ಕರ್ನಾಟಕ ಟಿಇಟಿ ಪರೀಕ್ಷೆ; ವಿದ್ಯಾರ್ಥಿನಿಯ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್​ ಫೋಟೋ

| Updated By: ಶ್ರೀದೇವಿ ಕಳಸದ

Updated on: Nov 09, 2022 | 3:42 PM

Sunny Leone’s Photo Appears On Hall Ticket : ವಿದ್ಯಾರ್ಥಿನಿಯೊಬ್ಬರ ಪ್ರವೇಶ ಪತ್ರದಲ್ಲಿ ನಟಿ ಸನ್ನಿ ಲಿಯೋನ್​ ಭಾವಚಿತ್ರವು ಅಚ್ಚಾಗಿದ್ದು, ಸ್ಕ್ರೀನ್ ಶಾಟ್​ ಇದೀಗ ವೈರಲ್ ಆಗುತ್ತಿದೆ. ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರಲಿದೆ.

ಕರ್ನಾಟಕ ಟಿಇಟಿ ಪರೀಕ್ಷೆ; ವಿದ್ಯಾರ್ಥಿನಿಯ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್​ ಫೋಟೋ
Karnataka TET Exam Sunny Leones Photo Appears On Hall Ticket Of Candidate
Follow us on

Viral News : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ವಿದ್ಯಾರ್ಥಿನಿಯು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET 2022) ಬರೆಯಲು ಶಿವಮೊಗ್ಗದ ರುದ್ರಪ್ಪ ಕಾಲೇಜಿಗೆ ಇತ್ತೀಚೆಗೆ ಹಾಜರಾಗಿದ್ದರು. ಆದರೆ ಇವರ ಪ್ರವೇಶ ಪತ್ರದಲ್ಲಿ ಇವರ ಫೋಟೋ ಬದಲಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಅಚ್ಚಾಗಿತ್ತು. ಇದೀಗ ಪ್ರವೇಶ ಪತ್ರದ ಸ್ಕ್ರೀನ್ ಶಾಟ್ ಮೂಲಕ ಈ ವಿಷಯ ಬಯಲಾಗುತ್ತಿದೆ. ಕಾಲೇಜಿನ ಪ್ರಿನ್ಸಿಪಾಲ್​ ಸೈಬರ್ ಕ್ರೈಮ್​ ವಿಭಾಗಕ್ಕೆ ಈ ಕುರಿತು ದೂರು ಸಲ್ಲಿಸಿದ್ದಾರೆ.

ಈ ಸ್ಕ್ರೀನ್ ಶಾಟ್​ ನೆಟ್ಟಿಗರನ್ನು ರಂಜಿಸುತ್ತಿದೆಯಾದರೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಇದು ಎತ್ತಿ ತೋರಿಸುತ್ತಿದೆ. ಪಿಟಿಐ ವರದಿಯ ಪ್ರಕಾರ, ‘ಆನ್​ಲೈನ್​ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಪ್‌ಲೋಡ್ ಮಾಡುವಾಗ ಈ ಅಚಾತುರ್ಯ ಸಂಭವಿಸಿದೆ. ನನ್ನ ಪರವಾಗಿ ಬೇರೆಯವರಲ್ಲಿ ಅಪ್​ಲೋಡ್ ಮಾಡಲು ಕೇಳಿಕೊಂಡಿದ್ದೆ’ ಎಂದು ವಿದ್ಯಾರ್ಥಿನಿಯು ಹೇಳಿದ್ದಾರೆ.

ಯೂಸರ್ ಐಡಿ ಮತ್ತು ಪಾಸ್​ವರ್ಡ್​ ಅನ್ನು ಅಭ್ಯರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ. ಅವರೇ ಸ್ವತಃ ಆನ್​ಲೈನ್​ನಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು. ಅವರಲ್ಲದೆ ಇನ್ನ್ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷ ಬಿ. ಆರ್. ನಾಯ್ಡು, ‘ರಾಜ್ಯ ಶಿಕ್ಷಣ ಇಲಾಖೆಯು ಅಭ್ಯರ್ಥಿಯ ಫೋಟೋದ ಬದಲಾಗಿ, ನಟಿ ಸನ್ನಿ ಲಿಯೋನ್ ಫೋಟೋವನ್ನು ಹಾಲ್​ಟಿಕೆಟ್​ನಲ್ಲಿ ಮುದ್ರಿಸಿದೆ’ ಎಂದು ಆರೋಪಿಸಿದ್ದಾರೆ.

ನಾಯ್ಡು ಅವರ ಈ ಆರೋಪಕ್ಕೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರ ಕಚೇರಿ ವಲಯವು, ‘ಅರ್ಜಿಯನ್ನು ಸ್ವತಃ  ಅಭ್ಯರ್ಥಿಯೇ ತುಂಬಿ ಅಪ್​ಲೋಡ್​ ಮಾಡಬೇಕು. ಅವರು ಯಾವ ಫೋಟೋ ಲಗತ್ತಿಸುತ್ತಾರೋ ಅದೇ ಫೋಟೋ ಅನ್ನು ಅದು ತೆಗೆದುಕೊಳ್ಳುತ್ತದೆ.’ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಈ ಸ್ಕ್ರೀನ್ ಶಾಟ್​ನ ಟ್ವೀಟ್​ನಲ್ಲಿ, ‘ತನ್ನ ಗಂಡನ ಸಹಾಯದಿಂದ ಅರ್ಜಿ ಭರ್ತಿ ಮಾಡಿ ಪೋರ್ಟಲ್​ಗೆ ಅಪ್​ಲೋಡ್ ಮಾಡಲಾಗಿದೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ’ ಎಂದು ತಿಳಿಸಲಾಗಿದೆ.

ಸತ್ಯಾಂಶವೇನೆಂಬುದು ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 3:17 pm, Wed, 9 November 22