ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎನ್ನುವ ಮಾತಿನಂತೆ ಇಲ್ಲೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದ್ದು, ತಿಂಗಳಿಗೆ 13 ಸಾವಿರ ಸಂಬಳ ಪಡೆಯುವ ಗುತ್ತಿಗೆ ನೌಕರನೊಬ್ಬ ಸರಕಾರಕ್ಕೆಯೇ ಪಂಗನಾಮ ಹಾಕಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. ಈತ ಸರ್ಕಾರಿ ಇಲಾಖೆಯ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬರೋಬ್ಬರಿ 21 ಕೋಟಿ ರೂ. ಲೂಟಿ ಮಾಡಿ, ಆ ಹಣದಿಂದ ಗೆಳತಿಗೆ 4BHK ಫ್ಲ್ಯಾಟ್, ಐಷಾರಾಮಿ ಕಾರ್ ಗಿಫ್ಟ್ ಮಾಡಿದ್ದಾನೆ. ಇದೀಗ ಈತನ ವಂಚನೆ ಬಟಾಬಯಲಾಗಿದೆ.
ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ತಿಂಗಳಿಗೆ 13 ಸಾವಿರ ಸಂಬಳ ಪಡೆಯುತ್ತಿದ್ದ ಸರ್ಕಾರಿ ಗುತ್ತಿಗೆ ನೌಕರ ಸರಕಾರಕ್ಕೆ ಟೋಪಿ ಹಾಕಿ ಬರೋಬ್ಬರಿ 21 ಕೋಟಿ ರೂ. ಹಣವನ್ನು ಲೂಟಿ ಮಾಡಿದ್ದಾನೆ. ಹೌದು ಈತ ಛತ್ರಪತಿ ಸಂಭಾಜಿನಗರದ ಕ್ರೀಡಾ ಇಲಾಖೆಯ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದ್ದಾನೆ. 23 ರ ಹರೆಯದ ಹರ್ಷಲ್ ಕುಮಾರ್ ಕ್ಷೀರಸಾಗರ್ ತನ್ನ ಸಹದ್ಯೋಗಿ ಯಶೋದಾ ಶೆಟ್ಟಿ ಹಾಗೂ ಆಕೆಯ ಪತಿ ಬಿಕೆ ಜೀವನ್ ಜೊತೆ ಸೇರಿ ಈ ವಂಚನೆ ಮಾಡಿದ್ದಾನೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದ ಹರ್ಷಲ್ ಕುಮಾರ್ ತಿಂಗಳಿಗೆ 13 ಸಾವಿರ ಸಂಬಳ ಪಡೆಯುತ್ತಿದ್ದನು. ಆದರೆ ಇದ್ದಕ್ಕಿದ್ದಂತೆ ಈತನ ಜೀವನಶೈಲಿ ಚೇಂಜ್ ಆದದ್ದನ್ನು ಗಮನಿಸಿ ಆತನ ಸಹದ್ಯೋಗಿಗಳು ಶಾಕ್ ಆಗಿದ್ದಾರೆ. ನಂತರ ಹೇಗೋ ಈತನ ವಂಚನೆ ಬಯಲಾಗಿದ್ದು, ಈ ಸುದ್ದಿ ತಿಳಿದು ಎಲ್ಲರು ಬೆಚ್ಚಿ ಬಿದ್ದಿದ್ದಾರೆ.
ಹರ್ಷಲ್ ಕ್ರೀಡಾ ಇಲಾಖೆಯ ನಕಲಿ ಬ್ಯಾಂಕ್ ಖಾತೆಯನ್ನು ಸೃಷ್ಟಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾನೆ. ಹೌದು ಈತ ಹಳೆಯ ಲೆಟರ್‌ಹೆಡ್ ಅನ್ನು ಬಳಸಿಕೊಂಡು ಇಲಾಖೆಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ಬದಲಾಯಿಸುವಂತೆ ವಿನಂತಿಸಿದ್ದಾನೆ. ನಂತರ ಈ ಇಮೇಲ್ ವಿಳಾಸವನ್ನು ಕ್ರೀಡಾ ಇಲಾಖೆಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿ ಅದರ ಮೂಲಕ ಒಟಿಪಿ ಮತ್ತು ಬ್ಯಾಂಕ್ ವಹಿವಾಡಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆದುಕೊಂಡಿದ್ದಾನೆ. ಜೊತೆಗೆ ಚೆಕ್‌ಗಳಿಗೆ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಸಹಿಯನ್ನು ಕೂಡಾ ಹಾಕಿಸಿಕೊಂಡಿದ್ದ. ಮುಂದಿನ ಹಂತವಾಗಿ, ಹರ್ಷಲ್ ಕ್ರೀಡಾ ಇಲಾಖೆಯ ನಕಲಿ ಖಾತೆಯನ್ನು ಸೃಷ್ಟಿಸಿ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಿ ಜುಲೈ 1 ರಿಂದ ಡಿಸೆಂಬರ್ 7 ರ ವೆರಗೆ ಆತ 13 ಬ್ಯಾಂಕ್ ಖಾತೆಗಳಿಗೆ 21.6 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಇದಾದ ನಂತರ ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಇಲ್ಲಿ ಹಣಕಾಸಿನ ಅವ್ಯವಹಾರ ನಡೆಯುತ್ತಿದೆ ಎಂದು ಗಮನಿಸಿ ಪೊಲೀಸ್ ಠಾಣೆಯನ್ನು ದೂರನ್ನು ನೀಡಿದಾಗ, ಪೊಲೀಸ್ ತನಿಖೆಯಲ್ಲಿ ಹರ್ಷಲ್‌ನ ವಂಚನೆ ಬಯಲಾಗಿದೆ. ಲೂಟಿ ಮಾಡಿದ ಹಣದಲ್ಲಿ ಈತ 1.2 ಕೋಟಿ ಮೌಲ್ಯದ ಬಿಎಂಡಬ್ಲ್ಯು ಕಾರು, 1.3 ಕೋಟಿ ಮೌಲ್ಯದ ಎಸ್ ಯುವಿ ಹಾಗೂ 32 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಬೈಕ್ ಖರೀದಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಈತ ತನ್ನ ಗೆಳತಿಗೆ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ ಐಷಾರಾಮಿ 4 BHK ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದನು ಹಾಗೂ ಗೆಳತಿಗಾಗಿ ವಜ್ರದ ಕನ್ನಡಕವನ್ನು ಆರ್ಡರ್ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: 2050ಕ್ಕೆ ಮುಸ್ಲಿಂ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ
ದೂರು ದಾಖಲಾದ ಬಳಿಕ ಹರ್ಷಲ್ ಪರಾರಿಯಾಗಿದ್ದು, ಪೊಲೀಸರು ಆತನಿಗೆ ಈ ವಂಚನೆಯಲ್ಲಿ ಸಹಕರಿಸಿದ ಯಶೋದಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಬಂಧಿಸಿದ್ದಾರೆ. ಈ ಭಾರಿ ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಪ್ರಮುಖ ಆರೋಪಿ ಹರ್ಷಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 am, Fri, 27 December 24