Trending : ‘ನನ್ನ ಪ್ರೇಮಕಥೆಗೆ ಸಾಕ್ಷಿಯಾದ ಬೆಂಗಳೂರಿನ ಓ ಟ್ರಾಫಿಕ್ಕೇ ನಿನಗೆ ವಂದನೆ’
Bangalore Traffic : ಬೆಂಗಳೂರಿನ ಸೋನಿ ವರ್ಲ್ಡ್ ಸಿಗ್ನಲ್ಲೇ ನನಗೆ ನನ್ನ ಹೆಂಡತಿಯನ್ನು ಹುಡುಕಿಕೊಟ್ಟಿದ್ದು ಎಂದು ತಮ್ಮ ಪ್ರೇಮಕಥೆ ಹೇಳುತ್ತ ಕೊನೆಗೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಅದೇ ಈ ಪೋಸ್ಟ್ ವೈರಲ್ ಆಗಲು ಕಾರಣವಾಗಿದೆ.
Trending : ಬೆಂಗಳೂರಿನ ಟ್ರಾಫಿಕ್ ಜಾಮ್ಗೆ ಸುಸ್ತಾದವರು ಯಾರಿಲ್ಲ ಹೇಳಿ? ಆದರೆ ಇದೇ ಬೆಂಗಳೂರಿನ ಟ್ರಾಫಿಕ್ ಜಾಮ್ಗೆ ಧನ್ಯವಾದ ಹೇಳಿದ್ದಾರೆ ಒಬ್ಬ ವ್ಯಕ್ತಿ! ಅಂಥದ್ದೇನು ನಡೆದಿದೆ ಅಲ್ಲಿ? ರೆಡ್ಡಿಟ್ ಖಾತೆದಾರರಾದ ‘MaskedManiac92’ ಈ ಮಹಾನಗರದಲ್ಲಿ ಕಿಕ್ಕಿರದ ಟ್ರಾಫಿಕ್ಕಿನಲ್ಲಿ ತಮ್ಮ ಪ್ರೇಮಕಥೆ ಹೇಗೆ ಅರಳಿತು ಎಂಬುದನ್ನು ವಿವರಿಸಿದ್ದಾರೆ. ನಂತರ ಅದನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಗಿದೆ. ಬೆಂಗಳೂರಿನ ಸೋನಿ ವರ್ಲ್ಡ್ ಸಿಗ್ನಲ್ಲೇ ನನಗೆ ನನ್ನ ಹೆಂಡತಿಯನ್ನು ಹುಡುಕಿಕೊಟ್ಟಿದ್ದು ಎಂದು ಹೇಳುತ್ತ ತಮ್ಮ ಪ್ರೇಮಕಥೆಯನ್ನು ಬಿಚ್ಚಿಟ್ಟಿದ್ದಾರೆ. ಆದರೆ ಕೊನೆಗೊಂದು ಟ್ವಿಸ್ಟ್ ಕೂಡ ನೀಡಿದ್ದಾರೆ!
ಅಪರಿಚಿತ ಹುಡುಗ ಅಪರಿಚಿತ ಹುಡುಗಿ ಒಂದು ದಿನ ಸೋನಿ ಸಿಗ್ನಲ್ ಬಳಿ ಅಚಾನಕ್ಕಾಗಿ ಭೇಟಿಯಾಗುತ್ತಾರೆ. ಹೀಗೆ ಪದೇಪದೇ ಟ್ರಾಫಿಕ್ಕಿನಲ್ಲಿ ಸಿಗುತ್ತಿದ್ದಾಗ ಪರಸ್ಪರರ ಮುಗುಳ್ನಗು ವಿನಿಮಯವಾಗುತ್ತದೆ. ಕ್ರಮೇಣ ಪರಿಚಯಕ್ಕೆ ತಿರುಗುತ್ತದೆ. ಒಂದು ದಿನ ನಿರ್ಮಾಣ ಹಂತದಲ್ಲಿದ್ದ ಈಜಿಪುರ ಮೇಲ್ಸೇತುವೆಯಲ್ಲಿ ವಿಪರೀತ ಟ್ರಾಫಿಕ್ ಉಂಟಾಗುತ್ತದೆ. ಇಬ್ಬರಿಗೂ ವಿಪರೀತ ಹಸಿವು, ಕಿರಿಕಿರಿ. ಉಸಿರುಗಟ್ಟಿದಂತಾಗುತ್ತಿರುತ್ತದೆ. ಪರಸ್ಪರ ಮುಖಗಳನ್ನು ನೋಡಿಕೊಳ್ಳುತ್ತ ನಿಂತಿರುತ್ತಾರೆ. ಕೊನೆಗೆ ಬೇರೆ ಮಾರ್ಗವನ್ನು ಅನುಸರಿಸಿ ಇಲ್ಲಿಂದ ಪಾರಾಗಬೇಕೆಂದು ಹೊರಡುತ್ತಾರೆ.
ದಾರಿಮಧ್ಯೆ ಸಿಕ್ಕ ಹೋಟೆಲ್ನಲ್ಲಿ ಊಟ ಮಾಡುತ್ತಾರೆ. ಮಾತು, ಭಾವನೆಗಳ ವಿನಿಮಯವಾಗುತ್ತದೆ. ಪರಸ್ಪರ ಆಕರ್ಷಣೆ ಬೆಳೆಯುತ್ತದೆ. ಮುಂದೇನು? ಹಾದಿ ಬದಲಿಸಿದ್ದು ಎಂಥ ಒಳ್ಳೆಯ ಕೆಲಸ ಅಲ್ಲವಾ? ಅಲ್ಲಿಂದ ಅವರಿಗೆ ತೆರೆದಿದ್ದು ಪ್ರೇಮಮಾರ್ಗ! ಐದು ವರ್ಷಗಳತನಕ ಈ ಟ್ರಾಫಿಕ್ನಲ್ಲಿಯೇ ಡೇಟಿಂಗ್ ಮಾಡಿ, ಡ್ಯೂಯೆಟ್ ಹಾಡಿ ಉಲ್ಲಸಿತಗೊಂಡು ಕೊನೆಗೆ ಮದುವೆಯನ್ನೂ ಆಗುತ್ತಾರೆ. ಹಾಗಿದ್ದರೆ ಟ್ವಿಸ್ಟ್ ಏನು?
Top drawer stuff on Reddit today ??@peakbengaluru pic.twitter.com/25H0wr526h
— Aj (@babablahblah_) September 18, 2022
‘ಇದೇ ಟ್ರಾಫಿಕ್ಕಿನಲ್ಲಿ ಸಿಕ್ಕ ನನ್ನ ಹುಡುಗಿಯೊಂದಿಗೆ ನಾನು ಮೂರು ವರ್ಷ ಡೇಟಿಂಗ್ ಮಾಡಿದೆ. ಎರಡು ವರ್ಷಗಳ ಹಿಂದೆ ಮದುವೆಯನ್ನೂ ಆದೆ. ಆದರೆ ಈ ಫ್ಲೈ ಓವರ್ ಮಾತ್ರ ಇನ್ನೂ ಹೀಗೇ ಅರ್ಧಕ್ಕೇ ನಿಂತಿದೆ’ ಇದೇ ಆ ದೊಡ್ಡ ಬಗೆಯರಿಯಲಾರದ ಸಮಸ್ಯೆ!
ರೆಡ್ಡಿಟ್ ಖಾತೆದಾರರು ಈ ವಿಷಯವನ್ನು ಟ್ವಿಟರ್ನಲ್ಲಿ ಹಂಚಿಕೊಂಡಾಗಿನಿಂದ ಸಾವಿರಾರು ನೆಟ್ಟಿಗರು ನಗೆಗಡಲಿನಲ್ಲಿ ತೇಲಲಾರಂಭಿಸಿದ್ದಾರೆ. ಟ್ರಾಫಿಕ್ ಜೋಕ್ಗಳನ್ನು ಹರಿಬಿಡಲಾರಂಭಿಸಿದ್ದಾರೆ. ಟೀಕಿಸಲೂ ಶುರುಮಾಡಿದ್ಧಾರೆ.
‘ನಾನು ನನ್ನ ಪದವಿ ಮುಗಿಸಿ ಇಂಟರ್ನ್ಶಿಪ್ ಅನ್ನು ಬೆಂಗಳೂರಿನ ಸೋನಿ ಸಿಗ್ನಲ್ ಬಳಿಯ ಆಫೀಸೊಂದರಲ್ಲಿ ಮಾಡಿದೆ. ಅಲ್ಲಿಯೇ ಎರಡು ವರ್ಷ ಕೆಲಸ ಮಾಡಿದೆ. ನಂತರ ಬೆಂಗಳೂರನ್ನು ಬಿಟ್ಟು ಬೇರೆ ಊರು, ಕಂಪೆನಿಯಲ್ಲಿ ಕೆಲಸ ಮಾಡಿದೆ. ಆದರೂ ಈ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ’ ಎಂದು ಒಬ್ಬರ ವ್ಯಕ್ತಿ ಟೀಕಿಸಿದ್ದಾರೆ.
‘ಬೆಂಗಳೂರು ಟ್ರಾಫಿಕ್ ಒಂದು ವರ ಇದ್ದಂತೆ. ಆದರೆ ನೀವು ಇದನ್ನು ಅರ್ಥವನ್ನೇ ಮಾಡಿಕೊಳ್ಳುವುದಿಲ್ಲ’ ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, 2.5 ಕಿಮೀ ಉದ್ದದ ಈ ಮೇಲ್ಸೇತುವೆಯ ನಿರ್ಮಾಣ ಕಾರ್ಯ 2019 ನವೆಂಬರ್ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಸೋನಿ ವರ್ಲ್ಡ್ ಜಂಕ್ಷನ್‌ನಿಂದ ಕೇಂದ್ರೀಯ ಸದನಕ್ಕೆ ಸಂಪರ್ಕ ಕಲ್ಪಿಸಬೇಕಿದ್ದ ಈ ಮೇಲ್ಸೇತುವೆ ಪೂರ್ಣಗೊಳ್ಳದೆ ಕಸದಿಂದ ತುಂಬಿತುಳುಕುತ್ತಿರುವುದು ವಿಪರ್ಯಾಸ.
ಇನ್ನು ಮಕ್ಕಳಾಗುವುದರೊಳಗಾದರೂ ಈ ಸೇತುವೆ ಪೂರ್ಣಗೊಳ್ಳಬಹುದೆ?
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:11 pm, Tue, 20 September 22