ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಯುರೋಪ್ ಮತ್ತು ರಷ್ಯಾದಿಂದ ಸಾವಿರಾರು ಪಕ್ಷಿಗಳು ಭಾರತಕ್ಕೆ ವಲಸೆ ಬರುತ್ತವೆ. ಚಳಿಗಾಲದಲ್ಲಿ ವಿದೇಶಗಳಲ್ಲಿನ ಸರೋವರಗಳು ಹಿಮದಿಂದ ಹೆಪ್ಪುಗಟ್ಟುವುದರಿಂದ ಚಳಿಗಾಲದಲ್ಲಿ ಈ ಪಕ್ಷಿಗಳೆಲ್ಲಾ ಪಂಜಾಬಿನ ಹರಿಕೆ ಪಕ್ಷಿಧಾಮಕ್ಕೆ ವಲಸೆ ಬಂದು, ಕೆಲವು ತಿಂಗಳುಗಳ ಕಾಲ ಇಲ್ಲಿಯೇ ಇರುತ್ತವೆ. ತರ್ನ್ ತರನ್, ಫಿರೋಜ್ ಪುರ ಮತ್ತು ಕಪುರ್ತಲಾ ಜಿಲ್ಲೆಗಳಲ್ಲಿ 86 ಚದರ ಕಿಲೋಮೀಟರ್ಗಳಷ್ಟು ಹರಡಿರುವ ಉತ್ತರ ಭಾರತದ ಅತೀ ದೊಡ್ಡ ಜೌಗು ಪ್ರದೇಶವಾಗಿರುವ ಹರಿಕೆ ಪಕ್ಷಿಧಾಮ ಚಳಿಗಾಲದ ಅವಧಿಯಲ್ಲಿ ಅಪರೂಪದ ಜಾತಿಯ ವಲಸೆ ಪಕ್ಷಿಗಳಿಗೆ ನೆಲೆಯಾಗಿದೆ. ಸಾಮಾನ್ಯವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ವಲಸೆ ಹಕ್ಕಿಗಳು ಬರಲಾರಂಭಿಸುತ್ತವೆ, ಆದರೆ ಈ ಬಾರಿ ಚಳಿಗಾಲ ತಡವಾಗಿ ಆರಂಭವಾದ ಕಾರಣ ಹಕ್ಕಿಗಳು ನವೆಂಬರ್ನಲ್ಲಿ ವಲಸೆ ಬರಲಾರಂಭಿಸಿವೆ.
ಇನ್ನೂ ಕೆಲವೇ ದಿನಗಳಲ್ಲಿ ಸುಮಾರು 40,000 ದಿಂದ 50,000 ವಲಸೆ ಹಕ್ಕಿಗಳು ಇಲ್ಲಿಗೆ ಬರಲಿವೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಜನವರಿ 20 ಮತ್ತು 21 ರಂದು ಹರಿಕೆ ಪಕ್ಷಿಧಾಮದಲ್ಲಿ ʼಹರಿಕೆ ವೆಟ್ಲ್ಯಾಂಡ್ ಫೆಸ್ಟಿವಲ್ʼ ನಡೆಸುವುದಾಗಿ ಪಂಜಾಬ್ ಸರ್ಕಾರವು ಘೋಷಿಸಿದೆ.
ಇದನ್ನೂ ಓದಿ: ಮೊಸಳೆಯ ಗಾತ್ರವನ್ನು ಹೋಲುವ ವಿಶಿಷ್ಟ ಜಾತಿಯ ಹಲ್ಲಿ ಪತ್ತೆ
ಈ ಬಾರಿ ಹರಿಕೆ ಪಕ್ಷಿಧಾಮಕ್ಕೆ ಸುಮಾರು 40,000 ದಿಂದು 50,000 ವಲಸೆ ಹಕ್ಕಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ವಿಶ್ವ ವನ್ಯ ಜೀವಿ ನಿಧಿಗೆ (WWF) ಪಂಜಾಬ್ ವನ್ಯಜೀವಿ ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಳಿಗಾಲದಲ್ಲಿ ಹರಿಕೆ ಪಕ್ಷಿಧಾಮಕ್ಕೆ ವಲಸೆ ಬರುವ ವಿವಿಧ ಜಾತಿಯ ಪಕ್ಷಿಗಳು ಮಾರ್ಚ್ ಮತ್ತು ಏಪ್ರಿಲ್ ವರೆಗೆ ಅಲ್ಲಿಯೇ ಇರುತ್ತವೆ. ಲಭ್ಯವಿರುವ ಮಾಹಿತಿಯ ಪ್ರಕಾರ ಸೈಬೀರಿಯಾ, ಮಂಗೋಲಿಯ, ಕಜಕಿಸ್ತಾನ್, ಉಜ್ಬೇಕಿಸ್ತಾನ್, ರಷ್ಯಾ, ಯುರೋಪ್ ಸೇರಿದಂತೆ ವಿವಿಧ ದೇಶಗಳಿಂದ 90 ಕ್ಕೂ ಹೆಚ್ಚು ಜಾತಿಯ 90 ಸಾವಿರಕ್ಕೂ ಹೆಚ್ಚು ವಲಸೆ ಹಕ್ಕಿಗಳು ಹರಿಕೆ ಪಕ್ಷಿಧಾಮಕ್ಕೆ ಬರುತ್ತವೆ. ಈ ತಿಂಗಳು ಜಲ ಪಕ್ಷಿಗಳ ಗಣತಿ ನಡೆಸಿದ ನಂತರವೇ ವಲಸೆ ಹಕ್ಕಿಗಳ ಆಗಮನದ ನಿಖರ ಸಂಖ್ಯೆ ತಿಳಿಯಲಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ