ಆನಂದ್ ಮಹಿಂದ್ರಾರಿಂದ ಮತ್ತೊಂದು ಪ್ರೇರಣಾದಾಯಕ ವಿಡಿಯೋ, ಏಕಾಗ್ರತೆ ಕಳೆದುಕೊಳ್ಳಬೇಡಿ ಎಂಬ ಸಂದೇಶ!
ಮಹಿಂದ್ರಾ ಅವರು ಸದರಿ ವಿಡಿಯೊವನ್ನು ಇಂದು ಬೆಳಗ್ಗೆಯಷ್ಟೇ ಪೋಸ್ಟ್ ಮಾಡಿದ್ದರೂ ಈಗಾಗಲೇ ಸುಮಾರು ಅರ್ಧಕೋಟಿಯಷ್ಟು ಜನ ಅದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಪೋಸ್ಟ್ ಅನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಇದು ದಿಟ್ಟತನ ಮತ್ತು ಸಂಕಲ್ಪಕ್ಕೆ ಅತ್ಯುತ್ತಮ ಉದಾಹರಣೆ ಅಂತ ಹೇಳುತ್ತಿದ್ದಾರೆ.
ಉದ್ಯಮಿ ಅನಂದ್ ಮಹಿಂದ್ರಾ (Anand Mahindra) ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಸಕ್ರಿಯರಾಗಿರುತ್ತಾ ಒಮ್ಮೆ ವಿನೋದಮಯ ಮತ್ತೊಮ್ಮೆ ಪ್ರೇರಣಾದಾಯಕ (motivational) ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಟ್ವಿಟ್ಟರ್ ನಲ್ಲಿ ಸುಮಾರು ಒಂದು ಕೋಟಿಯಷ್ಟು ಫಾಲೋಯರ್ಸ್ (followers) ಹೊಂದಿರುವ ಅವರು ಇತ್ತೀಚಿಗೆ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿ ಅದರ ಮೂಲಕ ಸಂಕಷ್ಟದ ಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬ ಸಂದೇಶವನ್ನು ನೀಡುತ್ತಾರೆ.
ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಚಿಕ್ಕಗಾತ್ರದ ಗಿಡುಗವೊಂದು ಬೇಟೆಯನ್ನು ಅರಸುತ್ತಾ ಆಕಾಶದಲ್ಲಿ ಹಾರುತ್ತಿರುವುದನ್ನು ನೋಡಬಹುದು. ತನಗೆ ಎದುರಾಗಿ ಬೀಸುತ್ತಿರುವ ಗಾಳಿಯಲ್ಲಿ ಅದು ತನ್ನ ಕುತ್ತಿಗೆ ಮತ್ತು ಬಾಲವನ್ನು ನೇರವಾಗಿಟ್ಟು ರೆಕ್ಕೆಗಳನ್ನು ಬಡಿಯುತ್ತಾ ಹಾರುತ್ತಿದೆ. ಅದರ ಹಾರಾಟಕ್ಕೆ ಪ್ರತಿಕೂಲವಾದ ವಾತಾವರಣವಿದ್ದರೂ ಬೇಟೆಯನ್ನು ಅರಸುವ ಅದರ ಏಕಾಗ್ರಚಿತ್ತಕ್ಕೆ ಕಿಂಚಿತ್ತೂ ಭಂಗವುಂಟಾಗುವುದಿಲ್ಲ. ಡಿಸ್ಕವರ್ ವೈಲ್ಡ್ ಲೈಫ್ ಪ್ರಕಾರ ಗಿಡುಗವು ತನಗೆ ವಿರುದ್ಧವಾಗಿ ಬೀಸುತ್ತಿರುವ ಗಾಳಿಯಲ್ಲೂ ತನ್ನ ಹಾರಾಟಕ್ಕೆ ನೆರವಾಗುವ ಗಾಳಿಯಲ್ಲಿ ಹಾರುವಷ್ಟೇ ವೇಗದಲ್ಲಿ ಹಾರುತ್ತದಂತೆ. ಮಹಿಂದ್ರಾ ಅವರು ಪಕ್ಷಿಯ ವಿಚಲಿತಗೊಳ್ಳದ ಫೋಕಸನ್ನು ಪ್ರಶಂಸಿದ್ದಾರೆ.
Nature never fails to provide lessons for our own lives. How do you face turbulent times? No matter what your profession is, let your wings flap as the winds buffet you, but keep your head stable, your mind clear & your eyes watchful. #MondayMotivaton pic.twitter.com/YDVm1uJXx5
— anand mahindra (@anandmahindra) October 10, 2022
ಮಹಿಂದ್ರ ಅವರು 31-ಸೆಕೆಂಡುಗಳ ವಿಡಿಯೋ ಜೊತೆಗೆ ಈ ಸಂದೇಶವನ್ನು ಬರೆದಿದ್ದಾರೆ: ನಿಸರ್ಗ ನಮಗೆ ಬದುಕಿನ ಪಾಠಗಳನ್ನು ನೀಡುತ್ತಲೇ ಇರುತ್ತದೆ. ಸಂಕಷ್ಟದ ಸಮಯವನ್ನು ನೀವು ಹೇಗೆ ಎದುರಿಸುತ್ತೀರಿ? ನೀವು ಯಾವುದೇ ವೃತ್ತಿ ಮಾಡಿಕೊಂಡಿರಿ, ಸಂದರ್ಭ ನಿಮ್ಮ ಅನುಕೂಲಕ್ಕೆ ಅನುಗುಣವಾಗಿರದಿದ್ದರೂ ರೆಕ್ಕೆಗಳನ್ನು ಬಡಿಯುತ್ತಿದ್ದರೆ ಮುಂದಕ್ಕೆ ಸಾಗುವಿರಿ. ಆದರೆ ನಿಮ್ಮ ತಲೆ ಸ್ಥಿರವಾಗಿರಲಿ, ಮನಸ್ಸಿನಲ್ಲಿ ಗೊಂದಲ ಬೇಡ ಮತ್ತು ನಿಮ್ಮ ದೃಷ್ಟಿ ಜಾಗರೂಕವಾಗಿರಬೇಕು.’
ಮಹಿಂದ್ರಾ ಅವರು ಸದರಿ ವಿಡಿಯೊವನ್ನು ಇಂದು ಬೆಳಗ್ಗೆಯಷ್ಟೇ ಪೋಸ್ಟ್ ಮಾಡಿದ್ದರೂ ಈಗಾಗಲೇ ಸುಮಾರು ಅರ್ಧಕೋಟಿಯಷ್ಟು ಜನ ಅದನ್ನು ವೀಕ್ಷಿಸಿದ್ದಾರೆ. ನೆಟ್ಟಿಗರು ಪೋಸ್ಟ್ ಅನ್ನು ಶ್ಲಾಘಿಸುತ್ತಿದ್ದಾರೆ ಮತ್ತು ಇದು ದಿಟ್ಟತನ ಮತ್ತು ಸಂಕಲ್ಪಕ್ಕೆ ಅತ್ಯುತ್ತಮ ಉದಾಹರಣೆ ಅಂತ ಹೇಳುತ್ತಿದ್ದಾರೆ.
ಒಬ್ಬ ಯೂಸರ್, ‘ನಿಸರ್ಗ ನಿಜಕ್ಕೂ ಅಸಲಿ ಶಿಕ್ಷಕ, ಅದರ ಬಗ್ಗೆ ಹೆಚ್ಚು ಅರ್ಥಮಾಡಿಕೊಂಡಂತೆಲ್ಲ ವಿಜ್ಞಾನವನ್ನು ಹೆಚ್ಚೆಚ್ಚು ಗ್ರಹಿಸುತ್ತೇವೆ,’ ಅಂತ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಯೂಸರ್, ‘ ನೀವು ಹೇಳಿದ್ದು ಅಕ್ಷರಶಃ ಸತ್ಯ ಸರ್. ಪ್ರತಿಯೊಬ್ಬ ವ್ಯಕ್ತಿ ಬದುಕಿನ ವಿವಿಧ ಹಂತಗಳಲ್ಲಿ ಕಷ್ಟಕರ ಸಮಯವನ್ನು ಎದುರಿಸುತ್ತಾನೆ. ಅವುಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ನಿಮ್ಮ ಬೆಲ್ಟ್ಗಳನ್ನು ಬಿಗಿಗೊಳಿಸಿಕೊಂಡು ವಿಶಾಲಾವಾದ ಮನಸನ್ನು ಹೊಂದಿರಿ, ಇದೊಂದು ತಾತ್ಕಾಲಿಕ ಹಂತ ಅಷ್ಟೇ. ಕೃಷಿ ಉದ್ಯಮದಲ್ಲಿ ಕಳೆದ 34-ವರ್ಷಗಳಿಂದ ತೊಡಗಿರುವ ನಾನು, ಬದುಕಿನ ಎಲ್ಲಾ ಆಯಾಮಗಳನ್ನು ಅರ್ಥಮಾಡಿಕೊಂಡಿದ್ದೇನೆ. ದೇವರು ನಿಮ್ಮನ್ನು ಆಶೀರ್ವದಿಸಲಿ,’ ಅಂತ ಬರೆದಿದ್ದಾರೆ.
ಮೂರನೇವರು, ‘ ನಿಮ್ಮ ಟ್ವೀಟ್ ಗಳನ್ನೇ ಓದುವುದೇ ಒಂದು ಮಹದಾನಂದ. ನಿಮ್ಮ ಪ್ರೇರಣಾದಾಯ ಸಂದೇಶಗಳನ್ನು ಎದುರು ನೋಡುತ್ತಿರುವೆ. ಥ್ಯಾಂಕ್ಯೂ ಸರ್,’ ಅಂತ ಬರೆದಿದ್ದಾರೆ.