ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ನಿರಂತರವಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಾ ಬರುತ್ತಲೇ ಇದ್ದಾನೆ. ತನ್ನ ಸ್ವಾರ್ಥಕ್ಕಾಗಿ ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಿದ್ದ ಮರಗಳನ್ನು ಸಹ ನಾಶ ಮಾಡುತ್ತಿದ್ದಾನೆ. ಮನುಷ್ಯನ ಅಟ್ಟಹಾಸಕ್ಕೆ ಅದೆಷ್ಟೋ ಪಕ್ಷಿಗಳು ತಮ್ಮ ಆವಾಸಸ್ಥಾನವನ್ನೇ ಕಳೆದುಕೊಂಡಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪಾಪಿಗಳು ದೈತ್ಯ ಅರಳಿ ಮರದ ಕೊಂಬೆಗಳನ್ನು ಕಡಿದು ಕಾಕುವ ಮೂಲಕ ಪಕ್ಷಿಗಳ ಆವಾಸಸ್ಥಾನವನ್ನು ನಾಶ ಮಾಡಿದ್ದಾರೆ. ಇದೀಗ ಈ ಪಕ್ಷಿಗಳು ತಮ್ಮ ಬೆಚ್ಚಗಿನ ಆಶ್ರಯವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಈ ಕುರಿತ ಕರುಳು ಹಿಂಡುವ ದೃಶ್ಯವೊಂದು ಇದೀಗ ವೈರಲ್ ಆಗಿದೆ.
ಈ ಘಟನೆ ಆಗಸ್ಟ್ ತಿಂಗಳ ಕೊನೆಯಲ್ಲಿ ನಮ್ಮ ಮೈಸೂರಿನ ಟಿ. ನರಸೀಪುರ ತಾಲೂಕಿನಲ್ಲಿ ನಡೆದಿದ್ದು, ಹಕ್ಕಿಗಳು ಹಿಕ್ಕೆ ಹಾಕುತ್ತವೆ ಎಂಬ ಕಾರಣಕ್ಕೆ ಇಲ್ಲಿನ ಸರ್ಕಾರಿ ಶಾಲೆಯೊಂದರ ಬಳಿ ಇದ್ದ ದೈತ್ಯ ಅರಳಿ ಮರದ ಕೊಂಬೆಗಳನ್ನು ಕಡಿದು ಹಾಕಿದ್ದಾರೆ. ಕೊಂಬೆಗಳನ್ನು ಕಡಿದ ಪರಿಣಾಮ ಪಕ್ಷಿಗಳು ತಮ್ಮ ಆವಾಸಸ್ಥಾನವನ್ನು ಕಳೆದುಕೊಂಡು ಬೀದಿಗೆ ಬಂದಿವೆ.
fitness_farming_nature ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಅರಳಿ ಮರದ ಕೊಂಬೆಗಳನ್ನು ಕಡಿದು ಹಾಕಿರುವ ದೃಶ್ಯವನ್ನು ಕಾಣಬಹುದು. ಅದೇ ಕಡಿದು ಬಿದ್ದ ಕೊಂಬೆಯ ಪಕ್ಕದಲ್ಲಿ ಬೆಳ್ಳಕ್ಕಿಗಳು ತಮ್ಮ ಗೂಡುಗಳನ್ನು ಹುಡುಕಾಡುವ ದೃಶ್ಯವನ್ನು ನೋಡಿದ್ರೆ ನಿಜಕ್ಕೂ ದೃಶ್ಯವನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತೆ.
ಇದನ್ನೂ ಓದಿ: ಅಮೆರಿಕದಲ್ಲೂ ಮಂಗಳೂರಿನ ಯಕ್ಷಗಾನದ ರಂಗು, ವೈರಲ್ ಆಯ್ತು ವಿಡಿಯೋ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆದಷ್ಟು ಬೇಗ ಈ ಪಾಪಿ ಮಾನವರು ನಾಶವಾಗಲಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮನುಷ್ಯನಿಗಿಂತ ಅಪಾಯಕಾರಿಯಾಗಿರುವ ಕ್ರೂರ ಪ್ರಾಣಿ ಈ ಭೂಮಿಯ ಮೇಲೆ ಮತ್ತೊಂದಿಲ್ಲʼ ಎಂದು ಹೇಳಿದ್ದಾರೆ.
ವೈರಲ್ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ