Viral Video : ಸಾಕಿದ ನಾಯಿಗಳಿಗೆ ನಮ್ಮಷ್ಟೇ ಕಾಳಜಿ ತೆಗೆದುಕೊಂಡು ಪೋಷಿಸುತ್ತೇವೆ. ಆದರೆ ಬೀದಿನಾಯಿಗಳಿಗೆ? ಖಂಡಿತ ಬೀದಿನಾಯಿಗಳನ್ನೂ ಅಷ್ಟೇ ಕಾಳಜಿ, ಶ್ರದ್ಧೆಯಿಂದ ನೋಡಿಕೊಳ್ಳುವ ಕೆಲವರು ನಮ್ಮ ಮಧ್ಯೆ ಇದ್ದಾರೆ. ಇಲ್ಲಿರುವ ವಿಡಿಯೋದಲ್ಲಿ ಬೀದಿನಾಯಿಗಳಿಗೆ ಸುಲಭವಾಗಿ, ಶುಚಿಯಾಗಿ ಆಹಾರ ಮತ್ತು ನೀರು ಲಭ್ಯವಾಗುವಂಥ ಫೀಡಿಂಗ್ ಪೈಪ್ ವ್ಯವಸ್ಥೆಯನ್ನು ಈ ವ್ಯಕ್ತಿ ಮಾಡಿದ್ದಾರೆ. ಈ ಉಪಾಯವನ್ನು ನೆಟ್ಟಿಗರು ಅಹುದಹುದು ಎಂದಿದ್ದಾರೆ. ಯೋಚಿಸಿದರೆ ಇದ್ದ ಸಾಮಗ್ರಿಗಳಲ್ಲೇ ಸುಲಭ ಉಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಣ ಕೊಟ್ಟರೆ ಏನೂ ಸಿಗಬಹುದಾದ ಈ ಕಾಲದಲ್ಲಿ ನಾವಿದ್ದೇವೆ ನಿಜ. ಆದರೆ ತಾಳ್ಮೆ, ಕೌಶಲ, ಬುದ್ಧಿವಂತಿಕೆ ಮತ್ತು ಜೀವಪರ ಕಾಳಜಿ ಯಾವ ಅಂಗಡಿಯಲ್ಲಿ ಸಿಗುತ್ತದೆ?
ಇಲ್ಲಿರುವ ಈ ವ್ಯಕ್ತಿ ಎರಡು ಪೈಪ್ ತುಂಡುಗಳನ್ನು ಗೋಡೆಗೆ ಜೋಡಿಸುತ್ತಾರೆ. ಒಂದರಲ್ಲಿ ನಾಯಿಯ ಆಹಾರ, ಇನ್ನೊಂದರಲ್ಲಿ ನೀರನ್ನು ತುಂಬಿಸಿಡುತ್ತಾರೆ. ಬೀದಿನಾಯಿಗಳು ಒಂದಾದ ಮೇಲೊಂದು ಬಂದು ಊಟ ಮಾಡಿಕೊಂಡು ಹೋಗುತ್ತವೆ. ಈ ವಿಡಿಯೋ ಸುಮಾರು 46,000 ವೀಕ್ಷಣೆ ಪಡೆದಿದೆ. ಸುಮಾರು 3,400 ನೆಟ್ಟಿಗರು ಇದನ್ನು ಇಷ್ಟಪಟ್ಟಿದ್ದಾರೆ.
ಬ್ರಿಲಿಯಂಟ್ ಐಡಿಯಾ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಯಾರೂ ಇದನ್ನು ವಿರೋಧಿಸಲಿ ಬಿಡಲಿ. ನೀವಂತೂ ಇಂಥ ಕೆಲಸಗಳನ್ನು ಮುಂದುವರಿಸಿ, ಬಹಳ ಇಷ್ಟವಾಯಿತು ಎಂದು ಮತ್ತೊಬ್ಬರು ಬೆನ್ನು ತಟ್ಟಿದ್ದಾರೆ. ಇವರಿಗೆ ದೇವರು ಒಳ್ಳೆಯದನ್ನು ಮಾಡಲಿ ಇಂಥ ಆಲೋಚನೆಗಾಗಿ ಎಂದು ಮತ್ತೊಬ್ಬರು ಹಾರೈಸಿದ್ದಾರೆ.
ಬೀದಿನಾಯಿ ಮನೆ ಎದುರು ಬಂದಾಗ ಉಳಿದ ಆಹಾರವನ್ನು ರಸ್ತೆಯಲ್ಲಿ ಎಸೆದು ಅಭ್ಯಾಸವಾಗಿದೆಯಲ್ಲ? ಅವೂ ಜೀವಗಳೇ. ಶುದ್ಧ ಆಹಾರ ಬೇಕೆಂದು ಹೇಳಲು ಅವುಗಳಿಗೆ ಬಾಯಿಯಿಲ್ಲ. ಮನುಷ್ಯರಾದ ನಾವೇ ಅವುಗಳಿಗೆ ಕಾಳಜಿ ಮಾಡಬೇಕಲ್ಲ. ಅಷ್ಟಕ್ಕೂ ಬೀದಿನಾಯಿಗಳು ಯಾಕೆ ಬೊಗಳುತ್ತವೆ, ಯಾಕೆ ಕಚ್ಚುತ್ತವೆ ಯೋಚಿಸಿ. ಎಲ್ಲ ಜೀವಿಗಳಿಗೂ ಮೂಲಸೌಲಭ್ಯ, ಸುರಕ್ಷತೆ, ಭದ್ರತೆ ಬೇಕೇಬೇಕಲ್ಲವೆ?
ಫೀಡಿಂಗ್ ಪೈಪ್ ಸೃಷ್ಟಿಕರ್ತನಂಥವರ ಸಂತತಿ ಸಾವಿರವಾಗಲಿ
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 3:41 pm, Thu, 8 September 22