ವಧು ಅಥವಾ ವರನಿಗೆ ತನ್ನ ಸಂಗಾತಿ ಹೀಗೆ ಇರಬೇಕು ಎಂಬ ಆಸೆ ಇರುವುದು ಸಹಜ. ಶಿಕ್ಷಣವಂತನಾಗಿರಬೇಕು.. ಒಳ್ಳೆಯ ಕೆಲಸದಲ್ಲಿರಬೇಕು.. ನೋಡಲು ಸುಂದರವಾಗಿರಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರಿಲ್ಲಿ ಯುವತಿಯೊಬ್ಬಳು ಒಂದು ವಿಚಿತ್ರ ಬೇಡಿಕೆಯನ್ನೂ ಇಟ್ಟಿದ್ದಾಳೆ. ತಾನು ಮದುವೆಯಾಗುವ ವರ ಎರಡೂ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದಿರಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಈ ಜಾಹೀರಾತೀಗ ಸಿಕ್ಕಾಪಟೆ ವೈರಲ್ ಆಗಿದೆ. ಇದು ಸ್ವಲ್ಪ ಅತಿರೇಕ ಎನ್ನಿಸಿದರೂ, ಸಮಯಕ್ಕೆ ಹೊಂದಿಕೊಳ್ಳಲೇಬೇಕಾದ ಪರಿಸ್ಥಿತಿಯಿದೆ.
ರೋಮನ್ ಕ್ಯಾಥೋಲಿಕ್ ಪಂಥದ 24 ವರ್ಷದ ಯುವತಿಯೊಬ್ಬಳು ಈ ಜಾಹೀರಾತು ನೀಡಿದ್ದಾಳೆ. ತನ್ನ ಸಂಪೂರ್ಣ ವಿವರದ ಜತೆಗೆ ವರ ಹೇಗಿರಬೇಕು ಎಂಬುದನ್ನು ಮ್ಯಾಟ್ರಿಮೋನಿಯಲ್ಲಿ(ವಧು-ವರ ವಿವಾಹ ವೇದಿಕೆ) ಹೇಳಿಕೊಂಡಿದ್ದಾಳೆ. ಅವಳು ಎಮ್ಎಸ್ಸಿ(ಗಣಿತಶಾಸ್ತ್ರ) ಪದವಿ ಪಡೆದಿದ್ದಾಳೆ. ಆಕೆ ಎರಡೂ ಡೋಸ್ ಕೊವಿಶೀಲ್ಡ್ ಕೊವಿಡ್ ವ್ಯಾಕ್ಸಿನ್ ಪಡೆದಿದ್ದಾಳೆ. ಜತೆಗೆ ತಾನು ಮದುವೆಯಾಗುವ ವರ ಹೇಗಿರಬೇಕು ಎಂಬುದನ್ನೂ ಹೇಳಿದ್ದಾಳೆ. ಆತ ರೋಮನ್ ಕ್ಯಾಥೋಲಿಕ್ ಪಂಥಕ್ಕೆ ಸೇರಿದವನಾಗಿದ್ದು, 28-30ವರ್ಷದವನಾಗಿರಬೇಕು. ಸ್ವತಂತ್ರವಾಗಿ ಜೀವನ ನಡೆಸುತ್ತಿರಬೇಕು. ತಾಳ್ಮೆಯಿರಬೇಕು..ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ಹೇಳಿದ್ದಾಳೆ. ಅದೆಲ್ಲದರ ಜತೆಗೆ, ಎರಡೂ ಡೋಸ್ ಕೊವಿಶೀಲ್ಡ್ ಲಸಿಕೆಯನ್ನೇ ಪಡೆದಿರಬೇಕು ಎಂದೂ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾಳೆ. ಈ ವಿಷಯ ಸ್ವಲ್ಪ ವಿಭಿನ್ನ ಎನಿಸಿದೆ.
ನಮ್ಮ ಅಜ್ಜ-ಅಜ್ಜಿಯರ ಕಾಲದಲ್ಲಿ ಹಿರಿಯರು ನೋಡಿದ ವಧು ಅಥವಾ ವರನನ್ನು ಕಣ್ಣುಚ್ಚಿಕೊಂಡುವ ವಿವಾಹವಾಗುವ ಸಂಪ್ರದಾಯವಿತ್ತು. ಹಿರಿಯ ಮಾತಿಗೆ ಎದುರು ಮಾತನಾಡದೇ ವಿವಾಹ ಮಂಟಪದಲ್ಲಿಯೇ ಮೊದಲ ಬಾರಿಗೆ ಮುಖ ಅನುಭವವನ್ನೂ ಮನೆಯಲ್ಲಿ ವಯಸ್ಕರು ಆಗಾಗ ಹೇಳುತ್ತಿರುತ್ತಾರೆ. ಆದರೆ ಕಾಲ ಬದಲಾಗುತ್ತಿದ್ದಂತೆ, ತಂತ್ರಜ್ಞಾನ ಮುಂದುವರೆಯುತ್ತಿದ್ದಂತೆಯೇ ಮಧು-ವರರು ಅವರು ಇಷ್ಟಪಟ್ಟ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಟ್ರೆಂಡ್ ಶುರುವಾಯಿತು. ಅದೊಂದೇ ಅಲ್ಲದೇ ತಮ್ಮ ಅರ್ಹತೆಗಳನ್ನು ಹವ್ಯಾಸಗಳನ್ನು ಮ್ಯಾಟ್ರಿಮೋನಿಯಂತಹ ವಧು-ವರರ ವಿವಾಹ ವೇದಿಕೆಯಲ್ಲಿ ನಮೂದಿಸುವ ಅವಕಾಶವೂ ನಮ್ಮ ಮುಂದಿದೆ. ಕಾಲ ತಕ್ಕಂತೆಯೇ ಎಲ್ಲವೂ ಬದಲಾಗುತ್ತಿದೆ. ಜತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೊವಿಶೀಲ್ಡ್ ಕೊವಿಡ್ ವ್ಯಾಕ್ಸಿನ್ ಪಡೆದ ಯುವಕನೇ ಬೇಕು ಎಂಬ ಬೇಡಿಕೆಯೂ ಸಹ ಕೇಳಿ ಬರುತ್ತಿರುವುದು ಆಶ್ಚರ್ಯದ ಜತೆಗೆ ಒಗ್ಗಿಕೊಳ್ಳಲೇ ಬೇಕಾದ ಪರಿಸ್ಥಿತಿಯನ್ನೂ ತೋರ್ಪಡಿಸುತ್ತಿದೆ.
ಭವಿಷ್ಯದಲ್ಲಿ ಇತರ ದೇಶಗಳಿಗೆ ಪ್ರವಾಸ ಕೈಗೊಳ್ಳುವ ಆಸೆಯಿರಬಹುದು
ನಮ್ಮ ದೇಶದಲ್ಲಿ ಸದ್ಯ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಆದರೆ ಕೊವ್ಯಾಕ್ಸಿನ್ಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆ ಸಿಕ್ಕಿಲ್ಲ. ಭಾರತ್ ಬಯೋಟೆಕ್ನ ಈ ಲಸಿಕೆಯನ್ನು ಇನ್ನೂ ಡಬ್ಲ್ಯೂಎಚ್ಒದ ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಿಲ್ಲ. ಹೀಗಾಗಿ ಕೊವಾಕ್ಸಿನ್ ಲಸಿಕೆ ಪಡೆದವರಿಗೆ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಅಷ್ಟು ಬೇಗ ಒಪ್ಪಿಗೆ ಸಿಗುವುದಿಲ್ಲ. ಹಾಗಾಗಿ ಈ ಯುವತಿ ಮುಂದಾಲೋಚನೆಯಿಂದ, ಕೊವಿಶೀಲ್ಡ್ ಲಸಿಕೆ ಪಡೆದ ಯುವಕನೇ ಬೇಕೆಂದು ಹೇಳಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಮಾನ್ಯವಾಗಿ ಮದುವೆಯಾದ ಹೊಸತರದಲ್ಲಿ ಹನಿಮೂನ್ಗೆ ಹೋಗುವ ಪ್ಲ್ಯಾನ್ ಇದ್ದೇ ಇರುತ್ತದೆ. ಬೇರೆ ದೇಶಗಳಿಗೆ ಪ್ರವಾಸಕ್ಕೆ ಹೋಗುವಾಗ ಯಾವುದೇ ಅಡೆತಡೆಯಾಗಬಾರದು ಎಂಬುದು ಯುವತಿಯ ಮುಂದಾಲೋಚನೆ ಇರಬಹುದು. ಅಥವಾ ಅಧ್ಯಯನ, ಕೆಲಸಕ್ಕೆಂದು ಒಮ್ಮೆ ವಿದೇಶಕ್ಕೆ ಹೋಗಬೇಕಾದರೂ ಕೊವ್ಯಾಕ್ಸಿನ್ ಲಸಿಕೆ ಪಡೆದರೆ ಸಮಸ್ಯೆಯಾಗುತ್ತದೆ. ಕೊವಿಶೀಲ್ಡ್ ಲಸಿಕೆ ಡಬ್ಲ್ಯೂಎಚ್ಒ ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದರಿಂದ ಹೆಚ್ಚಿನವರು ಇದೇ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.
ಕೊವಿಶೀಲ್ಡ್ ಸೇಫ್
ಇನ್ನು ಕೊವಿಶೀಲ್ಡ್ ಲಸಿಕೆ ಮೂರೂ ಹಂತದ ಕ್ಲಿನಿಕಲ್ ಟ್ರಯಲ್ ಮುಗಿಸಿದೆ. ಈ ಲಸಿಕೆಯೇ ಹೆಚ್ಚು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ ಎಂದು ಇತ್ತೀಚಿಗಿನ ವರದಿಯಲ್ಲೂ ಸಾಬೀತಾಗಿದೆ. ಹಾಗಾಗಿ ಕೂಡ ಯುವತಿ ಕೊವಿಶೀಲ್ಡ್ ಎರಡೂ ಲಸಿಕೆ ಪಡೆದವನೇ ಬೇಕೆಂಬ ಬೇಡಿಕೆಯನ್ನು ಇಟ್ಟಿರಬಹುದು. ಅದೇನೇ ಇರಲಿ, ಮದುವೆಯಾಗುವ ಯುವತಿಯೊಬ್ಬಳು ಹೀಗೊಂದು ಬೇಡಿಕೆಯನ್ನಿಟ್ಟಿದ್ದು, ವಿಚಿತ್ರ ಎನ್ನಿಸಿದರೂ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂಬ ಅಭಿಪ್ರಾಯವನ್ನೂ ಜನರು ವ್ಯಕ್ತಪಡಿಸಿದ್ದಾರೆ.
Published On - 1:59 pm, Tue, 8 June 21