ಭಾರತೀಯ ಪಾಕ ಪದ್ಧತಿ ಬಹಳನೇ ವಿಶೇಷವಾದದ್ದು, ವಿವಿಧ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಭಾರತೀಯ ಭಕ್ಷ್ಯಗಳು ಬೇರೆ ದೇಶಗಳ ಆಹಾರಗಳಿಗಿಂತ ಭಿನ್ನವಾಗಿರುತ್ತದೆ. ರುಚಿಕರವಾದ ಭಾರತೀಯ ಭಕ್ಷ್ಯಗಳೆಂದರೆ ವಿದೇಶಿಯರಿಗೂ ಬಲು ಇಷ್ಟ. ಹೀಗೆ ಸಾಕಷ್ಟು ಮಂದಿ ನಮ್ಮ ದೇಶದ ಪಾಕ ಪದ್ಧತಿಗೆ ಫಿದಾ ಆಗಿದ್ದಾರೆ. ಇದಕ್ಕೆ ನಿದರ್ಶನದಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಗಳು ಸಖತ್ ವೈರಲ್ ಆಗುವುದರ ಜೊತೆಗೆ ಭಾರತೀಯರಾದ ನಮ್ಮ ಮನಸ್ಸಿಗೂ ಖುಷಿಯನ್ನು ಕೊಡುತ್ತದೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಕೊರಿಯನ್ ಚೆಲುವೆಯೊಬ್ಬಳು ಮೊದಲ ಬಾರಿಗೆ ಭಾರತೀಯ ಭಕ್ಷ್ಯವನ್ನು ಸವಿದು, ಖುಷಿಯಲ್ಲಿ ತೇಲಾಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋದಲ್ಲಿ ಕೊರಿಯನ್ ಚೆಲುವೆಯೊಬ್ಬಳು ಮಲೇಷ್ಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಅನ್ನ ಸಾಂಬರ್, ಪಲ್ಯ, ಲಸ್ಸಿ ಇತ್ಯಾದಿ ಭಾರತೀಯ ಭಕ್ಷ್ಯಗಳನ್ನು ಬಹಳ ಆನಂದದಿಂದ ಸವಿಯುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @spiz_edits ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಲೇಷ್ಯಾದಲ್ಲಿ ಭಾರತೀಯ ಭಕ್ಷ್ಯವನ್ನು ಸವಿದ ಕೊರಿಯನ್ ಯುವತಿ, ಭಾರತೀಯ ಆಹಾರದ ರುಚಿಗೆ ಮನಸೋತಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಮಲೇಷ್ಯಾದ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಕೊರಿಯಾ ದೇಶದ ಯುವತಿಯೊಬ್ಬಳು ಬಹಳ ಎಂಜಾಯ್ ಮಾಡುತ್ತಾ ಭಾರತೀಯ ಭಕ್ಷ್ಯಗಳನ್ನು ಸವಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆಗೆ ಬಾಳೆ ಎಲೆಯಲ್ಲಿ ಅನ್ನ ಸಾಂಬಾರ್, ಪಲ್ಯ, ಹಪ್ಪಳವನ್ನು ಬಡಿಸಲಾಗಿತ್ತು, ಅನ್ನ ಸಾಂಬಾರ್ ಸವಿದ ಆಕೆ ಇದರ ಟೇಸ್ಟ್ ಅಂತೂ ತುಂಬಾನೇ ಅದ್ಭುತವಾಗಿದೆ ಎಂದು ಹೇಳುತ್ತಾಳೆ. ನಂತರ ಹಪ್ಪಳವನ್ನು ಹೇಗೆ ತಿನ್ನೋದು ಎಂದು ಅಲ್ಲಿರುವವರ ಬಳಿ ಕೇಳಿ ನಂತರ ಕರುಮ್ ಕುರುಮ್ ಎಂದು ಹಪ್ಪಳವನ್ನು ತಿನ್ನುತ್ತಾ ಇದಂತೂ ನನ್ನ ಫೇವೆರಟ್ ಎಂದು ಹೇಳುತ್ತಾಳೆ. ಕೊನೆಯಲ್ಲಿ ಭಾರತೀಯ ಭಕ್ಷ್ಯಗಳಂತೂ ತುಂಬಾನೇ ಅದ್ಭುತವಾಗಿದೆ ಎನ್ನುತ್ತಾ, ಆಕೆ ಖುಷಿಯಲ್ಲಿ ತೇಲಾಡುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಈ ಹೆಡ್ ಪೋನ್ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ
ಫೆಬ್ರವರಿ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼನಾನು ಮಾಲೇಷಿಯಾದವಳು. ನನಗೂ ಭಾರತೀಯಾ ಭಕ್ಷ್ಯಗಳೆಂದರೆ ತುಂಬಾನೇ ಇಷ್ಟʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಭಾರತ ನಿಜಕ್ಕೂ ಅದ್ಭುತವಲ್ಲವೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಹುಡುಗಿಯ ಪ್ರತಿಕ್ರಿಯೆ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ