ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತನ್ನು ನೀವೆಲ್ಲರೂ ಕೇಳಿರಬಹುದಲ್ವಾ. ಒಗ್ಗಟ್ಟಿನ ಬಲವೇ ಅಂತಹದ್ದು. ಒಂಟಿಯಾಗಿ ಇದ್ದಾಗ ಇರುವ ಬಲ, ಧೈರ್ಯಕ್ಕಿಂತ ಒಗ್ಗಟ್ಟಿನಲ್ಲಿರುವ ಶಕ್ತಿ ತುಂಬಾನೇ ದೊಡ್ಡದು. ಹೌದು ಈ ಒಗ್ಗಟ್ಟು ಎಂತಹ ಸಮಸ್ಯೆಯಿಂದಲೂ ಪಾರಾಗುವ ಧೈರ್ಯವನ್ನು ನಮ್ಮಲ್ಲಿ ತುಂಬುತ್ತದೆ, ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸುವ ಹಮ್ಮಸ್ಸನ್ನು, ಛಲವನ್ನು ತರುತ್ತದೆ. ಹೀಗೆ ನಮ್ಮಲ್ಲಿ ಒಗ್ಗಟ್ಟಿದ್ದರೆ ಎಂತಹ ಕಷ್ಟಗಳನ್ನು ಬೇಕಾದರೂ ಜಯಿಸಬಹುದು. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ತನ್ನವರ ಮೇಲೆ ದಾಳಿ ಮಾಡಲು ಮುಂದಾದಂತಹ ಮೊಸಳೆಗೆ ಹಿಪ್ಪೋಗಳ ಗುಂಪೊಂದು ಸರಿಯಾದ ಪಾಠ ಕಲಿಸಿವೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನೀರ್ಗುದುರೆಯ ಮೇಲೆ ದಾಳಿ ಮಾಡಲು ಬಂದಂತಹ ಮೊಸಳೆಯನ್ನು ಉಗ್ರರೂಪವನ್ನು ತಾಳಿದಂತಹ ಹಿಪ್ಪೋಗಳ ಗುಂಪೊಂದು ಹುರಿದು ಮುಕ್ಕುವಂತಹ ಭಯಾನಕ ದೃಶ್ಯವನ್ನು ಕಾಣಬಹುದು. ಶೆಲ್ಲಿ (@iamshellieb2) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾವು ಪ್ರಾಣಿ ಸಾಮ್ರಾಜ್ಯದಿಂದ ಬಹಳಷ್ಟು ಕಲಿಯುವುದಿದೆ; ನಮ್ಮವನನ್ನೇ ನೀನು ನೋಯಿಸಿದ್ದೀಯಾ, ಇದಕ್ಕೆ ನೀನು ಸರಿಯಾದ ಬೆಲೆ ತೆರುತ್ತೀಯಾ ಎಂದು ಹಿಪ್ಪೋಗಳ ಗುಂಪೊಂದು ಮೊಸಳೆಯ ಮೇಲೆ ದಾಳಿ ನಡೆಸಿವೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಹಿಪ್ಪೋಗಳ ಗುಂಪೊಂದು ತಮ್ಮ ಒಗ್ಗಟ್ಟಿನ ಬಲವನ್ನು ಪ್ರದರ್ಶಿಸುತ್ತಿರುವ ದೃಶ್ಯವನ್ನು ಕಾಣಬಹುದು. ನನ್ನ ಕುಟುಂಬದವರೆಲ್ಲರೂ ನದಿಯ ಆ ಮೂಲೆಯಲ್ಲಿದ್ದಾರೆ, ನಾನು ಕೂಡಾ ಅಲ್ಲೇ ಹೋಗುತ್ತೇನೆ ಎಂದು ಒಬ್ಬಂಟಿ ಹಿಪ್ಪೋ ಅತ್ತ ಕಡೆ ಹೋಗಲು ಪ್ರಯತ್ನಿಸುತ್ತದೆ. ಆ ಸಂದರ್ಭದಲ್ಲಿ ತನ್ನ ಬೇಟೆಗಾಗಿ ಹೊಂಚು ಹಾಕಿ ನಿಂತಿದ್ದ ಮೊಸಳೆಯೊಂದು ಅಬ್ಬಬ್ಬಾ ಈ ದಿನ ನನಗೆ ಭರ್ಜರಿ ಭೋಜನ ಎನ್ನುತ್ತಾ ದೈತ್ಯ ಹಿಪ್ಪೋವನ್ನು ಬೇಟೆಯಾಡಲು ಮುಂದಾಗುತ್ತದೆ. ಈ ದೃಶ್ಯವನ್ನು ಕಂಡಂತಹ ಹಿಪ್ಪೋಗಳ ಗುಂಪು ನಮ್ಮ ಕುಟುಂಬದವನ ಮೇಲೆ ದಾಳಿ ನಡೆಸಲು ನಿನಗೆಷ್ಟು ಧೈರ್ಯ, ಇರು ನಮ್ಮ ಒಗ್ಗಟ್ಟಿನ ಬಲ ಎಂತಹದ್ದು ಎಂದು ನಾವು ಈ ದಿನ ನಿನಗೆ ತೋರಿಸ್ತೀವಿ ಮಗನೇ…. ಎನ್ನುತ್ತಾ ಅಲ್ಲಿದ್ದ ಹಿಪ್ಪೋಗಳು ಜೊತೆಯಾಗಿ ಬಂದು ಆ ಮೊಸಳೆಯ ಮೇಲೆಯೇ ಭೀಕರ ದಾಳಿ ನಡೆಸಿವೆ. ಎಂತಹದ್ದೇ ಕಷ್ಟದ ಸಮಯದಲ್ಲೂ ನಮ್ಮವರನ್ನು ಕೈ ಬಿಡದೆ, ಅವರ ಜೊತೆಯಾಗಿ ನಿಲ್ಲುವ ಮೂಲಕ ಒಗ್ಗಟ್ಟಿನಿಂದ ಎಂತಹ ಕಷ್ಟವನ್ನು ಕೂಡ ಜಯಿಸಬಹುದು ಎಂಬ ಪಾಠವನ್ನು ಈ ನೀರ್ಗುದುರೆಗಳು ಕಲಿಸಿವೆ.
ಇದನ್ನೂ ಓದಿ: ಬೀದಿ ನಾಯಿಯ ದಾಳಿಯಿಂದ ಯುವಕನನ್ನು ರಕ್ಷಿಸಿದ ಮಹಿಳೆ
ಫೆಬ್ರವರಿ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 42.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2.4 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ದೃಶ್ಯ ನೋಡಲು ತುಂಬಾನೇ ಆಸಕ್ತಿದಾಯಕವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾರಾದರೂ ನನ್ನನ್ನು ಕೆಣಕಲು ಬಂದಾದ ಹಿಪ್ಪೋಗಳಂತೆ ಸಪೋರ್ಟ್ ನೀಡುವ ಕುಟುಂಬ ನನಗೆ ಬೇಕಿದೆʼ ಎಂದು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಈ ದೃಶ್ಯವಂತೂ ಭಯಾನಕವಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ