ಇಡೀ ಜಗತ್ತೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಲಸಿಕೆಯೊಂದೇ ಕೊವಿಡ್ ನಿಯಂತ್ರಣಕ್ಕಿರುವ ಮದ್ದು. ಹಾಗಾಗಿ ಕೊವಿಡ್ ಲಸಿಕೆಯನ್ನು ಪಡೆಯಲು ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಏತನ್ಮಧ್ಯೆ, ಯುವತಿಯೋರ್ವಳು ತನ್ನ ವರ ಹೇಗಿರಬೇಕು ಎಂಬುದರ ಕುರಿತಾಗಿ ಮೆಟ್ರೊಮೋನಿಯಲ್ಲಿ ವಿವರಿಸಿದ ಜಾಹಿರಾತೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿತ್ತು. ಇದೀಗ ಈ ಜಾಹಿರಾತಿನ ಹಿಂದಿನ ಸತ್ಯವೇನು ಎಂಬುದು ಬಯಲಾಗಿದೆ.
ಯುವತಿಯು ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾಳೆ. ಹಾಗೂ ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡ ವರನನ್ನೇ ಹುಡುಕುತ್ತಿದ್ದಾಳೆ ಎಂದು ಮೆಟ್ರೊಮೋನಿ ಜಾಹಿರಾತು ಹೇಳುತ್ತಿದೆ. ಈ ಜಾಹಿರಾತನ್ನು ಜೂನ್ 4ರಂದು ಪತ್ರಿಕೆಯಲ್ಲಿ ಪ್ರಕಟ ಮಾಡಲಾಗಿತ್ತು. ಜಾಹಿರಾತಿನ ಪ್ರಕಾರ 24 ವರ್ಷದ ರೊಮನ್ ಕ್ಯಾಥೋಲಿಕ್ ಪಂಥದ ಯುವತಿ ಎಮ್ಎಸ್ಸಿ ಗಣಿತ ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಸ್ವಯಂ ಉದ್ಯೋಗದಲ್ಲಿದ್ದಾಳೆ. ಜತೆಗೆ ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಪಡೆದಿದ್ದಾಳೆ. ಯುವತಿಗೆ ಬೇಕಾದ ವರ, ರೋಮನ್ ಕ್ಯಾಥೋಲಿಕ್ ಪಂಥದವನಾಗಿರಬೇಕು. ಜತೆಗೆ ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಪಡೆದಿರಲೇ ಬೇಕು ಎಂಬುದಾಗಿ ಬೇಡಿಕೆ ಇಟ್ಟಿದ್ದಾಳೆ ಎಂಬುದು ಜಾಹಿರಾತಿನಲ್ಲಿ ಪ್ರಕಟಗೊಂಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಬಾರೀ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಗಮನಕ್ಕೂ ಬಂದಿದೆ.
‘ಲಸಿಕೆ ಹಾಕಿಸಿಕೊಂಡ ವಧು, ಲಸಿಕೆ ಪಡೆದಿರುವ ವರನನ್ನೇ ಹುಡುಕುತ್ತಿದ್ದಾಳೆ. ಬಹುಷಃ ಅವರ ಮದುವೆಗೆ ಬೂಸ್ಟರ್ ಡೋಸ್ ಕೊಡುವುದು ಒಳ್ಳೆಯ ಗಿಫ್ಟ್ ಆಗಬಹುದು. ಇದೇ ಮುಂದೆ ಸಾಮಾನ್ಯವಾಗುತ್ತಾ? ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
Vaccinated bride seeks vaccinated groom! No doubt the preferred marriage gift will be a booster shot!? Is this going to be our New Normal? pic.twitter.com/AJXFaSAbYs
— Shashi Tharoor (@ShashiTharoor) June 8, 2021
ಇದೀಗ ಜಾಹಿರಾತು ನಕಲಿ ಎಂದು ತಿಳಿದು ಬಂದಿದೆ. ಗೋವಾದ ಔಷಧ ವ್ಯಾಪಾರಿ ಸವಿಯೊ ಫಿಗುರೆಡೊ ಎಂಬಾತ ಈ ಜಾಹಿರಾನ್ನು ಸೃಷ್ಟಿಸಿದ್ದಾನೆ. ಇದು ಲಸಿಕೆ ಪಡೆಯಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶವಾಗಿತ್ತು ಎಂಬುದು ಇದೀಗ ವರದಿಯಾಗಿದೆ.
ಮೂತಃ ಗೋವಾದ ನಿವಾಸಿ ಸವಿಯೊ, ಕಳೆದ ವಾರ ಫೇಸ್ಬುಕ್ನಲ್ಲಿ ‘ದಿ ಫ್ಯೂಚರ್ ಆಫ್ ಮ್ಯಾಟ್ರಿಮೋನಿಯಲ್’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಜನರನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ನಾನು ಜಾಹಿರಾತನ್ನು ರಚಿಸಿ ನನ್ನ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದೇನೆ. ಯಾರೋ ಅದನ್ನು ನಿಜವೆಂದು ಭಾವಿಸಿದ್ದಾರೆ. ಇದೀಗ ವಿಷಯ ವೈರಲ್ ಆಗಿದೆ ಎಂದು ಸವಿಯೊ ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನನ್ನ ಪೋಸ್ಟ್ನಲ್ಲಿ ಮೊಬೈಲ್ನಂಬರ್ ಇದ್ದರಿಂದ ಬೇರೆ ಬೇರೆ ಕಡೆಗಳಿಂದ ದೂರವಾಣಿ ಕರೆಗಳು ಬರಲು ಪ್ರಾರಂಭವಾದವು. ಕೋಲ್ಕತ್ತಾ, ಒಡಿಶಾ ಹಾಗೂ ಮಂಗಳೂರಿನಿಂದ ಕರೆಗಳು ಬಂದಿವೆ. ಹೆಚ್ಚಿನ ಜನರು ವಿವಾಹದ ಕುರಿತಾಗಿ ಪ್ರಶ್ನೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತದೆ ಎಂಬುದನ್ನೂ ಊಹಿಸಿಯೂ ಇರಲಿಲ್ಲ. ನಾನು ಹಂಚಿಕೊಂಡ ಪೋಸ್ಟ್ ಕೇವಲ ನನ್ನ ಸ್ನೇಹಿತರಿಗಷ್ಟೇ ಕಾಣುವಂತಿದ್ದರೂ ಹೆಚ್ಚಿನ ಜನರಿಗೆ ತಲುಪಿದೆ. ಈ ಪೋಸ್ಟ್ ಯಾರಿಗೂ ಯಾವುದೇ ಹಾನಿಯುಂಟು ಮಾಡುವಂಥದ್ದಲ್ಲ. ಈ ಪೋಸ್ಟ್ನಿಂದ ಕೆಲವರಾದರೂ ಲಸಿಕೆ ಪಡೆಯಲು ಮುಂದೆ ಬರುತ್ತಾರೆ. ಖಂಡಿತವಾಗಿಯೂ ಲಸಿಕೆ ಪಡೆಯುತ್ತಾರೆ ಎಂದಾದರೆ ಈ ಪೋಸ್ಟ್ನಿಂದ ಆಗುವ ಅನಾನುಕೂತಲೆಯ ಕುರಿತಾಗಿ ನಾನು ಭಯಗೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂತಹ ಜಾಹಿರಾತನ್ನು ಏಕೆ ಸೃಷ್ಟಿಸಿದ್ದೀರಿ ಎಂಬ ಪ್ರಶ್ನೆ ಉತ್ತರಿಸಿದ ಅವರು, ಲಸಿಕೆಯನ್ನು ಪಡೆಯುವುದರಿಂದ ಜನರ ಜೀವ ಉಳಿಸಬಹುದು. ಜನರು ಪ್ರೇರೇಪಿತರಾಗುವಂತೆ ಮಾಡುವ ಉದ್ದೇಶದಿಂದ ಪೋಸ್ಟ್ ಹಂಚಿಕೊಂಡೆ. ‘ಕೊವಿಡ್ ಎರಡನೇ ಅಲೆಯಲ್ಲಿ ನನ್ನ ಆಪ್ತ ಸ್ನೇಹಿರನ್ನು ಕಳೆದುಕೊಂಡು ದುಃಖಿಸುತ್ತಿದ್ದೇನೆ. ನಾನು ಎಷ್ಟೇ ತಿಳಿ ಹೇಳಿದರೂ ಅವರು ಲಸಿಕೆ ಪಡೆಯಲು ಮುಂದಾಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಜಾಹಿರಾತು ನಕಲಿಯಾಗಿದ್ದರೂ ಹೆಚ್ಚಿನ ಯಶಸ್ವಿ ಕಂಡಿತು. ಅನೇಕರು ಇದರಿಂದ ಪ್ರೇರೇಪಿತರಾದರು. ನನ್ನ ಉದ್ದೇಶದಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:
‘ಕೊವಿಶೀಲ್ಡ್ ಎರಡೂ ಡೋಸ್ ಲಸಿಕೆ ಪಡೆದ ವರ ಬೇಕು..’: ಮ್ಯಾಟ್ರಿಮೋನಿಯಲ್ಲಿ ಯುವತಿಯ ಜಾಹೀರಾತು..
Published On - 12:41 pm, Wed, 9 June 21