ಮಾನವೀಯತೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ಹೌದು ಈ ಸಮಾಜ ಎಷ್ಟೇ ಮುಂದುವರೆದಿದ್ದರೂ ಮನುಷ್ಯರಾದ ನಮ್ಮಲ್ಲಿ ಮಾನವೀಯತೆ, ದಯಾ ಗುಣ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ನಾವು ಮಾಡುವ ಸಣ್ಣ ಸಹಾಯ ಹಾಗೂ ಮಾನವೀಯ ಕಾರ್ಯ ಇನ್ನೊಬ್ಬರ ಜೀವನವನ್ನೇ ಬೆಳಗಿಸುತ್ತದೆ. ಹೀಗೆ ತೊಂದರೆಗೀಡಾದ ಪ್ರಾಣಿಗಳನ್ನು ರಕ್ಷಿಸುವ, ಇತರರ ಸಹಾಯಕ್ಕೆ ಧಾವಿಸುವ ಮಾನವೀಯ ಗುಣವಿರುವ ಹಲವು ಜನರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ನದಿ ನೀರಿನಲ್ಲಿ ಸಿಲುಕಿದ ಮುದ್ದಾದ ನಾಯಿ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾಳೆ.
ಈ ವಿಡಿಯೋವನ್ನು @1hakankapucu ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸಹಾಯಸ್ತಾಕ್ಕಾಗಿ ಅಳುತ್ತಿದ್ದ ನಾಯಿ ಮರಿಯನ್ನು ಸಮಾಧಾನಪಡಿಸಿ, ಅದರ ಪ್ರಾಣ ರಕ್ಷಣೆ ಮಾಡಿದ ಯುವತಿ” ಎಂಬ ಶಿರ್ಷಿಕೆಯನ್ನು ಬರೆಯಲಾಗಿದೆ.
This puppy traps himself in a stream & cries for help. This woman first connects with the dog & carries him to safety. Doing good is a simple will. pic.twitter.com/v6PFiC8k5L
— Hakan Kapucu (@1hakankapucu) May 16, 2024
ವೈರಲ್ ವಿಡಿಯೋದಲ್ಲಿ ಪುಟಾಣಿ ನಾಯಿಮರಿಯೊಂದು ಹರಿಯುವ ನೀರಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ದೃಶ್ಯವನ್ನು ಕಾಣಬಹುದು. ನೀರಿನ ರಭಸಕ್ಕೆ ಮೇಲೆ ಬರಲಾರದೆ ಅಲ್ಲೇ ನಿಂತು ಯಾರಾದರೂ ನನ್ನ ಪ್ರಾಣವನ್ನು ಕಾಪಾಡಿ ಎಂದು ಜೋರಾಗಿ ಅಳುತ್ತದೆ. ಶ್ವಾನ ಅಳುವ ಸದ್ದನ್ನು ಕೇಳಿ ಅಲ್ಲಿಗೆ ಧಾವಿಸಿದ ಯುವತಿಯೊಬ್ಬಳು ನೀರಿಗಿಳಿದು, ಶ್ವಾನವನ್ನು ನಿಧಾನಕ್ಕೆ ಸಮಾಧಾನಪಡಿಸಿ, ನೀರಿನಿಂದ ಶ್ವಾನವನ್ನು ಎತ್ತಿಕೊಂಡು ಬಂದು ಅದರ ಪ್ರಾಣ ರಕ್ಷಣೆ ಮಾಡಿದ್ದಾಳೆ.
ಇದನ್ನೂ ಓದಿ; ಧಗಧಗನೆ ಹೊತ್ತಿ ಉರಿದ ಬುಲೆಟ್ ಬೈಕ್, ಬೆಂಕಿ ನಂದಿಸುವಾಗ ಪೆಟ್ರೋಲ್ ಟ್ಯಾಂಕ್ ಸ್ಫೋಟ, 10 ಮಂದಿಗೆ ಗಾಯ
ಮೇ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯುವತಿಯ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ