Viral Video : ಮನಸ್ಸಿದ್ದರೆ ಏನೂ ಸಾಧ್ಯವಾಗಿಸಿಕೊಳ್ಳಬಹುದು ಎನ್ನುವುದಕ್ಕೆ ಫರೀದಾಬಾದ್ನ ಈ ಯುವಕನೇ ಮಾದರಿ. 2019ರಲ್ಲಿ ಅವಿನಾಶ್ ಬಿ.ಕಾಂ ಪದವಿ ಪಡೆದರು. ನಂತರ ಕೆಲ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಮೆಕ್ಡೊನಾಲ್ಡ್ನಲ್ಲಿಯೂ ಕೆಲಸ ಮಾಡಿದರು. ಆದರೆ ಅಲ್ಲಿ ಕೊಡುವ ಸಂಬಳ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಮೊದಲಿನಿಂದಲೂ ಸ್ವಂತ ಉದ್ಯೋಗ ಮಾಡುವ ಕನಸು ಹಾಗೇ ಇತ್ತು, ಏಕೆಂದರೆ ಬಂಡವಾಳವಿರಲಿಲ್ಲ. ಮೂರು ತಿಂಗಳುಗಳ ಕಾಲ ನಿರುದ್ಯೋಗಿಯಾಗಿ ಕಾಲ ಕಳೆದರು. ಜೊತೆಗಿದ್ದಿದ್ದು ಅಪ್ಪ ಕೊಟ್ಟ ಗಿಫ್ಟ್ ದ್ವಿಚಕ್ರವಾಹನ ಮತ್ತು ಚೆನ್ನೈ ಮೂಲದ ಹೆಂಡತಿಯ ಕೈರುಚಿ. ಆಗ ತಾನು ದ್ವಿಚಕ್ರವಾಹನದ ಮೇಲೆಯೇ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸಬಾರದು ಎನ್ನಿಸಿತು.
‘ಬಿಕಾಂ ಇಡ್ಲಿವಾಲೆ’ ಎಂಬ ಹೆಸರಿನೊಂದಿಗೆ ಇಡ್ಲಿ-ಸಾಂಬಾರ್ ಮಾರಲು ಶುರುಮಾಡಿದರು. ಫರೀದಾಬಾದ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರತನಕ ರೂ. 20 ಒಂದು ಪ್ಲೇಟ್ನಂತೆ ಇಡ್ಲಿ ಮಾರುತ್ತಾರೆ. ‘ನನ್ನ ಅಪ್ಪ ಕಳೆದ ವರ್ಷ ಹೃದಯಾಘಾತದಿಂದ ತೀರಿಕೊಂಡರು. ಅವರು ಕೊಟ್ಟ ಗಿಫ್ಟ್ ಈ ಗಾಡಿ. ನನ್ನ ಹೆಂಡತಿ ದಕ್ಷಿಣಭಾರತದವರು. ಅವರು ತಯಾರಿಸುವ ಇಡ್ಲಿ ಮಾರುತ್ತೇನೆ. ಒಂದೂವರೆವರ್ಷದ ಮಗ, ಅಮ್ಮ ಮತ್ತು ತಮ್ಮತಂಗಿಯರನ್ನೆಲ್ಲ ಪೋಷಿಸುವ ಜವಾಬ್ದಾರಿ ನನಗಿದೆ’ ಎನ್ನುತ್ತಾರೆ ಅವಿನಾಶ್.
ಈ ವಿಡಿಯೋ ಅನ್ನು ಸ್ವ್ಯಾಗ್ ಸೇ ಡಾಕ್ಟರ್ ಎಂಬ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ನೆಟ್ಟಿಗರಿಗೆ ಈ ವಿಡಿಯೋ ಬಹಳ ಆಕರ್ಷಿಸಿದ್ದು ಶರವೇಗದಲ್ಲಿ ಈ ಪೋಸ್ಟ್ ಮರುಹಂಚಿಕೆಯಾಗುತ್ತಿದೆ. ‘ಇದನ್ನು ಮುಂದುವರಿಸಿಕೊಂಡು ಹೋಗು ಅಣ್ಣಾ’ ಎಂದು ಪ್ರೋತ್ಸಾಹಿಸಿದ್ದಾರೆ. ‘ಸ್ವಂತ ಮಾಡುವ ಯಾವ ಉದ್ಯೋಗವೂ ಸಣ್ಣದಲ್ಲ, ಒಳ್ಳೆಯದಾಗಲಿ’ ಎಂದು ಒಬ್ಬರು ಹಾರೈಸಿದ್ದಾರೆ. ‘ಕಷ್ಟಪಟ್ಟು ದುಡಿಯುತ್ತಿರುವ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ವಿಡಿಯೋ ಅನ್ನು ಸುಮಾರು 57,000 ಜನರು ಮೆಚ್ಚಿದ್ದಾರೆ.
ಮನೆಯವರ ಸಹಕಾರದಿಂದ ದುಡಿದು ಬದುಕು ಕಟ್ಟಿಕೊಳ್ಳುತ್ತಿರುವ ಅವಿನಾಶಗೆ ಒಳಿತಾಗಲಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:38 am, Fri, 14 October 22