Trending : ತಮ್ಮನ್ನು ತಾವು ಪ್ರೀತಿಸಿಕೊಳ್ಳಲು ಅದೆಷ್ಟು ಮಾರ್ಗಗಳಿವೆ ಮಾನವರಿಗೆ. ಹಚ್ಚೆ ಹಾಕಿಸಿಕೊಳ್ಳುವುದು, ಮೂಗಿಗೆ, ಕಿವಿಗೆ, ಹುಬ್ಬಿಗೆ, ತುಟಿಗೆ, ಗದ್ದಕ್ಕೆ, ಹೊಕ್ಕಳಕ್ಕೆ ಹೀಗೆ ಎಲ್ಲಿ ಬೇಕೋ ಅಲ್ಲೆಲ್ಲ ಲೋಹದ ರಿಂಗಗಳನ್ನು ಚುಚ್ಚಿಸಿಕೊಂಡು ಖುಷಿಪಡುವುದು. ಇಂಥ ಖಯಾಲಿ ಅನೇಕರಲ್ಲಿದೆ. ಈ ಅನೇಕರ ಪೈಕಿ ಜೋಯ್ ಲೈಕಿನ್ಸ್ ಕೂಡ ಒಬ್ಬ. ಹೀಗೆ ಒಂದು ದಿನ ಬೆಳಗ್ಗೆ ಎದ್ದು ನೋಡುತ್ತಾನೆ ಆತನ ನೋಸ್ರಿಂಗ್ ಮಾಯ! ಇಡೀ ದಿನ ಆತ ಹುಡುಕಲಾರದ ಜಾಗವಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನಾಗಿ ಆ ವಿಷಯವನ್ನೇ ಮರೆತುಬಿಟ್ಟ. ಸುಮಾರು ಐದು ವರ್ಷಗಳ ನಂತರ ಒಂದು ದಿನ ಮಲಗಿಕೊಂಡಿದ್ದಾಗ ಇದ್ದಕ್ಕಿದ್ದಂತೆ ಈತನಿಗೆ ಕೆಮ್ಮು ಶುರುವಾಯಿತು. ಅದು ವಿಪರೀತಕ್ಕೇರಿದಾಗ ಆಸ್ಪತ್ರೆಗೆ ದಾಖಲಾದ. ವೈದ್ಯರು ಆತನನ್ನು ಎಕ್ಸೆರೆಗೆ ಒಳಪಡಿಸಿದರು. ಈ ಎಕ್ಸರೇಯಲ್ಲಿ ಇವನ ಕಳೆದ ನೋಸ್ರಿಂಗ್ ಪತ್ತೆಯಾಯಿತು!
35 ವರ್ಷದ ಜೋಯ್ ತನ್ನ ದೇಹದ ಮೇಲೆ ಈತನಕ 12 ಜಾಗಗಳಲ್ಲಿ ಚಿಕ್ಕಪುಟ್ಟ ಸ್ಟಡ್ಸ್, ರಿಂಗ್ ಧರಿಸಲು ಚುಚ್ಚಿಸಿಕೊಂಡಿದ್ದಾನೆ. ಐದು ವರ್ಷಗಳ ಹಿಂದೆ ಕಳೆದುಹೋದ ನೋಸ್ರಿಂಗ್ ಹೋದರೆ ಹೋಯಿತು ಎಂದು ಮತ್ತೊಂದು ರಿಂಗ್ ಖರೀದಿಸಿಯೂ ಬಿಟ್ಟ. ಆದರೆ ಆ ಕೆಮ್ಮು ಮಾತ್ರ ಅವನಿಗೆ ಶಾಶ್ವತವಾಗಿ ಪಾಠ ಕಲಿಸಿತು. ಕಳೆದು ಹೋದ ನೋಸ್ರಿಂಗ್ ಐದು ವರ್ಷಗಳಿಂದಲೂ ಅವನ ಶ್ವಾಸಕೋಶದಲ್ಲಿ ಅಡಗಿಕೊಂಡಿತ್ತು.
‘ಆ ದಿನ ಹಾಸಿಗೆಯಲ್ಲಿ ಹುಡುಕಾಡಿದೆ, ಸುತ್ತಮುತ್ತಲೂ ನೋಡಿದೆ. ಏನೆಲ್ಲವನ್ನೂ ಹುಡುಕಿ ನೋಡಿದೆ. ಕೊನೆಗೆ ನಾನದನ್ನು ನುಂಗಿದ್ದೇನಾ? ಎಂಬ ಅನುಮಾನ ಬಂದರೂ ಅಷ್ಟು ಯೋಚಿಸಲಿಲ್ಲ. ಈಗ ಐದುವರ್ಷಗಳ ನಂತರ ರಾತ್ರಿ ಮಲಗಿದಾಗ ಕೆಮ್ಮು ಶುರುವಾಯಿತು. ಇದ್ದಕ್ಕಿದ್ದಂತೆ ಬೆನ್ನು ನೋವು ಕೂಡ. ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎನ್ನಿಸಿ ಆಸ್ಪತ್ರೆಗೆ ದಾಖಲಾದೆ’ ಎಂದು ತನ್ನ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾನೆ ಈ ವ್ಯಕ್ತಿ.
ಆಸ್ಪತ್ರೆಗೆ ದಾಖಲಿಸಿದಾಗ ನ್ಯುಮೋನಿಯಾದ ಲಕ್ಷಣಗಳು ಎಂದು ವೈದ್ಯರು ಹೇಳಿದರು. ಆದರೆ ಎಕ್ಸರೇಯಲ್ಲಿ ಬಹಿರಂಗಗೊಂಡ ಸತ್ಯ ಬೇರೆಯಾಗಿತ್ತು. 0.6 ಇಂಚಿನ ನೋಸ್ರಿಂಗ್ ಶ್ವಾಸಕೋಶದಲ್ಲಿ ಅಡಗಿ ಕುಳಿತಿತ್ತು! ಜೋಯ್ ಆಘಾತಕ್ಕೊಳಗಾದಾಗ, ಸದ್ಯ ಈ ನೋಸ್ರಿಂಗ್ ಶ್ವಾಸಕೋಶವನ್ನು ತೂತು ಮಾಡಿಲ್ಲವಲ್ಲ ಎಂದು ವೈದ್ಯರು ಸಮಾಧಾನ ಹೇಳಿದರು.
‘ನೆನಪಿಗಾಗಿ ಈ ಎಲ್ಲ ದಾಖಲೆಗಳನ್ನು ಇರಿಸಿಕೊಂಡಿದ್ದೇನೆ. ಆದರೆ ಇನ್ನೆಂದೂ ನೋಸ್ರಿಂಗ್ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾನೆ ಜೋಯ್.
ಮನುಷ್ಯನಿಗೆ ಹುಚ್ಚುಗಳು ಬೇಕು. ಆದರೆ ಹೀಗೆ ಅಪಾಯಕ್ಕೆ ತಂದುಕೊಳ್ಳುವಂತಹ ಹುಚ್ಚುಗಳು…
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:07 pm, Sat, 24 September 22