ದಂಪತಿ ಮಧ್ಯೆ ಆಗಾಗ್ಗೆ ಸಣ್ಣಪುಟ್ಟ ಮನಸ್ತಾಪಗಳು, ಜಗಳಗಳಾಗುವುದು ಸಾಮಾನ್ಯ. ಎಷ್ಟೇ ಮನಸ್ತಾಪ ಇದ್ರೂ ಕೂಡಾ ಪತಿ-ಪತ್ನಿಯರು ಮನೆಯಲ್ಲಿ ಏನಾದ್ರೂ ವಿಶೇಷ ಕಾರ್ಯಕ್ರಮಗಳಿದ್ದರೆ ಆ ಮನಸ್ತಾಗಳನ್ನೆಲ್ಲಾ ಪಕ್ಕಕ್ಕಿಟ್ಟು ನಗುನಗುತ್ತಾ ಓಡಾಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಹೆತ್ತ ಮಗನ ಹುಟ್ಟು ಹಬ್ಬದ ಸಂಭ್ರಮದ ದಿನದಂದೆ ಪತಿರಾಯ ತನ್ನ ಪತ್ನಿಯ ಮೇಲೆ ಕೈ ಮಾಡಿದ್ದಾನೆ. ಹೌದು ಬರ್ತ್ ಡೇ ಸೆಲೆಬ್ರೇಷನ್‌ನ ವಿಡಿಯೋ ಮಾಡುವಾಗ ಮಧ್ಯದಲ್ಲಿ ಮಾತನಾಡಿದಳೆಂದು ಪತಿರಾಯ ಕೋಪದಿಂದ ತನ್ನ ಹೆಂಡತಿಯ ಕೆನ್ನೆಗೆ ಬಾರಿಸಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಕುರಿತ ವಿಡಿಯೋವನ್ನು Deadlykalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಗನ ಬರ್ತ್ ಡೇ ಸೆಲೆಬ್ರೇಷನ್‌ನ ವಿಡಿಯೋ ರೆಕಾರ್ಡ್ ಮಾಡುವಾಗ ಮತನಾಡಿದ್ದಕ್ಕಾಗಿ ಹೆಂಡತಿಗೆ ಗಂಡನಿಂದ ಕಪಾಳಮೋಕ್ಷ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಗನ ಹುಟ್ಟುಹಬ್ಬದ ಸಂಭ್ರಮದ ನಡುವೆಯೂ ಪತಿರಾಯ ತನ್ನ ಹೆಂಡತಿಗೆ ಕಪಾಳಕ್ಕೆ ಬಾರಿಸುವಂತಹ ದೃಶ್ಯವನ್ನು ಕಾಣಬಹುದು. ಪುಟ್ಟ ಮಗನನ್ನು ಮಧ್ಯದಲ್ಲಿ ಕೂರಿಸಿ ವಿಡಿಯೋ ರೆಕಾರ್ಡಿಂಗ್ ಮಾಡುತ್ತಾ ಪತಿ ಮತ್ತು ಪತ್ನಿ ಕೇಕ್ ಕಟ್ ಮಾಡಲು ಮುಂದಾಗುತ್ತಾರೆ. ಹೀಗೆ ವಿಡಿಯೋ ರೆಕಾರ್ಡಿಂಗ್ ಮಾಡುವ ವೇಳೆ ಆ ಮಹಿಳೆ ಏನೋ ಮಾತನಾಡಲು ಮುಂದಾಗಿದ್ದು, ಇದರಿಂದ ಕೋಪಗೊಂಡ ಪತಿರಾಯ ಆಕೆಯ ಕೆನ್ನೆಗೆ ಸರಿಯಾಗಿ ಬಾರಿಸಿ ಅಲ್ಲಿಂದ ಎದ್ದು ಹೋಗಿದ್ದಾನೆ.
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮನುಷ್ಯ ಇಷ್ಟೊಂದು ಅಸಭ್ಯ ವರ್ತನೆಯನ್ನು ತೋರುವ ಅವಶ್ಯಕತೆಯಿತ್ತೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ವಾತಾವರಣ ಮಗುವಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಆ ವ್ಯಕ್ತಿಯ ಮೃಗೀಯ ವರ್ತನೆಯನ್ನು ಕಂಡು ಕೋಪಗೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ