ಪ್ರವಾಸಿ ತಾಣಗಳು ಬಿಡಿ, ಪ್ರವಾಸಿ ತಾಣಗಳಿಗೆ ಹೋಗುವಂತಹ ರಸ್ತೆಗಳಲ್ಲಿಯೂ ಪ್ರವಾಸಿಗರು ಕಸಗಳನ್ನು ಎಸೆದು ಹೋಗ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಬೇಕಾಬಿಟ್ಟಿಯಾಗಿ ಕಸಗಳನ್ನು ಎಸೆದು ಹೋಗುವುದು ತಪ್ಪು ಅಂತ ಗೊತ್ತಿದ್ರೂ ಕೂಡಾ ಕೆಲವೊಬ್ರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ನೀರಿನ ಬಾಟಲಿ ಇರಲಿ ಅಥವಾ ತಾವು ತಿಂದಂತಹ ತಿಂಡಿ ಪ್ಯಾಕೆಟ್ಗಳಿರಲಿ, ಈ ಎಲ್ಲಾ ಕಸವನ್ನು ಕಸದ ತೊಟ್ಟಿಗೆ ಎಸೆಯದೆ, ಅಲ್ಲಲ್ಲಿಯೇ ರಸ್ತೆಗಳಲ್ಲಿ ಈ ಕಸಗಳನ್ನು ಎಸೆದು ಹೋಗ್ತಾರೆ. ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಕೊಡಗಿಗೆ ಬಂದಂತಹ ಮಹಾರಾಷ್ಟ್ರದ ಪ್ರವಾಸಿಗರು ರಸ್ತೆಯಲ್ಲಿಯೇ ಕಾರಲ್ಲಿ ಇದ್ದಂತಹ ತಿಂಡಿ ಪ್ಯಾಕೆಟ್ಗಳು ಕಸವನ್ನು ಎಸೆದು ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ಇವರಿಗೆ ತಕ್ಕ ಪಾಠ ಕಲಿಸ್ಬೇಕು ಅಂತಾ, ಆ ಪ್ರವಾಸಿಗರನ್ನು 4 ಕಿ.ಮೀ ವರೆಗೂ ಬೈಕ್ ಅಲ್ಲಿ ಹಿಂಬಾಲಿಸುತ್ತಾ ಹೋಗಿ, ಎಸೆದಂತಹ ಕಸವನ್ನು ಅವರ ಕೈಯಿಂದಲೇ ಹೆಚ್ಚಿಸಿ, ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ ಇನ್ನು ಮುಂದೆ ರಸ್ತೆ ಬದಿಗಳಲ್ಲಿ ಬೇಕಾಬಿಟ್ಟಿ ಕಸಗಳನ್ನು ಎಸೆಯಬಾರದು ಎಂದು ನೀತಿ ಪಾಠವನ್ನು ಹೇಳಿದ್ದಾನೆ. ಈ ಘಟನೆಯ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
@kodaguConnect ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಕೊಡಗಿಗೆ ಬಂದಂತಹ ಪ್ರವಾಸಿಗರು ಎಸೆದಂತಹ ಕಸವನ್ನು ಅವರ ಕೈಯಲ್ಲಿಯೇ ಹೆಕ್ಕಿಸಿದ ಸ್ಥಳೀಯ ಯುವಕ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಕೊಡಗಿನ ಯುವಕನೊಬ್ಬ ರಸ್ತೆಗಳಲ್ಲಿ ಕಸ ಎಸೆದಂತಹ ಪ್ರವಾಸಿಗರಿಗೆ ತಕ್ಕ ಪಾಠವನ್ನು ಕಲಿಸಿರುವ ದೃಶ್ಯವನ್ನು ಕಾಣಬಹುದು.
Tourists visiting Kodagu made to take back the garbage they had dumped along the road.
Take only memories, leave only footprints! pic.twitter.com/b5XLADzTYh
— Kodagu Connect (@KodaguConnect) January 4, 2024
ವೈರಲ್ ವಿಡಿಯೋದಲ್ಲಿ ಕಸ ಎಸೆದಂತಹ ಪ್ರವಾಸಿಗರ ಕಾರನ್ನು ನಿಲ್ಲಿಸಿ ಕೊಡಗಿನ ಸ್ಥಳೀಯ ಯುವಕನೊಬ್ಬ, ನೀವು ರಸ್ತೆಯಲ್ಲಿ ಏತಕ್ಕಾಗಿ ಕಸ ಎಸೆದಿದ್ದೀರಾ? ಇಲ್ಲಿಗೆ ಬರೋ ಪ್ರವಾಸಿಗರು ಹೀಗೆ ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾ ಹೋದ್ರೆ ನಮ್ಮ ಊರಿನ ಸ್ಥಿತಿ ಏನಾಗ್ಬೇಡಾ? ಇಷ್ಟು ವಿದ್ಯಾವಂತರಾಗಿದ್ರೂ ಕೂಡಾ ರಸ್ತೆಗಳಲ್ಲಿ ಕಸ ಎಸೆಯಬಾರದು ಅನ್ನೋ ಸ್ವಲ್ಪ ಜ್ಞಾನವೂ ನಿಮಗಿಲ್ವಾ? ಅಂತ ಪ್ರಶ್ನೆ ಮಾಡ್ತಾನೆ. ನಂತರ ನಮ್ಮ ಕೊಡಗು ಪ್ರವಾಸಿ ತಾಣವೇ ಹೊರತು, ಕಸದ ತೊಟ್ಟಿಯಲ್ಲ, ರಸ್ತೆಯಲ್ಲಿ ಎಸೆದಂತಹ ಕಸವನ್ನು ನೀವೇ ಹೆಕ್ಕಬೇಕು ಎಂದು ಹೇಳಿ, ಕಸ ಹಾಕಿದ ಪ್ರವಾಸಿಗರಿಂದಲೇ ಕಸ ಹೆಕ್ಕಿಸುವ ಮೂಲಕ ಇನ್ನು ಮುಂದೆ ಎಲ್ಲಿಯೂ ಕೂಡಾ ಈ ರೀತಿ ರಸ್ತೆ ಬದಿಗಳಲ್ಲಿ ಕಸ ಎಸೆಯಬಾರದು ಎಂದು ತಕ್ಕ ಪಾಠವನ್ನು ಕಲಿಸಿದ್ದಾನೆ.
ಇದನ್ನೂ ಓದಿ: ನೆರಳಿನಲ್ಲಿ ಮೂಡಿದ ರಾಮ ಮಂದಿರ, ಈ ಕಲಾಕೃತಿಗೆ ಹಳೆಯ ಟಿವಿ ಬಳಕೆ
ಜನವರಿ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಯುವಕ ನಿಜವಾಗಿಯೂ ಒಳ್ಳೆ ಕೆಲಸವನ್ನು ಮಾಡಿದ್ದಾನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತದ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಬೇಜವಬ್ದಾರಿಯಿಂದ ಕಸ ಎಸೆಯುವವರಿಗೆ ಇದೇ ರೀತಿ ಪಾಠವನ್ನು ಕಲಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಹಲವು ಬಳಕೆದಾರರು ಈ ಯುವಕನ ನಡೆಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ