Viral News: ನಿಜ ಜೀವನದ ಭಜರಂಗಿ ಭಾಯ್​ಜಾನ್; ಕಿವಿ ಕೇಳದ, ಮಾತು ಬಾರದ ಬಾಲಕ ವಾಪಾಸ್ ಮನೆ ಸೇರಿದ್ದೇ ಅಚ್ಚರಿಯ ಕತೆ

| Updated By: ಸುಷ್ಮಾ ಚಕ್ರೆ

Updated on: Aug 09, 2021 | 8:53 PM

ಜೋಧ್​ಪುರದಲ್ಲಿ ಸಿಕ್ಕ 14 ವರ್ಷದ ಮಾತು ಬಾರದ, ಕಿವಿ ಕೇಳದ ಬಾಲಕ ಒಂದು ವರ್ಷದ ಬಳಿಕ ಪಂಜಾಬ್​ನ ತಾರ್ನ್ ತರನ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ಸೇರಿದ್ದಾನೆ. ಆದರೆ, ಮಗನದೇ ಯೋಚನೆಯಲ್ಲಿ ಅಷ್ಟರಲ್ಲಾಗಲೇ ಆ ಬಾಲಕನ ತಂದೆ ಸಾವನ್ನಪ್ಪಿದ್ದರು.

Viral News: ನಿಜ ಜೀವನದ ಭಜರಂಗಿ ಭಾಯ್​ಜಾನ್; ಕಿವಿ ಕೇಳದ, ಮಾತು ಬಾರದ ಬಾಲಕ ವಾಪಾಸ್ ಮನೆ ಸೇರಿದ್ದೇ ಅಚ್ಚರಿಯ ಕತೆ
ಸಾಂದರ್ಭಿಕ ಚಿತ್ರ
Follow us on

ಜೈಪುರ: ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ಗೆ ಹೊಸ ಇಮೇಜ್ ತಂದುಕೊಟ್ಟ ಸೂಪರ್ ಹಿಟ್ ಸಿನಿಮಾ ಭಜರಂಗಿ ಭಾಯ್​ಜಾನ್ ನೋಡದೇ ಇದ್ದವರೇ ಕಡಿಮೆ ಎನ್ನಬಹುದು. ಮಾತು ಬಾರದ ಪಾಕಿಸ್ತಾನದ ಬಾಲಕಿಯೊಬ್ಬಳು ತನ್ನ ತಾಯಿಯಿಂದ ತಪ್ಪಿಸಿಕೊಂಡು ಅಚಾನಕ್ಕಾಗಿ ಭಜರಂಗಿ ಎಂದೇ ಪ್ರಸಿದ್ಧನಾಗಿದ್ದ ಹೀರೋಗೆ ಸಿಗುವ ಕತೆಯಿದು. ಆತ ಹೇಗೆಲ್ಲ ಸರ್ಕಸ್ ಮಾಡಿ ಆ ಬಾಲಕಿಯನ್ನು ನಮ್ಮ ಶತ್ರುದೇಶವಾದ ಪಾಕಿಸ್ತಾನದ ಗಡಿ ದಾಟಿ ಮನೆಗೆ ತಲುಪಿಸುತ್ತಾನೆ ಎಂಬ ಕುತೂಹಲಕಾರಿ ಕತೆ ಈ ಸಿನಿಮಾದ್ದು. ಅದೇ ರೀತಿಯ ನಿಜವಾದ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

ಜೋಧ್​ಪುರದಲ್ಲಿ ಸಿಕ್ಕ 14 ವರ್ಷದ ಮಾತು ಬಾರದ, ಕಿವಿ ಕೇಳದ ಬಾಲಕನನ್ನು ಪಂಜಾಬ್​ನ ತಾರ್ನ್ ತರನ್ ಜಿಲ್ಲೆಯಲ್ಲಿರುವ ಆತನ ಮನೆಗೆ ಚೈಲ್ಡ್​ಕೇರ್ ಸಂಸ್ಥೆಯವರು ತಲುಪಿಸಿದ್ದಾರೆ. 2020ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ತನ್ನ ತಾಯಿಯನ್ನು ಸೇರಿದ್ದಾನೆ. ಮೂಗ, ಕಿವುಡನಾಗಿದ್ದರೂ ಬಹಳ ಆ್ಯಕ್ಟಿವ್ ಆಗಿದ್ದ ಆ ಬಾಲಕ ಮನೆಯಿಂದ ತಪ್ಪಿಸಿಕೊಂಡ ಬಳಿಕ ಜೋಧ್​ಪುರದ ರೈಲ್ವೆ ಸ್ಟೇಷನ್​ನಲ್ಲಿ ಸಿಕ್ಕಿದ್ದ. ಆತನನ್ನು ಜೋಧ್​ಪುರದ ಚೈಲ್ಡ್​ಕೇರ್ ಇನ್​ಸ್ಟಿಟ್ಯೂಟ್​ನಲ್ಲಿ ಇರಿಸಿಕೊಳ್ಳಲಾಗಿತ್ತು. ಅದೊಂದು ದಿನ ರಾಜಸ್ಥಾನದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಸಂಗೀತಾ ಬೆನಿವಾಲ್ ಆ ಇನ್​ಸ್ಟಿಟ್ಯೂಟ್​ಗೆ ಹೋಗಿದ್ದಾಗ ಆ ಬಾಲಕ ಸಿಂಗ್​ಗಳು ತಲೆಗೆ ಸುತ್ತಿಕೊಳ್ಳುವ ತರ್ಬಾನ್​ ನೋಡಿ ಬಹಳ ಖುಷಿಯಾದ. ಆತನಿಂದ ಅವನ ಮನೆಯ ಬಗ್ಗೆ ಮಾಹಿತಿ ಸಿಗಬಹುದು ಎಂದು ಕೆಲವೊಂದು ಫೋಟೋಗಳನ್ನು ಆತನಿಗೆ ತೋರಿಸಲಾಯಿತು. ಸಿಖ್ಖರು ಹೆಚ್ಚಾಗಿರುವ ಪ್ರದೇಶದ ಫೋಟೋಗಳನ್ನು ತೋರಿಸಿದಾಗ ಆ ಬಾಲಕ ಗೋಲ್ಡನ್ ಟೆಂಪಲ್ ಫೋಟೋ ನೋಡಿ ಖುಷಿ ಪಟ್ಟ. ಅದರಿಂದ ಆ ಬಾಲಕ ಪಂಜಾಬ್​ನವನಿರಬಹುದು ಎಂದು ನಾವು ಅಂದಾಜಿಸಿದೆವು. ನಂತರ ಆತನಿಗೆ ಪಂಜಾಬಿ ಜಾನಪದ ಡ್ರೆಸ್ ಅನ್ನು ತೋರಿಸಲಾಯಿತು. ಅದನ್ನು ನೋಡಿದ ಮೇಲೆ ಆತನ ಖುಷಿ ಹೆಚ್ಚಾಯಿತು ಎಂದು ಸಂಗೀತಾ ಮಾಹಿತಿ ನೀಡಿದ್ದಾರೆ.

ಬಳಿಕ ನಮ್ಮ ತಂಡದವರು ಆ ಬಾಲಕನನ್ನು ಪಂಜಾಬ್​ಗೆ ಕರೆದುಕೊಂಡು ಹೋಗಲು ನಿರ್ಧರಿಸಿದರು. ಆತನನ್ನು ಅಮೃತಸರಕ್ಕೆ ಕರೆದುಕೊಂಡು ಹೋದಾಗ ಆತ ತಾನು ಇಲ್ಲಿ ಬಂದಿದ್ದಾಗಿ ನೆನಪಿಸಿಕೊಂಡ. ಹಿಂದಿಯಲ್ಲಿ ಬರೆದು ತೋರಿಸಿದ ಆ ಬಾಲಕ ತನ್ನನ್ನು ತಾರ್ನ್ ತರನ್ ಬಸ್ ಸ್ಟಾಪ್​ಗೆ ಕರೆದುಕೊಂಡು ಹೋಗುವಂತೆ ಅವರಲ್ಲಿ ಮನವಿ ಮಾಡಿದ. ಬಸ್​ ಸ್ಟಾಪ್​ಗೆ ಹೋದಾಗ ಬಸ್​ ಚಾಲಕ ಆ ಬಾಲಕನನ್ನು ಗುರುತಿಸಿ ಮಾತನಾಡಿಸಿದರು. ಆ ಬಸ್​ ಕೂಡ ಆ ಬಾಲಕನ ಊರಿಗೇ ಹೋಗುತ್ತದೆ ಎಂದು ಅವರು ತಿಳಿಸಿದರು. ಆ ಬಾಲಕನನ್ನು ಊರಿಗೆ ಕರೆದುಕೊಂಡು ಹೋದಾಗ ಅಲ್ಲಿದ್ದ ಎಲ್ಲರೂ ಆತನನ್ನು ಗುರುತಿಸಿದರು. ನಂತರ ಆತನನ್ನು ಆತನ ಮನೆಗೆ ಸೇರಿಸಲಾಯಿತು. ಒಂದು ವರ್ಷದ ಹಿಂದೆ ಕಳೆದುಹೋಗಿದ್ದ ಮಗ ಇದ್ದಕ್ಕಿದ್ದಂತೆ ಮನೆಗೆ ವಾಪಾಸ್ ಬಂದಿದ್ದನ್ನು ನೋಡಿ ಅವನ ತಾಯಿ ಜೋರಾಗಿ ಅಳುತ್ತಾ ಮಗನನ್ನು ತಬ್ಬಿಕೊಂಡರು.

ಆ ಊರಿನಿಂದ 2020ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಬಾಲಕನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಮಾತು ಬಾರದ, ಕಿವಿ ಕೇಳದ ಮಗ ಎಲ್ಲಿದ್ದಾನೋ, ಬದುಕಿದ್ದಾನೋ ಇಲ್ಲವೋ ಎಂಬ ಕೊರಗಿನಲ್ಲಿಯೇ ಹಾಸಿಗೆ ಹಿಡಿದ ಆ ಬಾಲಕನ ತಂದೆ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದರು.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!