ಹನಿ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗೆ ಬಾಯೊಡ್ಡಿದ ಹದ್ದು; ವೈರಲ್ ಆಯ್ತು ವಿಡಿಯೋ
ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಸೂಕ್ಷ್ಮ ಕಣ್ಣಿನ ಹಕ್ಕಿಗೆ ಒಂದು ನೀರಿನ ಒರತೆ ಕಾಣಿಸದಷ್ಟು ಈ ಭೂಮಿಯನ್ನು ನಾವು ಆಕ್ರಮಿಸಿಕೊಂಡಿದ್ದೇವೆಂದರೆ, ಒಂದು ಸ್ವತಂತ್ರ ಜೀವಿ ಬಾಯಾರಿಕೆ ನೀಗಿಸಿಕೊಳ್ಳಲು ಮಾನವನ ಸಹಾಯ ಬೇಡುವ ದುಸ್ಥಿತಿ ಎದುರಾಗಿದೆಯೆಂದರೆ ಈ ಪ್ರಕೃತಿಯನ್ನು ನಾವೆಷ್ಟು ಸಮರ್ಪಕವಾಗಿ ಕಾಪಾಡಿಕೊಂಡಿದ್ದೇವೆ ಎಂದು ಯೋಚಿಸಬೇಕಿದೆ.
ಮನುಷ್ಯ ಬುದ್ಧಿಜೀವಿ ಎನ್ನುವ ವಿಶೇಷಣವೊಂದನ್ನು ಬಿಟ್ಟರೆ ಆತನೂ ಮಿಕ್ಕೆಲ್ಲಾ ಜೀವಿಗಳಂತೆಯೇ ಈ ಪ್ರಕೃತಿಯ ಒಂದು ಭಾಗ. ಇಲ್ಲಿನ ಸೌಲಭ್ಯಗಳನ್ನು ಅನುಭವಿಸಲು, ಆಸ್ವಾದಿಸಲು ನಮಗೆಷ್ಟು ಅಧಿಕಾರವಿದೆಯೋ ಅಷ್ಟೇ ಹಕ್ಕು ಉಳಿದ ಜೀವಿಗಳಿಗೂ ಇದೆ. ಆದರೆ, ನಾವು ಮಾತ್ರ ಅಭಿವೃದ್ಧಿಯ ಹೆಸರಲ್ಲಿ, ಪ್ರತಿಷ್ಠೆಯ ಗುಂಗಲ್ಲಿ ಈ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯವೆಸಗುತ್ತಾ ಉಳಿದ ಜೀವಿಗಳನ್ನು ನಿರಾಶ್ರಿತರನ್ನಾಗಿಸಿ, ಅವುಗಳ ಮೂಲಭೂತ ಅವಶ್ಯಕತೆಗಳನ್ನು ಬರಿದಾಗಿಸುತ್ತಿದ್ದೇವೆ. ಅಸಲಿಗೆ, ನಮ್ಮ ಮೂಲಭೂತ ಅವಶ್ಯಕತೆಯೂ ಆಹಾರ, ಗಾಳಿ, ನೀರು, ವಸತಿ ಎನ್ನುವುದಾದರೂ ನಾಗರೀಕತೆ ಬೆಳೆದಂತೆ, ಆಧುನಿಕತೆಗೆ ಹೊರಳಿದಂತೆ ಮೂಲಭೂತ ಅವಶ್ಯಕತೆ ಎನ್ನುವುದಕ್ಕೆ ಮಿತಿಯೇ ಇಲ್ಲದಂತೆ ಮಾಡಿಟ್ಟಿದ್ದೇವೆ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಹ ಜೀವಿಗಳು ಆಹಾರ, ನೀರಿಗಾಗಿ ಪರದಾಡುವಂತಾಗಿದೆ. ತಮ್ಮ ಆಹಾರ, ನೀರಡಿಕೆಯನ್ನು ತಾವೇ ನೀಗಿಸಿಕೊಳ್ಳಬೇಕಾಗಿದ್ದ ಪ್ರಾಣಿ, ಪಕ್ಷಿಗಳು ಮನುಷ್ಯನ ಋಣಕ್ಕೆ ಬೀಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಅತ್ಯುತ್ತಮ ನಿದರ್ಶನ ಎನ್ನಬಲ್ಲ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿದ್ದು, ಅದರಲ್ಲಿ ವ್ಯಕ್ತಿಯೋರ್ವ ಪ್ಲಾಸ್ಟಿಕ್ ಬಾಟಲಿಯಲ್ಲಿ ಹದ್ದಿಗೆ ನೀರು ಕುಡಿಸುತ್ತಿರುವುದು ಕಂಡು ಬಂದಿದೆ. 20 ಸೆಕೆಂಡ್ ಅವಧಿಯ ಈ ವಿಡಿಯೋ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು, ಎಲ್ಲರೂ ಹದ್ದಿಗೆ ನೀರುಣಿಸಿದ ಆ ವ್ಯಕ್ತಿಯ ಮಾನವೀಯತೆಯನ್ನು ಕೊಂಡಾಡಿದ್ದಾರೆ.
ಬ್ಯೂಟೆಂಗ್ಬೈಡನ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಒಂದು ದಿನದೊಳಗೆ 54 ಸಾವಿರಕ್ಕೂ ಅಧಿಕ ವೀಕ್ಷಣೆ ಗಿಟ್ಟಿಸಿಕೊಂಡು ಇತರೆ ಸಾಮಾಜಿಕ ಜಾಲತಾಣಗಳ ಮೂಲಕವೂ ಸದ್ದು ಮಾಡುತ್ತಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಹದ್ದಿಗೆ ನೀರುಣಿಸಿದ್ದಕ್ಕಾಗಿ ಹಲವರು ಧನ್ಯವಾದ ಅರ್ಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಯಾರಿದ ಹದ್ದು.. ಧನ್ಯವಾದಗಳು ಎಂಬ ತಲೆಬರಹದೊಂದಿಗೆ ಹಂಚಲ್ಪಟ್ಟಿರುವ ಈ ವಿಡಿಯೋಕ್ಕೆ ಪ್ರತಿಕ್ರಿಯಿಸಿರುವ ಹಲವರು ಇಂತಹ ಮಾನವೀಯ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದ್ದಾರೆ.
Thirsty eagle..
Thank you! ? pic.twitter.com/ljmh7yMlDU
— Buitengebieden (@buitengebieden_) May 24, 2021
ವಿಡಿಯೋದಲ್ಲಿರುವ ವ್ಯಕ್ತಿ ಬಾಯಾರಿದ ಹದ್ದಿಗೆ ನೀರುಣಿಸಿ ಜೀವದಾನ ಮಾಡಿರುವುದು ನಿಸ್ಸಂದೇಹವಾಗಿ ಶ್ಲಾಘನೀಯ ಕಾರ್ಯವಾದರೂ ಇದರಲ್ಲಿ ಯೋಚನೆಗೆ ಹಚ್ಚುವ ಹಲವು ಗಂಭೀರ ಸಂಗತಿಗಳಿವೆ ಎಂಬುದನ್ನು ಬದಿಗೊತ್ತಲಾಗದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿರುವ ಸೂಕ್ಷ್ಮ ಕಣ್ಣಿನ ಹಕ್ಕಿಗೆ ಒಂದು ನೀರಿನ ಒರತೆ ಕಾಣಿಸದಷ್ಟು ಈ ಭೂಮಿಯನ್ನು ನಾವು ಆಕ್ರಮಿಸಿಕೊಂಡಿದ್ದೇವೆಂದರೆ, ಒಂದು ಸ್ವತಂತ್ರ ಜೀವಿ ಬಾಯಾರಿಕೆ ನೀಗಿಸಿಕೊಳ್ಳಲು ಮಾನವನ ಸಹಾಯ ಬೇಡುವ ದುಸ್ಥಿತಿ ಎದುರಾಗಿದೆಯೆಂದರೆ ಈ ಪ್ರಕೃತಿಯನ್ನು ನಾವೆಷ್ಟು ಸಮರ್ಪಕವಾಗಿ ಕಾಪಾಡಿಕೊಂಡಿದ್ದೇವೆ ಎಂದು ಯೋಚಿಸಬೇಕಿದೆ. ನಮ್ಮ ಹೊಣಡಗೇಡಿತನ, ಲಾಲಸೆಯ ಕಾರಣಕ್ಕಾಗಿ ಇತರೆ ಜೀವಿಗಳು ಬಾಯಾರಿ ಬಳಲುವಂತಾಗುತ್ತಿರುವುದು ಘನಘೋರ ದುರಂತವಾಗಿದ್ದು ಅಂತಹ ಮೂಕ ಪ್ರಾಣಿಗಳು ಕಂಡರೆ ಅವುಗಳಿಗೆ ಸಹಾಯ ಮಾಡುವ ಮಾನವೀಯತೆ ತೋರುವುದರ ಜತೆಜತೆಗೆ ಅಂತಹ ಪರಿಸ್ಥಿತಿಯೇ ಎದುರಾಗದಂತೆ ಪುನಃ ಎಲ್ಲವನ್ನೂ ಸರಿಪಡಿಸುವ ಜವಾಬ್ದಾರಿಯನ್ನೂ ನಾವು ಮೆರೆಯಬೇಕಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್; ನಂದಿಗಿರಿಧಾಮದಲ್ಲಿ ಆಹಾರವಿಲ್ಲದೆ ಪ್ರಾಣಿ-ಪಕ್ಷಿಗಳ ಪರದಾಟ
ಲಾಕ್ಡೌನ್ ಸಮಯದಲ್ಲಿ ಪ್ರಾಣಿಗಳಿಗೆ ಉಣಬಡಿಸಲು ಮುಂದಾದ ಜೈನ್ ಅನಿಮಲ್ ಕೇರ್ ಹಾಗೂ ಎಸ್ಡಿವೈಜೆಎಮ್ ಸಂಸ್ಥೆ