ಅಸ್ಸಾಂನ ಪ್ರಾಣಿವಲಯದಲ್ಲಿ ಘೇಂಡಾಮೃಗ ಟ್ರಕ್ ಮಧ್ಯೆ ಢಿಕ್ಕಿ, ನೆಟ್ಟಿಗರ ಕೋಪ ನೆತ್ತಿಗೆ
Assam : ಪ್ರಾಣಿವಲಯದಲ್ಲಿ ವೇಗದ ವಾಹನ ಚಾಲನೆಯಿಂದ ವರ್ಷಕ್ಕೆ ನೂರಾರು ವನ್ಯಮೃಗಗಳು ಅಪಘಾತಕ್ಕೆ ಈಡಾಗುತ್ತಿವೆ. ಎಚ್ಚರಿಕೆ ಒಂದೇ ಇದಕ್ಕೆ ಉಪಾಯ ಎಂದಿದ್ದಾರೆ ಐಎಎಸ್ ಅಧಿಕಾರಿ ಪರ್ವೀನ್ ಕಸ್ವಾನ್.
Viral Video : ಐಎಫ್ಎಸ್ ಅಧಿಕಾರಿ ಪ್ರವೀಣ ಕಸ್ವಾನ್ ಅಕ್ಟೋಬರ್ 9ರಂದು ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಸ್ಸಾಮ್ನಲ್ಲಿರುವ ಹಲ್ದಿಬಾರಿ ಪ್ರಾಣಿವಲಯದಲ್ಲಿ ಟ್ರಕ್ವೊಂದು ಘೇಂಡಾಮೃಗಕ್ಕೆ ಢಿಕ್ಕಿ ಹೊಡೆದುಕೊಂಡು ಹೋಗುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘೇಂಡಾಮೃಗವು ತನ್ನಪಾಡಿಗೆ ತಾನು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಸರಕುಸಾಗಾಣೆ ಟ್ರಕ್ವೊಂದು ಭಯಂಕರವಾಗಿ ಢಿಕ್ಕಿ ಹೊಡೆದು ಹೋಗಿದೆ.
‘ಪ್ರಾಣಿವಲಯದಲ್ಲಿ ಸಂಚರಿಸುವಾಗ ಕನಿಷ್ಟ ರೀತಿಯ ಎಚ್ಚರಿಕೆ ಇರಬೇಕು. ನನ್ನ ಈ ಕಾಳಜಿ ಕೇವಲ ಈ ವಿಡಿಯೋಗೆ ಸಂಬಂಧಿಸಿದ್ದಲ್ಲ. ವನ್ಯಜೀವಿ ವಲಯಗಳಲ್ಲಿ ಅತಿವೇಗದಲ್ಲಿ ಚಲಿಸುವ ವಾಹನಗಳಿಗೆ ಸಿಕ್ಕು ವರ್ಷಕ್ಕೆ ನೂರಾರು ಪ್ರಾಣಿಗಳು ಅಪಘಾತಕ್ಕೆ ಒಳಗಾಗುತ್ತಿವೆ. ಇಂತಹ ವಲಯಗಳಲ್ಲಿ ಅತಿವೇಗದ ಚಾಲನೆಯನ್ನು ನಿರ್ಬಂಧಿಸಲಾಗಿದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಎಚ್ಚರಿಕೆಯಿಂದ ಇದ್ದರೆ ಎಷ್ಟೋ ಅಪಘಾತಗಳನ್ನು ತಪ್ಪಿಸಬಹುದಾಗಿದೆ.’ ಎಂದು ಪರ್ವೀನ್ ಕಸ್ವಾನ್ ಟ್ವೀಟ್ ಮಾಡಿದ್ದಾರೆ.
Friends while driving through animal corridors, least we can do is caution. Video is from Haldibari Animal Corridor in Assam. pic.twitter.com/pIEQU7yyIP
— Parveen Kaswan, IFS (@ParveenKaswan) October 9, 2022
ಈ ವಿಡಿಯೋ ಒಂದು ದಿನದೊಳಗೆ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಪ್ರಾಣಿಪ್ರಿಯರು ಈ ಘೇಂಡಾಮೃಗದ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೆಲ ನೆಟ್ಟಿಗರು ಡ್ರೈವರ್ನ ತಪ್ಪಿಲ್ಲ ಎಂದಿದ್ದಾರೆ. ಮತ್ತೂ ಕೆಲವರು, ಘೇಂಡಾಮೃಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುತ್ತಾರೆಯೇ ಅಧಿಕಾರಿಗಳು? ಎಂದಿದ್ದಾರೆ. ಚಾಲಕನನ್ನು ಪತ್ತೆ ಹಚ್ಚಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಚಾಲಕ ಟ್ರಕ್ ನಿಲ್ಲಿಸಲು ಅಲ್ಲಿ ಅವಕಾಶವಿರಲಿಲ್ಲ. ಇದೊಂದು ಅಪಘಾತ ಎಂದು ಮಗದೊಬ್ಬರು ಹೇಳಿದ್ದಾರೆ. ಇಲ್ಲಿ ಪ್ರಾಣಿಯದು ತಪ್ಪಿಲ್ಲ, ಚಾಲಕನದೂ. ಪ್ರಾಣಿಗಳ ಸಂಚಾರಕ್ಕೆ ನೆಲಮಹಡಿಯ ವಿಶೇಷ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ ಮತ್ತೊಬ್ಬ ನೆಟ್ಟಿಗರು. ವನ್ಯಪ್ರಾಣಿಗಳ ವಲಯದಲ್ಲಿ ಹೆದ್ದಾರಿ ನಿರ್ಮಿಸುವುದು ಸರಿಯಲ್ಲ. ಘೇಂಡಾಮೃಗಕ್ಕೆ ಆದ ಗಾಯದ ಪ್ರಮಾಣವನ್ನು ಐಎಫ್ಎಸ್ ಅಧಿಕಾರಿ ಹಂಚಿಕೊಂಡಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಹೀಗೆ ವಿವಿಧ ಅಭಿಪ್ರಾಯಗಳಿಂದ ಈ ಪೋಸ್ಟ್ ಕೂಡಿದೆ.
ಈ ಮಧ್ಯೆ ಕೆಲ ಗಂಟೆಗಳ ಹಿಂದೆ ಈ ಪೋಸ್ಟ್ ನೋಡಿದ ಅಸ್ಸಾಮಿನ ಮುಖ್ಯಮಂತ್ರಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:04 pm, Mon, 10 October 22