ಸೌಜನ್ಯ ಪಾಠ: ಜಪಾನಿನ ಮಕ್ಕಳು ಈ ಬಸ್ಸಿನಲ್ಲಿ ಹೊರಟಿದ್ದಾರೆ, ಮುಂದೇನಾಗುತ್ತದೆ?

| Updated By: ಶ್ರೀದೇವಿ ಕಳಸದ

Updated on: Dec 10, 2022 | 11:10 AM

Japanese Kids : ಎಳವೆಯಲ್ಲಿಯೇ, ದಯೆ, ಸಹಾನುಭೂತಿಯಂಥ ಮಾನವೀಯತೆಯ ಬೀಜವನ್ನು ಮಕ್ಕಳಲ್ಲಿ ಬಿತ್ತಬೇಕು. ಅದಕ್ಕಾಗಿ ಪಠ್ಯಪುಸ್ತಕಕ್ಕಿಂತ ಇಂಥ ಪ್ರಾಯೋಗಿಕ ಪಾಠಗಳೇ ಬಹಳ ಮುಖ್ಯ. ನೆಟ್ಟಿಗರೂ ಇದನ್ನು ಬೆಂಬಲಿಸುತ್ತಿದ್ದಾರೆ.

ಸೌಜನ್ಯ ಪಾಠ: ಜಪಾನಿನ ಮಕ್ಕಳು ಈ ಬಸ್ಸಿನಲ್ಲಿ ಹೊರಟಿದ್ದಾರೆ, ಮುಂದೇನಾಗುತ್ತದೆ?
ಬಸ್ಸಿನಲ್ಲಿ ಸೌಜನ್ಯ ಪಾಠ
Follow us on

Viral Video : ಪಠ್ಯಪುಸ್ತಕಕ್ಕಿಂತ ಪ್ರಾಯೋಗಿಕವಾಗಿ ಹೇಳಿಕೊಡುವ ಪಾಠಗಳೇ ಮಗುವಿನ ಕಲಿಕೆಗೆ ಮತ್ತು ಬದುಕಿಗೆ ಹೆಚ್ಚು ಪೂರಕವಾಗಿರುತ್ತವೆ. ಜಪಾನಿನ ಶಿಕ್ಷಣ ವ್ಯವಸ್ಥೆ ಈ ವಿಷಯವಾಗಿ ಮುಂಚೂಣಿಯಲ್ಲಿದೆ. ಬಸ್ಸಿನಲ್ಲಿ ಪ್ರಯಾಣಿಸುವಾಗ ನಮ್ಮ ನಡೆವಳಿಕೆಗಳು ಎಷ್ಟು ಸೌಜನ್ಯಯುತವಾಗಿ ಕೂಡಿರಬೇಕು ಎಂಬ ಪ್ರಾತ್ಯಕ್ಷಿಕೆಯೊಂದಿಗೆ ಈ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ ಈ ವಿಡಿಯೋದಲ್ಲಿ. ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಎಸ್ ಅಧಿಕಾರಿ ಅವನೀಶ ಶರಣ ಟ್ವೀಟ್ ಮಾಡಿದ್ದಾರೆ.

ಸಹಾನುಭೂತಿ, ಕರುಣೆ, ದಯೆಯಂಥ ಮಾನವೀಯ ಗುಣಗಳ ಬೀಜವನ್ನು ಎಳವೆಯಲ್ಲಿಯೇ ಬಿತ್ತಬೇಕು. ಅದಕ್ಕೆ ಮನೆಯಲ್ಲಿಯೂ ಶಾಲೆಯಲ್ಲಿಯೂ ಮಾರ್ಗದರ್ಶನ ಅತ್ಯವಶ್ಯ. ಸಾರ್ವಜನಿಕ ಸ್ಥಳದಲ್ಲಿ ಮಕ್ಕಳು ಪರಸ್ಪರ ಸಂವಹನ ಹೇಗೆ ನಡೆಸಬೇಕು ಎನ್ನುವುದಂತೂ ಬಹಳೇ ಮುಖ್ಯ. ಈ ವಿಷಯವಾಗಿ ಬೋಧನೆ ಮಾಡಿದರೆ ಸಾಲದು. ಪ್ರಯೋಗ ಮತ್ತು ಪ್ರಾತ್ಯಕ್ಷಿಕೆ ಮೂಲಕವೇ ಮಕ್ಕಳಿಗೆ ಹೇಳಿಕೊಡಬೇಕು. ಅಂದಾಗ ಮಾತ್ರ ಮಕ್ಕಳ ಸ್ಮೃತಿಪಟಲದಲ್ಲಿ ಇಂಥ ವಿಷಯಗಳು ಅಚ್ಚಾಗುತ್ತವೆ.

ತರಗತಿಯೊಳಗೆ ‘ಕಲ್ಪನೆಯ ಬಸ್ಸು’ ಬಂದಿದೆ.  ಪ್ರಯಾಣಿಕರು ತಮ್ಮ ಆಸನಗಳಲ್ಲಿ ಕುಳಿತಿದ್ದಾರೆ. ಡ್ರೈವರ್ ಗಾಡಿ ಓಡಿಸುತ್ತಿದ್ದಾರೆ. ವಯಸ್ಸಾದ ಅಜ್ಜ, ಗರ್ಭಿಣಿ, ಶಾಲಾ ಮಗು ಹೀಗೆ ಒಬ್ಬೊಬ್ಬರೇ ಬಂದಾಗ ಉಳಿದ ಪ್ರಯಾಣಿಕರು ಸೌಜನ್ಯಯುತವಾಗಿ ಆಸನವನ್ನು ಬಿಟ್ಟು ಕೊಡುತ್ತಾರೆ.

ಈ ವಿಡಿಯೋ ಅನ್ನು ಈತನಕ 4 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಇಂಥ ಪ್ರಾಯೋಗಿಕ ಪಾಠದ ಅವಶ್ಯಕತೆ ಜಗತ್ತಿನ ಎಲ್ಲ ಮಕ್ಕಳಿಗೂ ದೊರೆಯಬೇಕು ಎಂದು ಬೆಂಬಲ ಸೂಚಿಸಿದ್ದಾರೆ.

ಈ ವಿಡಿಯೋ ನೋಡಿದ ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 11:09 am, Sat, 10 December 22