ಲಂಡನ್, ಜುಲೈ 25: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹೋತ್ತರ ಕಾರ್ಯಕ್ರಮ ಪ್ರೀವೆಡ್ಡಿಂಗ್ ಕಾರ್ಯಕ್ರಮಗಳನ್ನು ಮೀರಿಸುವಂತೆ ನಡೆಯುವ ಸಾಧ್ಯತೆ ಇದೆ. ಲಂಡನ್ನ ಐಷಾರಾಮಿ ಸೆವೆನ್ ಸ್ಟಾರ್ ಆದ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಬುಕ್ ಮಾಡಲಾಗಿದೆ. ಎರಡು ತಿಂಗಳವರೆಗೆ, ಅಂದರೆ ಸೆಪ್ಟೆಂಬರ್ವರೆಗೆ ಇಡೀ ಹೋಟೆಲ್ ಅನ್ನು ಅಂಬಾನಿ ಕುಟುಂಬ ಕಾಯ್ದಿರಿಸಿದೆ. ಇಲ್ಲಿಯೇ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮ ನಡೆಯುವುದು ಖಚಿತ ಎನ್ನಲಾಗಿದೆ.
ಪ್ರಿನ್ಸ್ ಹ್ಯಾರಿ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ವಿವಾಹೋತ್ತರ ಆಚರಣೆಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬ್ರಿಟಿಷ್ ಟ್ಯಾಬ್ಲಾಯ್ಡ್ ಒಂದರಲ್ಲಿ ವರದಿ ಮಾಡಲಾಗಿದೆ. ಬೋರಿಸ್ ಜಾನ್ಸನ್ ಮತ್ತು ಟೋನಿ ಮತ್ತು ಚೆರಿ ಬ್ಲೇರ್ ಅವರೂ ಬರುವ ನಿರೀಕ್ಷೆ ಇದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಮದುವೆ ಜುಲೈ 12ಕ್ಕೆ ನಡೆದಿದ್ದು 500 ಮಿಲಿಯನ್ ಡಾಲರ್ ಹಣ ವೆಚ್ಚವಾಗಿತ್ತು. ಹೀಗಾಗಿ, ಲಂಡನ್ನ ಸ್ಟೋಕ್ ಪಾರ್ಕ್ ಹೋಟೆಲ್ನಲ್ಲಿ ನಡೆಯುವ ವಿವಾಹೋತ್ತರ ಸಮಾರಂಭ ಕೂಡ ಭಾರೀ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ದೇಶದ ಜಿಡಿಪಿಗೂ ಅದರ ಪಾಸ್ಪೋರ್ಟ್ ಶಕ್ತಿಗೂ ಸಂಬಂಧ ಇದೆಯಾ? ಇಲ್ಲಿದೆ ವಿವಿಧ ದೇಶಗಳ ಪಾಸ್ಪೋರ್ಟ್ ಶಕ್ತಿ
ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ 2021 ರಲ್ಲಿ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು 57 ಮಿಲಿಯನ್ ಪೌಂಡ್ಗೆ ಲೀಸ್ಗೆ ಪಡೆದಿದೆ. ಬಹಳ ಐತಿಹಾಸಿಕವಾದ ಈ 300 ಎಕರೆ ಎಸ್ಟೇಟ್ ಅನ್ನು ಇತ್ತೀಚೆಗೆ ನವೀಕರಣಕ್ಕಾಗಿ ಮುಚ್ಚಲಾಗಿದೆ.
ಲಂಡನ್ನ ಹೊರಗಿನ ಬಕಿಂಗ್ಹ್ಯಾಮ್ ಶೈರ್ನಲ್ಲಿರುವ ಸ್ಟೋಕ್ ಪಾರ್ಕ್ ಎಸ್ಟೇಟ್ನಲ್ಲಿ ಒಂದು ಬಂಗಲೆ, ಗಾಲ್ಫ್ ಕೋರ್ಟ್ಗಳು ಮತ್ತು ಟೆನಿಸ್ ಕೋರ್ಟ್ಗಳು ಮೊದಲಾದವು ಇವೆ. ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದಂತೆ, ಗ್ರೇಡ್ 2-ಪಟ್ಟಿಗೆ ಸೇರುವ ಸ್ಟೋಕ್ ಪಾರ್ಕ್ ಹೋಟೆಲ್ ಅನ್ನು ಖಾಸಗಿ ನಿವಾಸಕ್ಕೆ ಬಳಸುವಂತಿಲ್ಲ. ಕಮರ್ಷಿಯಲ್ ಪ್ರಾಪರ್ಟಿಯಾಗಿಯೇ ಇರಬೇಕು ಎಂದು ಗುತ್ತಿಗೆ ನಿಯಮಗಳು ಹೇಳುತ್ತವೆ.
ಇದನ್ನೂ ಓದಿ: ಚಿಲ್ಲರೆ ಹಣ ಇಲ್ಲದಿದ್ರೆ ಪರ್ವಾಗಿಲ್ಲ, ಆನ್‌ಲೈನ್ ಪೇಮೆಂಟ್ ಓಕೆ, ರೈಲಿನಲ್ಲಿ ಮಂಗಳಮುಖಿಯ ಡಿಜಿಟಲ್ ಭಿಕ್ಷಾಟನೆ
ಅಂಬಾನಿ ಕುಟುಂಬ ಈ ಎಸ್ಟೇಟ್ ಅನ್ನು ಲೀಸ್ಗೆ ಪಡೆದಾಗಿನಿಂದಲೂ ಸಾರ್ವಜನಿಕರಿಗೆ ಇದರ ಪ್ರವೇಶ ಸಿಗುತ್ತಿಲ್ಲ. ಇಲ್ಲಿ ಬಹಳ ಖ್ಯಾತವಾಗಿದ್ದ ಗಾಲ್ಫ್ ಕೋರ್ಸ್ಗೂ ಪ್ರವೇಶ ನಿರಾಕರಿಸಲಾಗಿದೆ. ಇದು ಅಂಬಾನಿ ಕುಟುಂಬಕ್ಕೂ ಸ್ಥಳೀಯ ಆಡಳಿತಕ್ಕೂ ಘರ್ಷಣೆಗೆ ಕಾರಣವಾಗಿದೆ. ಇದೀಗ ಮುಖೇಶ್ ಅಂಬಾನಿ ಎರಡು ತಿಂಗಳವರೆಗೆ ಹೋಟೆಲ್ ಕಾಯ್ದಿರಿಸುವ ಮೂಲಕ ಸಂದಿಗ್ಧತೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.
– ದರ್ಶಿನಿ ತಿಪ್ಪಾರೆಡ್ಡಿ
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ