಊಹಿಸಲೂ ಸಾಧ್ಯವಾಗದಷ್ಟು ಹಾನಿಯಾಗಲಿದೆ.
ಇದನ್ನೂ ಓದಿ: ಅಬ್ಬಬ್ಬಾ ಎಂಥಾ ಫ್ರೆಂಡ್‌ಶಿಪ್ ನೋಡಿ, ಬೆಸ್ಟ್ ಫ್ರೆಂಡ್ ಕಚ್ಚಿದ ಗುರುತಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ
ಇಸ್ರೋದ ಪ್ರಕಾರ 300 ಮೀಟರ್‌ಗಿಂದ ದೊಡ್ಡದಾದ ಯಾವುದೇ ಕ್ಷುದ್ರಗ್ರಹವು ಭೂಖಂಡದ ವಿನಾಶಕ್ಕೆ ಕಾರಣವಾಗಬಹುದು. ಇಸ್ರೋದ ನೆಟ್‌ವರ್ಕ್ ಫಾರ್ ಆಬ್ಜೆಕ್ಟ್ಸ್ ಟ್ರ್ಯಾಕಿಂಗ್ ಮತ್ತು ಅನಾಲಿಸಿಸ್ (NETRA) ಮುಖ್ಯಸ್ಥರಾಗಿರುವ ಡಾ. ಎ.ಕೆ ಅನಿಲ್ ಕುಮಾರ್ ʼಈ ಕ್ಷುದ್ರ ಗ್ರಹ ಭೂಮಿಗೆ ಡಿಕ್ಕಿ ಹೊಡೆದರೆ ಅದು ದೊಡ್ಡ ದುರಂತವನ್ನೇ ಉಂಟುಮಾಡಬಹುದು ಮತ್ತು ಇದು ಭೂಮಿಗೆ ಅಪ್ಪಳಿಸಿದರೆ ಅದರಿಂದ ಉಂಟಾಗುವ ಧೂಳು ಜಾಗತಿಕವಾಗಿ ವಾತಾವರಣದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದುʼ ಎಂದು ಹೇಳಿದ್ದಾರೆ.
“ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಕ್ಷುದ್ರಗ್ರಹದ ಪಥವನ್ನು ಅಧ್ಯಯನ ಮಾಡಲು ಮಾತ್ರವಲ್ಲದೆ ಅದರ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು ಹಲವಾರು ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. NASAದ OSIRIS-REx ಕ್ಷುದ್ರಗ್ರಹದಿಂದ ಮಾದರಿಗಳನ್ನು ಹಿಂದಿರುಗಿಸಿದ ಮೊದಲ ಅಮೇರಿಕನ್ ಬಾಹ್ಯಾಕಾಶ ನೌಕೆಯಾಗಿದೆ ಮತ್ತು ಈಗ ಅದನ್ನು ಅಪೋಫಿಸ್‌ನೊಂದಿಗೆ ಸಂಧಿಸಲು ಮರುನಿರ್ದೇಶಿಸಲಾಗುತ್ತಿದೆ. ಹಾಗೂ ಇದರೊಂದಿಗೆ RAMSES ಎಂಬ ಹೆಸರಿನ ರಾಪಿಡ್ ಅಪೋಫಿಸ್ ಮಿಷನ್ ಅನ್ನು 2028 ರಲ್ಲಿ ಪ್ರಾರಂಭಿಸಬಹುದು. ಭಾರತವು ಕೂಡಾ ಈ ಕಾರ್ಯಾಚರಣೆಯಲ್ಲಿ ಸೇರಬಹುದು” ಎಂದು ಡಾ ಸೋಮನಾಥ್ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ