ಹರಿಯಾಣ: ಸುಪ್ರೀಂಕೋರ್ಟ್ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಸಲಿಂಗ ವಿವಾಹದ ಕುರಿತು ಕಾನೂನು ಮಾನ್ಯತೆ ಇಲ್ಲ ಎಂದು ತಿಳಿಸಿದ್ದರೂ ಸಲಿಂಗ ಪ್ರೇಮ, ಮದುವೆ ಪ್ರಕರಣಗಳು ಕಡಿಮೆಯಾಗಿಲ್ಲ. ಇದೀಗ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದ ಸಲಿಂಗಿ ಮದುವೆಯೊಂದು ಚರ್ಚೆಯ ವಿಷಯವಾಗಿದೆ. ಗುರುಗ್ರಾಮದ ಯುವತಿಯೊಬ್ಬಳು ಫತೇಹಾಬಾದ್‌ನ ಯುವತಿಯನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಪ್ರಾರಂಭದಲ್ಲಿ ಎರಡೂ ಕಡೆಯ ಕೆಲವು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಇಬ್ಬರ ಕುಟುಂಬವೂ ಸಮ್ಮತಿ ನೀಡಿ, ಬಂಧು-ಬಳಗದ ಸಮ್ಮುಖದಲ್ಲಿ ಸಲಿಂಗಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುರುಗ್ರಾಮದ ಮದನ್‌ಪುರಿ ಪ್ರದೇಶದ ಪಂಚಾಯತ್ ಧರ್ಮಶಾಲೆಯಲ್ಲಿ ಇಬ್ಬರು ಯುವತಿಯರು ವಿವಾಹವಾಗಿದ್ದಾರೆ. ಈ ಸಂಬಂಧ ಗುರುಗ್ರಾಮದ ಅಂಜು ಶರ್ಮಾ ಅವರು ಪತಿಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರೆ, ಫತೇಹಾಬಾದ್‌ನ ಕವಿತಾ ಟಪ್ಪೂ ಪತ್ನಿಯಾಗಿ ಇಡೀ ಮನೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಅಂಜು ಶರ್ಮಾ ಹೇಳುವಂತೆ “ಕವಿತಾಳ ಪೋಷಕರು ತೀರಿಹೋಗಿದ್ದಾರೆ. ಆಕೆಯ ತಂಗಿಗೆ ಮದುವೆಯಾಗಿದೆ. ನಮ್ಮ ಮದುವೆ ಆಕೆಯ ಸೋದರ ಮಾವನಿಗೆ ತಿಳಿದಾಗ ಆತ ಮದುವೆಗೆ ಬರಲು ನಿರಾಕರಿಸಿದ್ದ. ಆದ್ದರಿಂದ ಮದುವೆಗೆ ಆಯ್ದ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಬ್ಬಗಳ ಮುಚ್ಚಳ ಬಿಗಿಯಾಗಿ ಮುಚ್ಚುತ್ತಾನೆಂದು ಪತಿಗೆ ಡಿವೋರ್ಸ್ ಕೊಟ್ಟ ಮಹಿಳೆ
ಅಂಜು ಶರ್ಮಾ ಅವರು ಟಿವಿ ಕಲಾವಿದೆ, ಕೋವಿಡ್ ಅವಧಿಯಲ್ಲಿ ಕಾರ್ಯಕ್ರಮವೊಂದರ ಶೂಟಿಂಗ್ ವೇಳೆ ಕವಿತಾ ಟಪ್ಪೂ ಮೇಕಪ್ ಆರ್ಟಿಸ್ಟ್ ಆಗಿ ಬಂದಿದ್ದಾರೆ. ಈ ಸಮಯದಲ್ಲಿ ಇಬ್ಬರ ಪರಿಚಯವಾಗಿದೆ. ಆ ಸಮಯದಲ್ಲಿ ಕವಿತಾ ಸುಮಾರು 40 ದಿನಗಳ ಕಾಲ ಅಂಜು ಜೊತೆಗೆದ್ದಳು. ಈ ಸಮಯದಲ್ಲಿ ಇವರಿಬ್ಬರ ನಡುವೆ ಪರಸ್ಪರ ಪ್ರೀತಿ ಚಿಗುರಿದೆ. ಇದೀಗ ನಾಲ್ಕು ವರ್ಷಗಳ ಪ್ರೀತಿಯ ಬಳಿಕ ಮದುವೆಯಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ