
Viral Video : ‘ಮದುವೆ ಮಾಡಿನೋಡು ಮನೆ ಕಟ್ಟಿ ನೋಡು‘ ಈ ಹಳೆಯ ಗಾದೆ ಈಗಲೂ ಹಸಿಹಸಿಯಾಗಿಯೇ ಇದೆ. ಏಕೆಂದರೆ ಈ ಎರಡೂ ಸಂಗತಿಗಳು ನೀರಿಳಿಸಿಬಿಡುತ್ತವೆ. ಮದುವೆಯನ್ನು ಸರಳಗೊಳಿಸಬೇಕು ಎಂದು ಎಷ್ಟೆಲ್ಲ ನವನವೀನ ಪರಿಕಲ್ಪನೆಗಳನ್ನು ರೂಪಿಸಿದರೂ ಮನೆಮಂದಿಯೆಲ್ಲಾ ಹೈರಾಣುಗೊಳ್ಳುವುದು ಇನ್ನೂ ನಿಂತಿಲ್ಲ. ಆದರೂ ಈ ಸಂಗತಿಗಳನ್ನು ಹಗೂರಗೊಳಿಸಲು ಸಾಕಷ್ಟು ಅನ್ವೇಷಣೆಗಳು ಚಾಲ್ತಿಯಲ್ಲಿ ಇದ್ದೇ ಇರುತ್ತವೆ. ಇದೀಗ ಮದುವೆಗೆ ಸಂಬಂಧಿಸಿ ಒಂದು ಹೊಸ ಪರಿಕಲ್ಪನೆಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ವಾಹ್ ಎಂದಿದ್ದಾರೆ. ಈ ವಿಡಿಯೋ ನೋಡಿ ಕಲ್ಯಾಣ ಮಂಟಪವೇ ನೀವಿದ್ದಲ್ಲಿ ಬರುತ್ತದೆ! ಟ್ವಿಟರ್ ನಲ್ಲಿ ಅವರು ಪೋಸ್ಟ್ ಮಾಡುತ್ತಿದ್ದಂತೆ ವೈರಲ್ ಆಗುತ್ತಿದೆ.
ಮೊಬೈಲ್ ವಾಶ್ರೂಮ್, ಮೊಬೈಲ್ ಕ್ಲಿನಿಕ್, ಮೊಬೈಲ್ ಸ್ಟೋರ್ಸ್ ಹೀಗೆ ಇದ್ದಲ್ಲಿಗೇ ಎಲ್ಲವೂ ಚಲಿಸುವಂಥ ಕಾಲದಲ್ಲಿ ಹೊಸದಾದ ಸೇರ್ಪಡೆ ಈ ಮೊಬೈಲ್ ಮ್ಯಾರೇಜ್ ಹಾಲ್. ‘ಈ ಪರಿಕಲ್ಪನೆಯನ್ನು ವಿನ್ಯಾಸ ಮಾಡಿದ ವ್ಯಕ್ತಿಯನ್ನು ಭೇಟಿಮಾಡಲು ನಾನು ಇಚ್ಛಿಸುತ್ತೇನೆ. ಸೃಜನಶೀಲತೆ ಮತ್ತು ವಿಚಾರಪೂರ್ಣತೆಯಿಂದ ಇದು ಕೂಡಿದೆ. ದೂರದ ಪ್ರದೇಶಗಳಿಗೆ ಅನುಕೂಲಕಾರಿಯಾಗಿದೆ ಮತ್ತು ಪರಿಸರಸ್ನೇಹಿಯೂ ಆಗಿದೆ. ಜನಸಂಖ್ಯೆ ಹೆಚ್ಚಿರುವಂಥ ದೇಶಗಳಲ್ಲಿ ಈ ಮಾದರಿ ಅನುಕೂಲ’ ಎಂಬ ನೋಟ್ನೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ ಆನಂದ.
ಈ ಮೊಬೈಲ್ ಕಲ್ಯಾಣ ಮಂಟಪವು 200 ಜನರಿಗೆ ಮೀಸಲಾಗಿದೆ. 40/30 ಚದರ ಅಡಿಗಳನ್ನು ಹೊಂದಿರುವ ಇದು ಆಧುನಿಕ ಒಳಾಂಗಣ ವಿನ್ಯಾಸವನ್ನೂ ಹೊಂದಿದೆ. ಎಸಿ, ಲೈಟ್, ಫರ್ನಿಚರ್ಸ್, ಡೈನಿಂಗ್ ವ್ಯವಸ್ಥೆ ಎಲ್ಲವೂ ಇಲ್ಲಿದೆ. ಹಾಗಾಗಿ ನೆಟ್ಟಗರು ಈ ಪರಿಕಲ್ಪನೆಯನ್ನು ಬಹುವಾಗಿ ಮೆಚ್ಚಿದ್ದಾರೆ.
ನಮ್ಮ ಸುತ್ತಮುತ್ತಲೂ ಇಂಥ ಅನೇಕ ಅಪರೂಪದ ಸಂಗತಿ, ವಿಚಾರ, ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ನಮಗೆ ಅವುಗಳ ಕಡೆಗೆ ಗಮನ ಕಡಿಮೆಯೇ. ಆದರೆ ಒಮ್ಮೆ ಅಂತರ್ಜಾಲದಲ್ಲಿ ಇಂಥ ಆವಿಷ್ಕಾರಗಳ ಪ್ರದರ್ಶನವಾಯಿತೋ ಆಗಲೇ ನಾವೂ ವಾಹ್, ಕ್ಯಾ ಬಾತ್ ಹೈ ಎನ್ನುತ್ತೇವೆ. ಏಕೆಂದರೆ ನಾವು ಮಲಗಿದಾಗ ಬಿಟ್ಟು ಉಳಿದೆಲ್ಲ ಸಮಯದಲ್ಲಿಯೂ ಮೊಬೈಲ್ನಲ್ಲಿಯೇ ಕಣ್ಣು ನೆಟ್ಟಿರುತ್ತೇವಲ್ಲ!
ಈ ವಿಷಯ ಬಿಡಿ, ನಿಮ್ಮ ಮನೆಯ ಮದುವೆಗಳಿಗೂ ಈ ಐಡಿಯಾ ಚೆನ್ನಾಗಿದೆಯಲ್ಲವಾ? ಈಗಲೇ ಬುಕ್ ಮಾಡಿ ಮತ್ತೆ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:12 pm, Mon, 26 September 22