Viral : ಹಣವೊಂದಿದ್ದರೆ ಸಾಕು, ಈವತ್ತು ಕುಳಿತಲ್ಲಿಯೇ ಎಲ್ಲವೂ ಸುಲಭವಾಗಿ ಲಭಿಸುತ್ತದೆ. ಬೇಕಾದ್ದು ಬೇಡವಾದ್ದು ಹೀಗೆ ಎಲ್ಲವೂ. ಆದರೆ ಅಪಾಯಕಾರಿಯಾದದ್ದು!? ಅದೂ ಸಿಗುತ್ತದೆ, ಏಮಾರಿದರೆ. ಇತ್ತೀಚೆಗೆ ವೈರಲ್ ಆಗುತ್ತಿರುವ ಟ್ವಿಟರ್ ಪೋಸ್ಟ್ ಈ ಅಪಾಯದ ಕುರಿತು ಎಚ್ಚರಿಸಿದೆ. ಡೋಮಿನೋಸ್ ಪಿಝಾನಲ್ಲಿ ಗಾಜಿನ ಚೂರುಗಳು ಪತ್ತೆಯಾಗಿದ್ದು, ಆರ್ಡರ್ ಮಾಡಿದ ವ್ಯಕ್ತಿ ಫೋಟೋ ತೆಗೆದು ಆನ್ಲೈನಿನಲ್ಲಿ ಹಂಚಿಕೊಂಡಿದ್ದಾರೆ. ಮುಂಬೈ ಪೊಲೀಸರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದ ಅರುಣ್ ಎಂಬುವವರು ಡೋಮಿನೋಸ್ ಪಿಝಾ ಅನ್ನು ಆರ್ಡರ್ ಮೂಲಕ ತರಿಸಿಕೊಂಡಿದ್ದಾರೆ. ತಿನ್ನುವಾಗ ಎರಡುಮೂರು ಗಾಜಿನ ಚೂರುಗಳು ಅದರೊಳಗಿದ್ದದ್ದು ಪತ್ತೆಯಾಗಿದೆ. ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ತಕ್ಷಣವೇ ಫೋಟೋ ತೆಗೆದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯವನ್ನು ಪರಿಶೀಲಿಸುವಂತೆ ಡೋಮಿನೋಸ್ ಇಂಡಿಯಾ, ಮುಂಬೈ ಪೊಲೀಸ್ ಮತ್ತು ಸಂಬಂಧಿಸಿದ ಇತರರಿಗೆ ಟ್ಯಾಗ್ ಮಾಡಿದ್ದಾರೆ.
2 to 3 pieces of glass found in @dominos_india This speaks volume about global brand food that we are getting @dominos @jagograhakjago @fssaiindia Not sure of ordering ever from Domino’s @MumbaiPolice @timesofindia pic.twitter.com/Ir1r05pDQk
— AK (@kolluri_arun) October 8, 2022
ಝೊಮ್ಯಾಟೋ ಮೂಲಕ ಅರುಣ್ ಆರ್ಡರ್ ತರಿಸಿಕೊಂಡಿದ್ದಾರೆ. ‘ಬಾಕ್ಸ್ ಡ್ಯಾಮೇಜ್ ಆಗಿತ್ತೇ?’ ಎಂದು ಝೊಮ್ಯಾಟೋ ಕೇಳಿದೆ. ಇಲ್ಲ ಸುಸ್ಥಿತಿಯಲ್ಲಿತ್ತು ಎಂದು ಅರುಣ್ ಉತ್ತರಿಸಿದ್ದಾರೆ. ಕ್ಷಮಿಸಿ, ಈ ಕುರಿತು ಪರಿಶೀಲಿಸುತ್ತೇವೆ ಮತ್ತೊಂದು ಪಿಝಾ ತಲುಪಿಸುತ್ತೇವೆ ಎಂದು ಝೊಮ್ಯಾಟೊ ತಿಳಿಸಿದೆ.
ನಂತರ ಮುಂಬೈ ಪೊಲೀಸರು, ಕಸ್ಟಮರ್ ಕೇರ್‌ಗೆ ಈ ಕುರಿತು ತಿಳಿಸಿರಿ ಎಂದಿದ್ದಾರೆ. ಒಂದು ವೇಳೆ ಅವರು ನಿಮಗೆ ಉತ್ತರಿಸದಿದ್ದರೆ ಅಥವಾ ಸಮರ್ಪಕವಾಗಿ ಸ್ಪಂದಿಸದಿದ್ದರೆ ನೀವು ಕಾನೂನಿನ ಮೊರೆ ಹೋಗಬಹುದು ಎಂದಿದ್ದಾರೆ. ಆ ಪ್ರಕಾರ ಅರುಣ್, ಕಸ್ಟಮರ್ ಕೇರ್ ವಿಭಾಗವನ್ನು ಸಂಪರ್ಕಸಿದ್ದಾರೆ. ಡೋಮಿನೋಸ್ ಪ್ರತಿನಿಧಿ ಅರುಣ್ ಅವರನ್ನು ಪುನಾ ಸಂಪರ್ಕಿಸಿ, ಈ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗಿದೆ. ನಮ್ಮ ಅಡುಗೆಮನೆಯಲ್ಲಿ ಎಲ್ಲವೂ ಶುಚಿತ್ವದ ನೀತಿನಿಯಮಗಳನ್ನು ಪಾಲಿಸಲಾಗುತ್ತಿದೆ. ಗಾಜಿನಿಂದ ಕೂಡಿದ ವಸ್ತುಗಳ ಬಳಕೆಯೂ ಅಲ್ಲಿ ನಿಯಮಕ್ಕನುಸಾರವಾಗಿ ನಿಷಿದ್ಧ ಎಂದು ತಿಳಿಸಿದ್ದಾರೆ.
ಈ ಪೋಸ್ಟ್ಗೆ ಸಂಬಂಧಿಸಿ ಅನೇಕರು ತಮ್ಮ ತಮ್ಮ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಡೋಮಿನೋಸ್ ತನ್ನ ಕಡೆಯಿಂದ ಏನೂ ವ್ಯತ್ಯಯ ಉಂಟಾಗಿಲ್ಲ ಎಂದು ಹೇಳುತ್ತಿರುವಾಗ, ಅರುಣ್ ಕಾನೂನಿನ ಸಹಾಯ ಯಾಚಿಸುತ್ತಾರಾ ನೋಡಬೇಕು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:22 am, Mon, 10 October 22