ಈಗಂತೂ ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು, ಡಾನ್ಸ್ ಸಂಬಂಧಿ ರೀಲ್ಸ್ ವಿಡಿಯೋಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಯಾವುದಾದರೂ ಒಂದು ಹಾಡು ಫೇಮಸ್ ಆದ್ರೆ ಸಾಕು ಎಲ್ಲರೂ ಅದೇ ಹಾಡಿಗೆ ಹೆಜ್ಜೆ ಹಾಕಿ ಆ ಡಾನ್ಸ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಬಿಡುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತೀಯ ಸಿನೆಮಾ ಹಾಡುಗಳಿಗೆ ಭಾರತೀಯರು ಮಾತ್ರವಲ್ಲದೇ ವಿದೇಶಿಗರು ಕೂಡಾ ಬಹಳ ಸೊಗಸಾಗಿ ಹೆಜ್ಜೆ ಹಾಕುವಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಅದೇ ರೀತಿ ಜಪಾನ್ ದೇಶದ ಡಾನ್ಸರ್ಸ್ ಚೆಲುವಿನ ಚಿಲಿಪಿಲಿ ಚಲನಚಿತ್ರದ ನಿಜನಾ… ನಾನೇನಾ… ಹಾಡಿಗೆ ಬಹಳ ಅದ್ಭುತವಾಗಿ ನೃತ್ಯ ಮಾಡಿದ್ದು, ಈ ರೀಲ್ಸ್ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಜಪಾನಿನ ಡಿಜಿಟಲ್ ಕ್ರಿಯೇಟರ್ ಆಗಿರುವ Kaketaku (@kaketaku.japan) ಎಂಬವರು ತಮ್ಮ ಡಾನ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಜಪಾನಿನ ಜೋಡಿಯೊಂದು ಚೆಲುವಿನ ಚಿಲಿಪಿಲಿ ಚಲನಚಿತ್ರದ ನಿಜನಾ… ನಾನೇನಾ… ಹಾಡಿಗೆ ಅದ್ಭುತವಾಗಿ ನೃತ್ಯ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮುಂಬೈ ಲೋಕಲ್ ಟ್ರೈನ್ನಲ್ಲಿ ಕಾನ್‌ಸ್ಟೆಬಲ್ ಮುಂದೆ ಯುವತಿ ಡ್ಯಾನ್ಸ್, ಪೇದೆ ಏನು ಮಾಡಿದರು ವಿಡಿಯೋ ನೋಡಿ!
Kaketaku ಅವರು ಡಿಜಿಟಲ್ ಕ್ರಿಯೆಟರ್ ಮಾತ್ರವಲ್ಲದೆ, ಡಾನ್ಸ್ ಕೊರಿಯೋಗ್ರಾಫರ್ ಕೂಡಾ ಹೌದು. ಇವರು ಹೆಚ್ಚಾಗಿ ಭಾರತೀಯ ಸಿನೆಮಾ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ನಮ್ಮ ಕನ್ನಡದ ಹಾಡಿಗೆ ನೃತ್ಯ ಮಾಡಿ, ಕನ್ನಡಿಗರ ಮನಗೆದ್ದಿದ್ದಾರೆ.
ಡಿಸೆಂಬರ್ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 210K ಲೈಕ್ಸ್ಗಳನ್ನು ಪಡದುಕೊಂಡಿದೆ. ಹಾಗೂ ಇವರ ನೃತ್ಯವನ್ನು ಮೆಚ್ಚಿ ಹಲವರು ಕಮೆಂಟ್ಸ್ಗಳನ್ನು ಕೂಡಾ ಬರೆದುಕೊಂಡಿದ್ದಾರೆ. ಒಬ್ಬ ಬಳಕೆದಾರರು ʼಕನ್ನಡ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಅದ್ಭುತವಾದ ನೃತ್ಯʼ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನೂ ಹಲವರು ಕನ್ನಡ ಹಾಡನ್ನು ಕೇಳಿ ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ: