
ಮುಂಬೈ: ಇಂಟರ್ವ್ಯೂನಲ್ಲಿ ನಿಮ್ಮ ಪ್ರತಿಭೆ ಎಷ್ಟು ಮುಖ್ಯವೋ, ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ವರ್ತನೆ ಕೂಡ ಅಷ್ಟೇ ಮುಖ್ಯ. ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ, ಅಮೆಜಾನ್ ಪ್ರೈಮ್ ವಿಡಿಯೋ (Prime Video) ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ಅಭ್ಯರ್ಥಿಯೊಬ್ಬಳನ್ನು ಇಂಟರ್ವ್ಯೂ ಆರಂಭವಾಗುವ ಮುನ್ನವೇ ರಿಜೆಕ್ಟ್ ಮಾಡಿದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಕಾರಣ ಆಕೆ ಧರಿಸಿದ್ದ ಟಿ-ಶರ್ಟ್. ಪ್ರೈಮ್ ವಿಡಿಯೋದ ಸೋಶಿಯಲ್ ಮತ್ತು ಎಡಿಟೋರಿಯಲ್ ಲೀಡ್ ಆಗಿರುವ ಭಾವಿಷಾ ಜೈನ್ (Bhavisha Jain) ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಈಗ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಭಾವಿಷಾ ಜೈನ್ ತಿಳಿಸಿರುವ ಪ್ರಕಾರ, ಮೂರು ತಿಂಗಳ ಹಿಂದೆ ಅವರು ತಮ್ಮ ತಂಡದ ಕಾಂಟೆಂಟ್ ಕ್ರಿಯೇಷನ್ ಅಥವಾ ಕಲ್ಪನಾತ್ಮಕ (Creative Role) ಹುದ್ದೆಗಾಗಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದರು. ಆಗ ಒಬ್ಬ ಯುವತಿಯ ಸಿವಿ (CV) ಅವರಿಗೆ ತುಂಬಾ ಇಷ್ಟವಾಗಿತ್ತು. ಆಕೆಗೆ ಪ್ರಮುಖ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡಿದ ಅನುಭವವಿತ್ತು ಮತ್ತು ಸೋಶಿಯಲ್ ಮೀಡಿಯಾದಲ್ಲಿ 50,000ಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಆಕೆಯ ಪ್ರತಿಭೆ ನೋಡಿ ಭಾವಿಷಾ ಪ್ರಭಾವಿತರಾಗಿದ್ದರು. ಆದರೆ, ಇಂಟರ್ವ್ಯೂ ದಿನದಂದು ಆ ಯುವತಿ ಕ್ಯಾಮೆರಾ ಮುಂದೆ ಬಂದಾಗ ಭಾವಿಷಾ ಅವರಿಗೆ ಶಾಕ್ ಕಾದಿತ್ತು. ಆಕೆ ಧರಿಸಿದ್ದ ಟಿ-ಶರ್ಟ್ ಮೇಲೆ ದೊಡ್ಡದಾಗಿ ಹೀಗೆ ಬರೆಯಲಾಗಿತ್ತು:“I am too hot for a job” (ಅಂದರೆ, ‘ಕೆಲಸ ಮಾಡಲು ನಾನು ತುಂಬಾ ಹಾಟ್ ಆಗಿದ್ದೇನೆ’ ಅಥವಾ ‘ಈ ಕೆಲಸಕ್ಕಿಂತ ನಾನು ಮಿಗಿಲಾದವಳು’). ಇದನ್ನು ನೋಡಿದ ತಕ್ಷಣ ಭಾವಿಷಾ ಅವರು ಇಂಟರ್ವ್ಯೂ ಪ್ರಕ್ರಿಯೆಯನ್ನು ಅಲ್ಲಿಗೇ ನಿಲ್ಲಿಸಿ, ಆಕೆಯನ್ನು ಕೆಲಸಕ್ಕೆ ಆಯ್ಕೆ ಮಾಡದಿರಲು ನಿರ್ಧರಿಸಿದರು.
ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ
ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಭಾವಿಷಾ, “ನಾನು ಆಕೆಯನ್ನು ರಿಜೆಕ್ಟ್ ಮಾಡಿದ್ದು ಆಕೆ ಫಾರ್ಮಲ್ ಬಟ್ಟೆ ಹಾಕಿಲ್ಲ ಎಂದಾಗಲಿ ಅಥವಾ ಗ್ಲಾಮರಸ್ ಆಗಿದ್ದಾಳೆ ಎಂದಾಗಲಿ ಅಲ್ಲ. ಬದಲಿಗೆ, ಆಕೆ ಧರಿಸಿದ್ದ ಬಟ್ಟೆಯ ಮೇಲಿನ ಸಂದೇಶ ಅವಳಿಗೆ ಈ ಕೆಲಸದ ಮೇಲೆ ಗೌರವ ಇಲ್ಲ ಎನ್ನುವುದನ್ನು ತೋರಿಸುತ್ತಿತ್ತು. ನಾವು ಮದುವೆಗೆ ಸ್ವಿಮ್‌ಸೂಟ್ ಹಾಕಿಕೊಂಡು ಹೋಗಲ್ಲ, ಜಿಮ್‌ಗೆ ಟುಕ್ಸೆಡೋ (ಕೋಟ್ ಸೂಟ್) ಧರಿಸಲ್ಲ. ಸಂದರ್ಭಕ್ಕೆ ತಕ್ಕಂತೆ ಇರುವುದು ಕನಿಷ್ಠ ಜವಾಬ್ದಾರಿ” ಎಂದಿದ್ದಾರೆ. “ನಿಮ್ಮನ್ನು ನೀವು ಸಾಬೀತುಪಡಿಸಲು ಇಂಟರ್ವ್ಯೂನಲ್ಲಿ ಕೇವಲ 30 ನಿಮಿಷ ಸಿಗುತ್ತದೆ. ನಿಮ್ಮ ಮಾತು, ನಿಮ್ಮ ಕೆಲಸದ ಫೈಲ್ ಜೊತೆಗೆ ನಿಮ್ಮ ಬಟ್ಟೆಯ ಮೇಲಿರುವ ಬರಹವೂ ನಿಮ್ಮ ವ್ಯಕ್ತಿತ್ವವನ್ನು ಕಮ್ಯುನಿಕೇಟ್ ಮಾಡುತ್ತದೆ. ಆಕೆ ಇಂಟರ್ವ್ಯೂ ಶುರುವಾಗುವ ಮುನ್ನವೇ ತಾನು ಈ ಕೆಲಸಕ್ಕೆ ಮಿಗಿಲಾದವಳು ಎಂದು ಹೇಳಿಕೊಂಡಿದ್ದಳು, ನಾನು ಅದನ್ನೇ ನಂಬಿ ರಿಜೆಕ್ಟ್ ಮಾಡಿದೆ” ಎಂದು ಭಾವಿಷಾ ಬರೆದುಕೊಂಡಿದ್ದಾರೆ. ಸದ್ಯ ಪೋಸ್ಟ್ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ