ಬಿಸಿಲು ಇರುವಾಗ ಹೊರಗೆ ಬರಬಹುದಾ ಎಂದು ಕೇಳಿದ ವ್ಯಕ್ತಿಗೆ ಸಖತ್ ತಿರುಗೇಟು ಕೊಟ್ಟ ಪೊಲೀಸರು; ವೈರಲ್ ಆಯ್ತು ಟ್ವೀಟ್
ಮುಂಬೈ ಪೊಲೀಸರ ಈ ಚಾಣಾಕ್ಷ ಉತ್ತರಕ್ಕೆ ತಲೆದೂಗಿದ ಜನಸಾಮಾನ್ಯರು ಉತ್ತರ ಅಂದ್ರೆ ಇದಪ್ಪಾ ಎಂದು ಚಪ್ಪಾಳೆ ತಟ್ಟಿದ್ದಾರೆ. ಸಾಧಾರಣವಾಗಿ ಆಗಾಗ ಇಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುಂಬೈ ಪೊಲೀಸರು ಲಾಟಿಗಿಂತಲೂ ಬಿಗುವಾಗಿ ಮಾತಿನೇಟು ಕೊಡುತ್ತಾರೆ.
ಮುಂಬೈ: ಕೊರೊನಾ ಎರಡನೇ ಅಲೆಯಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್ಡೌನ್ ಜಾರಿಯಾಗಿದ್ದು, ಜನರು ಅನಿವಾರ್ಯವಾಗಿ ಮನೆಯೊಳಗೆ ಕೂರಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಜನರನ್ನು ಮನೆಯಿಂದ ಆಚೆ ಬಾರದಂತೆ ನಿಯಂತ್ರಿಸುವುದೇ ಹರಸಾಹಸವಾಗಿದೆ. ಇದಕ್ಕಾಗಿ ಖಾಕಿ ಪಡೆ ಹಲವು ಮಾರ್ಗಗಗಳನ್ನು ಅನುಸರಿಸುತ್ತಿದೆ ಕೂಡಾ. ಈಗೀಗ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪುವುದು ಸುಲಭವಾದ ಕಾರಣ ಈ ವೇದಿಕೆಗಳನ್ನೂ ಪೊಲೀಸರು ಬಳಸಿಕೊಂಡು ಜನರ ಗಮನ ಸೆಳೆಯುತ್ತಿರುತ್ತಾರೆ. ಆ ಪೈಕಿ ಟ್ವಿಟರ್ನಲ್ಲಿ ಅತ್ಯಂತ ಗಂಭೀರ ವಿಚಾರಗಳನ್ನೂ ಹಾಸ್ಯಭರಿತವಾಗಿ ಹಂಚಿಕೊಂಡು ಮನಗೆಲ್ಲುವಲ್ಲಿ ಮುಂಬೈ ಪೊಲೀಸರು ಒಂದು ಹೆಜ್ಜೆ ಮುಂದಿದ್ದಾರೆ.
ಆಗಾಗ ತಮ್ಮ ಕ್ರಿಯಾಶೀಲತೆ ಮೂಲಕ ಜನರನ್ನು ನಗಿಸುವ ಮುಂಬೈ ಪೊಲೀಸರ ಟ್ವಿಟರ್ ಖಾತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರೆ. ಇಂತಹ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗಷ್ಟೇ ಕಂಡುಬಂದ ಪೋಸ್ಟ್ ಒಂದು ಈಗ ಭಾರೀ ಜನಪ್ರಿಯವಾಗಿದೆ. ಮೇ 23ರಂದು ಮುಂಬೈ ವಾತಾವರಣದ ಬಗ್ಗೆ ಪೋಸ್ಟ್ ಮಾಡಿದ್ದ ಪೊಲೀಸರು ಹೊರಗೆ 30ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಮನೆಯ ಒಳಗೆ ನೆಮ್ಮದಿಯಿಂದ ಕೂರಲು ಸೂಕ್ತ ವಾತಾವರಣ ಎಂಬ ಸಂದೇಶವನ್ನು ಹಂಚಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿಯೋರ್ವ ನನ್ನ ಹೆಸರಿನಲ್ಲೇ ಸನ್ನಿ ಎಂದಿದೆ. ಹಾಗಾಗಿ, ಈ ಸನ್ನಿ ಡೇ (ಬಿಸಿಲ ವಾತಾವರಣ ಇರುವ ದಿನ) ಸಮಯದಲ್ಲಿ ನಾನು ಹೊರಗೆ ಹೋಗಬಹುದಾ ಎಂದು ಕೇಳಿದ್ದರು. ಆದರೆ, ಅದಕ್ಕೆ ತಕ್ಕ ಉತ್ತರ ನೀಡಿರುವ ಮುಂಬೈ ಪೊಲೀಸರು ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.
It’s a Hot Sunny Sunday. A Perfect Climate To Remain Indoors.#StayIndoor#TakingOnCorona pic.twitter.com/9DZ8iJxO2w
— CP Mumbai Police (@CPMumbaiPolice) May 23, 2021
ನನ್ನ ಹೆಸರು ಸನ್ನಿ, ನಾನು ಹೊರಗೆ ಹೋಗಬಹುದಾ ಎಂದು ಕೇಳಿದ ವ್ಯಕ್ತಿಗೆ ಉತ್ತರಿಸಿರುವ ಪೊಲೀಸರು. ಸರ್, ನೀವು ನಿಜವಾಗಿಯೂ ಸೂರ್ಯನೇ ಆಗಿದ್ದರೆ. ಸೌರಮಂಡಲದ ನಡುವಿನಲ್ಲಿರುವ ನಕ್ಷತ್ರವಾಗಿದ್ದು, ಭೂಮಿ ಸೇರಿದಂತೆ ಇನ್ನುಳಿದ ಎಲ್ಲಾ ಗ್ರಹಗಳೂ ನಿಮ್ಮ ಸುತ್ತ ತಿರುಗುವುದಾಗಿದ್ದರೆ ನಿಮ್ಮ ಮೇಲೆ ಎಷ್ಟು ಜವಾಬ್ದಾರಿ ಇದೆ ಎಂದು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ. ಹೀಗಿರುವಾಗ ನೀವು ವೈರಸ್ಗೆ ಆಹ್ವಾನ ನೀಡುವ ಮೂಲಕ ಜವಾಬ್ದಾರಿಯಲ್ಲಿ ರಾಜಿ ಆಗಬೇಡಿ. ನೀವು ಸುರಕ್ಷತೆಯ ವಿಚಾರದಲ್ಲಿ ಪ್ರಕಾಶಮಾನವಾಗಿ ಹೊಳೆಯುವಂತಾಗಿ ಎಂದು ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
Sir, if you are truly that star at the centre of the solar system, around which Earth & the other components of solar system revolve, we hope you realise the responsibility you are shouldering! Don’t compromise it by exposing yourself to the virus please! Be the #SunshineOfSafety https://t.co/qxIYSkAeNU
— Mumbai Police (@MumbaiPolice) May 24, 2021
ಮುಂಬೈ ಪೊಲೀಸರ ಈ ಚಾಣಾಕ್ಷ ಉತ್ತರಕ್ಕೆ ತಲೆದೂಗಿದ ಜನಸಾಮಾನ್ಯರು ಉತ್ತರ ಅಂದ್ರೆ ಇದಪ್ಪಾ ಎಂದು ಚಪ್ಪಾಳೆ ತಟ್ಟಿದ್ದಾರೆ. ಸಾಧಾರಣವಾಗಿ ಆಗಾಗ ಇಂತಹ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮುಂಬೈ ಪೊಲೀಸರು ಲಾಟಿಗಿಂತಲೂ ಬಿಗುವಾಗಿ ಮಾತಿನೇಟು ಕೊಡುತ್ತಾರೆ. ಪೊಲೀಸರು ಇಷ್ಟು ಕ್ರಿಯಾತ್ಮಕವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದನ್ನು ನೋಡಿ ಜನರೂ ಕೂಡ ಸೆಲೆಬ್ರಿಟಿಗಳ ಅಕೌಂಟ್ ಫಾಲೋ ಮಾಡುವ ರೀತಿಯಲ್ಲೇ ಮುಂಬೈ ಪೊಲೀಸರ ಅಕೌಂಟ್ ಹಿಂಬಾಲಿಸುತ್ತಿದ್ದಾರೆ.
ಡಬಲ್ ಮಾಸ್ಕ್ ಧರಿಸುವುದರ ಮಹತ್ವದ ಕುರಿತು ಪೋಸ್ಟ್ ಹಂಚಿಕೊಂಡ ಮುಂಬೈ ಪೊಲೀಸರು