ಈ ಮಹಿಳೆಯ ಕಣ್ಣಿನಿಂದ 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹೊರತೆಗೆದ ವೈದ್ಯರು
Contact Lenses : ಈ ಮಹಿಳೆ 23 ದಿನಗಳ ತನಕ ರಾತ್ರಿ ಮಲಗುವಾಗ ಲೆನ್ಸ್ ತೆಗೆದಿಡುವುದನ್ನು ಮರೆತಿದ್ದಾರೆ. ಆದರೆ ಪ್ರತೀ ದಿನ ಬೆಳಗ್ಗೆ ಹೊಸ ಲೆನ್ಸ್ ಹಾಕಿಕೊಳ್ಳುವುದನ್ನು ಮಾತ್ರ ಮರೆತಿಲ್ಲ! ವೈದ್ಯರೇ ಪೋಸ್ಟ್ ಮಾಡಿದ ಈ ವಿಡಿಯೋ ನೋಡಿ.
Viral Video : ಕೆಲವರು ಕನ್ನಡಕದ ಬದಲಾಗಿ ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಲೆನ್ಸ್ ಹಾಕಿಕೊಳ್ಳಬೇಕೆಂದರೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಇಲ್ಲವಾದಲ್ಲಿ ಕಣ್ಣಿಗೆ ತೊಂದರೆಯಾಗುವ ಅಪಾಯವಿರುತ್ತದೆ. ಇಲ್ಲೊಬ್ಬ ಹಿರಿಯ ಮಹಿಳೆ ಡಾ. ಕ್ಯಾಟರೀನಾ ಕುರ್ಟೀವಾ ಎಂಬ ಕಣ್ಣಿನ ಡಾಕ್ಟರ್ ಬಳಿ ಹೋಗಿದ್ದಾರೆ. ಆಗ ಡಾಕ್ಟರ್ ಆಕೆಯ ಕಣ್ಣನ್ನು ಪರೀಕ್ಷಿಸಿದಾಗ ಒಳಗೆ ಲೆನ್ಸ್ ಇರುವುದು ಪತ್ತೆಯಾಗಿದೆ. ಆಕೆಯ ಕಣ್ಣಿನಿಂದ ಒಂದೊಂದೇ ಲೆನ್ಸ್ಗಳನ್ನು ತೆಗೆಯಲು ಶುರುಮಾಡಿದ್ದಾರೆ. ಎಣಿಸುತ್ತ ಹೋದರೆ ಒಂದಲ್ಲ ಎರಡಲ್ಲ ಬರೋಬ್ಬರಿ 23 ಲೆನ್ಸ್ಗಳು! ಎಂಥ ಆತಂಕಕಾರಿ ವಿಷಯವಿದು. 3 ಮಿಲಿಯನ್ ಜನರು ವೀಕ್ಷಿಸಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ.
View this post on Instagram
ಈ ಮಹಿಳೆ 23 ದಿನಗಳ ತನಕ ರಾತ್ರಿ ಮಲಗುವಾಗ ಲೆನ್ಸ್ ತೆಗೆದಿಡುವುದನ್ನು ಮರೆತು ಹಾಗೇ ಮಲಗಿದ್ದಾರೆ. ಆದರೆ ಪ್ರತೀ ದಿನ ಬೆಳಗ್ಗೆ ಹೊಸ ಲೆನ್ಸ್ ಹಾಕಿಕೊಳ್ಳುವುದನ್ನು ಮಾತ್ರ ಮರೆತಿಲ್ಲ! ಆ ಎಲ್ಲ ಲೆನ್ಸ್ಗಳು ಕಣ್ಣುಗಳಲ್ಲಿ ಸಂಗ್ರಹವಾಗಿ ತೊಂದರೆ ಕೊಡಲಾರಂಭಿಸಿವೆ. ಆಗ ಡಾಕ್ಟರ್ ಬಳಿ ಈಕೆ ಓಡಿದ್ದಾರೆ.
ಡಾ. ಕ್ಯಾಟರೀನಾ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ‘ಯಾರೂ ಕಾಂಟ್ಯಾಕ್ಟ್ ಲೆನ್ಸ್ ತೆಗೆಯದೇ ಮಲಗಬೇಡಿ. ನೋಡಿ ಈಗ ಈ ಮಹಿಳೆಯ ಪರಿಸ್ಥಿತಿ. ಎಲ್ಲಾ ಲೆನ್ಸ್ಗಳನ್ನು ಹೊರತೆಗೆದ ಮೇಲೆ ಒಂದಕ್ಕೊಂದು ಅಂಟಿಕೊಂಡಿದ್ದ 23 ಲೆನ್ಸ್ಗಳನ್ನು ಆಭರಣದಂಗಡಿಯವರು ಉಪಯೋಗಿಸುವ ಫೋರ್ಸೆಪ್ಸ್ನ ಸಹಾಯದಿಂದ ಬೇರ್ಪಡಿಸಬೇಕಾಯಿತು. ಏಕೆಂದರೆ 23 ದಿನಗಳ ಕಾಲ ಒಂದರ ಮೇಲೆ ಒಂದು ಲೆನ್ಸ್ ಹಾಕಿಕೊಂಡ ಪರಿಣಾಮ ಆ 23 ಲೆನ್ಸ್ಗಳು ಕಣ್ಣಗುಡ್ಡೆಯ ಮೇಲೆ ಅಂಟಿಕೊಂಡು ಕುಳಿತಿದ್ದವು.’ ಎಂದಿದ್ದಾರೆ ಕ್ಯಾಟರೀನಾ.
ನೆಟ್ಟಿಗರು ಈ ವಿಡಿಯೋ ನೋಡಿ ಗಾಬರಿಗೆ ಬಿದ್ದಿದ್ದಾರೆ ಮತ್ತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ‘ಈ ಮಹಿಳೆ ಕಾಂಟ್ಯಾಕ್ಟ್ ಲೆನ್ಸ್ಗಿಂತ ಕನ್ನಡಕ ಧರಿಸುವುದು ಒಳ್ಳೆಯದು’ ಎಂದಿದ್ದಾರೆ ಒಬ್ಬರು. ‘ಒಂದು ಲೆನ್ಸ್ ಸುರುಳಿಸುತ್ತಿರುವುದನ್ನು ನೋಡಿದೆ!’ ಎಂದು ಮತ್ತೊಬ್ಬರು ಹೇಳಿದ್ದಾರೆ. ‘ಅಷ್ಟೆಲ್ಲ ಲೆನ್ಸ್ಗಳು ಕಣ್ಣಲ್ಲೇ ಇದ್ದರೂ ಕಣ್ಣು ಸೋಂಕಿಗೆ ಒಳಗಾಗಲೇ ಇಲ್ಲವೆ?’ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ‘ಅವೆಲ್ಲ ಎಲ್ಲಿ ಅಡಗಿ ಕುಳಿತಿವೆ ಎಂಬ ಪ್ರಶ್ನೆಯೇ ಈಕೆಗೆ ಉದ್ಭವಿಸಲಿಲ್ಲವೇ?’ ಎಂದಿದ್ದಾರೆ ಮಗದೊಬ್ಬರು.
ಇನ್ನಾದರೂ ಕಾಂಟ್ಯಾಕ್ಟ್ ಲೆನ್ಸ್ನ ಮೋಹದಿಂದ ಹೊರಬಂದು ಕನ್ನಡಕ ಹಾಕಿಕೊಳ್ಳುವರೇ ಈ ಮಹಿಳೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:23 pm, Fri, 14 October 22