Trending : ‘ಶತಮಾನದ ಬಹುಪತ್ನಿತ್ವವಾದಿ’ ಎಂದು ಕರೆಯಿಸಿಕೊಳ್ಳುವ ಈತ ಸೌದಿ ಅರೇಬಿಯಾ ನಿವಾಸಿ. ಅಬು ಅಬ್ದುಲ್ಲಾ ಎನ್ನುವ ಈತನ ವಯಸ್ಸು 63. ಈತನಕ 43 ವರ್ಷಗಳಲ್ಲಿ 53 ಮದುವೆಯಾಗಿದ್ದಾನೆ. ‘ನಾನು ವೈಯಕ್ತಿಕ ಸುಖಕ್ಕಾಗಿ ಇಷ್ಟೊಂದು ಮದುವೆಯಾಗಿಲ್ಲ. ನನಗೆ ಭಾವನಾತ್ಮಕ ಸ್ಥಿರತೆ ಮತ್ತು ಸಂತೋಷ ಬೇಕಿತ್ತು ಹಾಗಾಗಿ ಒಂದಾದ ಮೇಲೊಂದು ಮದುವೆಯಾದೆ. ಇತ್ತೀಚೆಗಷ್ಟೇ ಆದ ಮದುವೆಯೇ ಕೊನೆ, ನನಗಿನ್ನು ಶಾಂತಿ ಬೇಕು’ ಎಂದಿದ್ದಾನೆ. 20 ವರ್ಷದವನಿದ್ದಾಗ ತನಗಿಂತ 6 ವರ್ಷ ದೊಡ್ಡವಳೊಂದಿಗೆ ಮೊದಲ ಮದುವೆಯಾದ. ಮಗುವಾದ ನಂತರ ಸಹಜವಾಗಿ ಸಮಸ್ಯೆಗಳು ಶುರುವಾದವು. ಆಗ 23ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಯಾದ. ಆದರೆ ಮೊದಲ ಮತ್ತು ಎರಡನೇ ಹೆಂಡತಿ ಮಧ್ಯೆ ಜಗಳ ಶುರುವಾಗುವುದು ಇನ್ನೂ ಸಹಜ ಅಲ್ಲವೆ? ಹತಾಶನಾಗದೆ ಮೂರನೇ ಮದುವೆಯಾದ. ಮುಂದೇನಾಗಿರುತ್ತದೆ ಎನ್ನುವುದನ್ನು ಮತ್ತೆ ವಿವರಿಸುವುದು ಬೇಡ. ಆದರೆ ಈತ ಮೊದಲ ಹೆಂಡತಿಯರಿಬ್ಬರಿಗೂ ವಿಚ್ಛೇದನ ನೀಡಿ ನಾಲ್ಕನೇ ಮದುವೆಯಾದ; ಮದುವೆಯಾಗುತ್ತಲೇ ಹೋದ!
ಹೀಗೆ ಒಂದೊಂದೇ ಮದುವೆಯಾಗುತ್ತಿದ್ದಂತೆ ಸಮಸ್ಯೆಗಳು ಹೆಚ್ಚುತ್ತ ಸಂಬಂಧಗಳು ಬಿಗಡಾಯಿಸತೊಡಗಿದವು. ಇವನು ಮದುವೆಯಾದ ಮಹಿಳೆಯರೆಲ್ಲರ ಮೂಲಕ ಸಂತೋಷ, ನೆಮ್ಮದಿ ಹುಡುಕಲು ಪ್ರಯತ್ನಿಸುತ್ತಿದ್ದುದೇ ಪ್ರತೀ ಮದುವೆಗಳು ಮುರಿದು ಬೀಳಲು ಕಾರಣ. ಒಂದು ಮದುವೆಯಂತೂ ಮದುವೆಯಾದ ಮೊದಲ ರಾತ್ರಿಯೇ ವಿಫಲಗೊಂಡಿತು.
ಈತನಕ ಇವನೊಂದಿಗೆ ಮದುವೆಯಾದ ಮಹಿಳೆಯರೆಲ್ಲರೂ ಸೌದಿ ಅರೇಬಿಯಾ ಮೂಲದವರೇ. ಒಬ್ಬ ಹೆಂಡತಿ ಮಾತ್ರ ವಿದೇಶದವಳು. ಕೆಲಸದ ನಿಮಿತ್ತ ಸೌದಿಗೆ ಬಂದ ಈ ಮಹಿಳೆ, ಯಾವುದೋ ಅಪಾಯದ ಪರಿಸ್ಥಿತಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈತನೊಂದಿಗೆ ಮದುವೆಯಾಗಿದ್ದಾಳೆ. ‘ಹೌದು, ನನ್ನನ್ನು ರಕ್ಷಿಸಿಕೊಳ್ಳಲೆಂದೇ ಈತನೊಂದಿಗೆ ಮದುವೆಯಾಗಿದ್ದೇನೆ. ಮೂರರಿಂದ ನಾಲ್ಕು ತಿಂಗಳತನಕ ಮಾತ್ರ ಇವನೊಂದಿಗೆ ಇರುತ್ತೇನೆ’ ಎಂದಿದ್ದಾಳೆ.
ಪ್ರಪಂಚದಲ್ಲಿರುವ ಪುರುಷರು ಮಹಿಳೆಯರೆಲ್ಲರೂ ಮದುವೆಯ ಮೂಲಕ ಕೊನೆತನಕವೂ ಒಟ್ಟಿಗೆ ಬದುಕುವ ಕನಸು ಕಾಣುತ್ತಾರೆ, ಇಚ್ಛಿಸುತ್ತಾರೆ, ಹಾಗೆ ಇರಲು ಪ್ರಯತ್ನಿಸುತ್ತಾರೆ. ಕ್ರಮೇಣ ಏನೆಲ್ಲಾ ಆಗುತ್ತದೆ ಎನ್ನುವುದು ಇದನ್ನು ಓದುತ್ತಿರುವ ನಿಮಗೂ ಗೊತ್ತಿದೆ.
ಆದರೆ ಈ ಮಹಾಪುರುಷನಿಗೆ?!
ಮತ್ತಷ್ಟು ಟ್ರೆಂಡಿಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:01 pm, Fri, 16 September 22