Viral Video : ಭಾತೀಯರಾದ ನಮಗೆ ರಸ್ತೆಬದಿಯ ತಿಂಡಿ ತಿನಿಸುಗಳ ಹುಚ್ಚು ಮುಗಿಯದ್ದು. ಒಂದೊಂದು ಹಳ್ಳಿ ಊರುಗಳಲ್ಲಿಯೂ ಅಷ್ಟೇ ವೈವಿಧ್ಯಮಯ ಅಷ್ಟೇ ಭಿನ್ನ ಭಿನ್ನ ರುಚಿ ತಿಂಡಿ ತಿನಿಸುಗಳು. ಸಂಜೆಯಾಗುತ್ತಲೇ ಕಿಕ್ಕಿರಿದು ತುಂಬುವ ಈ ಫುಡ್ ಸ್ಟ್ರೀಟ್ಗಳನ್ನು ನೋಡುವುದೇ ಚೆಂದ. ಅಲ್ಲಿಯ ಭಾಷೆ, ಅಲ್ಲಿಯ ವ್ಯವಹಾರ ಸಂಸ್ಕೃತಿ, ಪರಿಮಳ, ಮಾರುವವರ ಉತ್ಸಾಹ, ತಿನ್ನುವವರ ಆತುರ! ಹೀಗೆ… ಆದರೆ ಅಷ್ಟು ವೇಗದಲ್ಲಿ ರುಚಿಕಟ್ಟಾದ ತಿನಿಸುಗಳನ್ನು ತಯಾರಿಸುವುದು ಒಂದು ಕಲೆ ಮತ್ತು ಕೌಶಲ. ನಿತ್ಯವೂ ಇಷ್ಟೇ ವೇಗದಲ್ಲಿ, ಬಿಸಿಬಿಸಿ ಕಡಾಯಿಯ ಮುಂದೆ ನಿಂತುಕೊಂಡೇ, ಎದುರಿಗೆ ಗ್ರಾಹಕರೊಂದಿಗೆ ವ್ಯವಹರಿಸುತ್ತಲೇ, ರುಚಿ ವ್ಯತ್ಯಾಸವಾಗದಂತೆ ತಯಾರಿಸುವ ಕೆಲಸ ಇದೆಯಲ್ಲ, ಸವಾಲಿನದು. ಅದಕ್ಕೆ ಬೇಕಾಗುವ ಪರಿಕರಗಳನ್ನೆಲ್ಲ ನಿತ್ಯವೂ ಹೊಂದಿಸಿಕೊಳ್ಳುವ ಪರಿಶ್ರಮ ಮುಗಿಯದ್ದು. ನಾಸಿಕ್ನಲ್ಲಿ ಮಹಿಳೆಯೊಬ್ಬಳು ಕುದಿಯುತ್ತಿರುವ ಎಣ್ಣೆಯಲ್ಲಿ ಬರಿಗೈಯಿಂದ ವಡಾ ಪಾವ್ ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದ್ದನ್ನು ಈಗಾಗಲೇ ನೀವು ನೋಡಿರಬಹುದು.
ಈಕೆ ಮೊದಲು ಪಾವ್ನ ಹೊಟ್ಟೆ ಸೀಳುತ್ತಾಳೆ. ಅದರೊಳಗೆ ಚೀಸ್ ಸ್ಲೈಸ್ ಇಟ್ಟು ಆಲೂಮಸಾಲಾ ತುಂಬುತ್ತಾಳೆ. ನಂತರ ಅದನ್ನು ಕಡಲೆಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯುತ್ತಾಳೆ. ಬೆಂದ ನಂತರ ಕುದಿಯುವ ಎಣ್ಣೆಯೊಳಗೆ ಕೈಹಾಕಿ ಚೀಸಿ ವಡಾ ಪಾವ್ ಹೊರತೆಗೆದು ತಟ್ಟೆಯಲ್ಲಿ ಹಾಕುತ್ತಾಳೆ.
ಈ ವಿಡಿಯೋ ಅನ್ನು ಈತನಕ 41 ಲಕ್ಷಕ್ಕಿಂತೂ ಹೆಚ್ಚು ಜನ ವೀಕ್ಷಿಸಿದ್ದಾರೆ. 1,60,700 ಜನರು ಮೆಚ್ಚಿದ್ದಾರೆ. ಸಾವಿರಾರು ಜನರು ತಮಗನ್ನಿಸಿದ್ದನ್ನು ಕಮೆಂಟ್ ಮಾಡಿದ್ದಾರೆ.
‘ಯಾಕೆ ಇಷ್ಟೊಂದು ಆತುರ? ಚಮಚದ ಬದಲಾಗಿ ಬಿಸೀ ಎಣ್ಣೆಯಲ್ಲಿ ಕೈ ಅದ್ದಿ ತಗೆಯುವಂಥ ಅವಸರ ಏನಿದೆ?’
‘ಮೇಡಮ್, ಗ್ಲೌಸ್ ಹಾಕಿಕೊಳ್ಳಿ. ಶುಚಿತ್ವ ಕೂಡ ಬಹಳ ಮುಖ್ಯ’
‘ಈ ಮಹಿಳೆ ಹೀಗೆ ಬಿಸಿ ಎಣ್ಣೆಯಲ್ಲಿ ಕೈ ಹಾಕಿ ವಡಾ ತೆಗೆಯುವುದನ್ನು ನೋಡಿ ನಾನಂತೂ ಇಂಪ್ರೆಸ್ ಆಗಿದ್ದೇನೆ’‘
‘ಯಾಕೆ ಈಕೆ ಹೀಗೆ ಕೈ ಅದ್ದುತ್ತಿರುವುದು?’
ನಿಮಗೇನಾದರೂ ಹೊಳೆಯುತ್ತಿದೆಯೇ? ಯಾಕೆ ಮತ್ತು ಹೇಗೆ ಈಕೆ ಬಿಸಿ ಎಣ್ಣೆಯಲ್ಲಿ ಕೈ ಅದ್ದುವುದೆಂದು? ಪವಾಡ ನಡೆಯುತ್ತಿದೆ ಎಂದು ಅನುಮಾನ ಬರುತ್ತಿದೆಯಾ? ಹೋಗಲಿ ವೈಜ್ಞಾನಿಕವಾಗಿ ಏನಾದರೂ ತಂತ್ರ ಇದೆಯಾ? ಏಕೆಂದರೆ ವಾಸ್ತವದಲ್ಲಿ ಒಂದು ಹನಿ ಎಣ್ಣೆ ಸಿಡಿದರೆ ಮಾರನೇ ದಿನ ಬೊಬ್ಬೆ ಬಂದಿರುತ್ತದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವಂಥದ್ದೇ.
ಹೌದು ಇದರ ಹಿಂದೆ ಒಂದು ತಂತ್ರ ಅಡಗಿದೆ. ಕೈಗೆ ಥಣ್ಣನೆಯ ಎಣ್ಣೆ ಮತ್ತು ನಿಂಬೆಹಣ್ಣಿನ ರಸ ಹಚ್ಚಿಕೊಂಡು ಹೀಗೆ ಕುದಿಯುವ ಎಣ್ಣೆಯಲ್ಲಿ ಕೈ ಅದ್ದಬಹುದು. ಬಹುಶಃ ಈಕೆ ಇದೇ ವೈಜ್ಞಾನಿಕ ತಂತ್ರವನ್ನು ಅನುಸರಿಸಿರಬಹುದು. ಏಕೆಂದರೆ, ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಕುದಿಯುವ ಎಣ್ಣೆಯ ಶಾಖವನ್ನು ಹೀರಿಕೊಳ್ಳುತ್ತದೆ. ಆಗ ಕೈಗೆ ಶಾಖ ತಾಕದು.
ಹುಕಿ ಬಂದು ಪ್ರಯತ್ನಿಸಬೇಕು ಎನ್ನಿಸುತ್ತಿದೆಯೇ? ಹುಷಾರು. ಇದೆಲ್ಲ ಅಪಾಯಕಾರಿ. ಪರಿಣತರ ಮಾರ್ಗದರ್ಶನವಿಲ್ಲದೆ ಇಂಥ ಪ್ರಯೋಗಗಳಿಗೆ ಕೈಹಾಕಬಾರದು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:05 pm, Fri, 9 September 22