ಪ್ರೀವೆಡ್ಡಿಂಗ್ ಶೂಟ್: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಜ್ಞೆ ತೊಟ್ಟ ‘ಅನಂತಗಾಯತ್ರಿ’

| Updated By: ಶ್ರೀದೇವಿ ಕಳಸದ

Updated on: Dec 28, 2022 | 12:46 PM

Pre Wedding Shoot : ‘ಸರ್ಕಾರಿ ಶಾಲೆಗಳು ಉಳಿಯಬೇಕು. ಹಳ್ಳಿಗಾಡಿನ ಮಕ್ಕಳು ಶಿಕ್ಷಣದ ಮೂಲಕ ಸಾಧನೆಯ ದಾರಿ ಕಂಡುಕೊಳ್ಳಬೇಕು. ಈ ವಿಷಯವಾಗಿ ಜನರೂ ಒಳಗೊಳ್ಳಬೇಕು ಎಂಬ ಉದ್ದೇಶದಿಂದ ಈ ಪರಿಕಲ್ಪನೆ ರೂಪಿಸಿದೆವು.’ ಅನಂತ ಯಲಿಗಾರ.

ಪ್ರೀವೆಡ್ಡಿಂಗ್ ಶೂಟ್: ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಜ್ಞೆ ತೊಟ್ಟ ‘ಅನಂತಗಾಯತ್ರಿ’
ಭಾವೀ ವರ ಅನಂತ ಮತ್ತು ಗಾಯತ್ರಿ ಅವರ ಪ್ರೀ ವೆಡ್ಡಿಂಗ್ ಶೂಟ್​
Follow us on

Viral Video : ವಿವಾಹಪೂರ್ವ ಛಾಯಾಗ್ರಹಣ (Pre wedding shoot) ಎನ್ನುವುದು ಶ್ರೀಮಂತಿಕೆಯನ್ನು, ಸಾಹಸವನ್ನು, ಸೃಜನಾತ್ಮಕತೆಯನ್ನು ಮತ್ತವರವರ ಅಭಿರುಚಿಯನ್ನು ಸಾಂಕೇತಿಸುವ ಒಂದು ‘ಕಾರ್ಯಕ್ರಮ’ದಂತೆ ಇಂದು ಮಾರ್ಪಾಡಾಗುತ್ತ ಸಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿರುವ ಈ ಪ್ರಿವೆಡ್ಡಿಂಗ್ ಫೋಟೋ ಶೂಟ್​ ಮಾತ್ರ ಅತ್ಯಂತ ವಿಭಿನ್ನವಾಗಿದೆ. ಇಲ್ಲಿ ಲಕ್ಷಾಂತರ ಹಣವನ್ನು ಸುರಿದಿಲ್ಲ. ಯಾವುದೋ ದೂರ ಊರುಗಳಿಗೆ ಹೋಗಿಲ್ಲ, ಮೇಕಪ್​, ಕಾಸ್ಟ್ಯೂಮ್​, ಲೈಟ್ಸ್​, ಕ್ಯಾಮೆರಾ, ಸಾಹಸ ಎಂಬ ರಗಳೆ ಇಲ್ಲ. ಹಾಗಿದ್ದರೆ ಇದು ಹೇಗೆ ವಿಶೇಷ? ಓದಿ ಮತ್ತು ನೋಡಿ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!


ಸರ್ಕಾರಿ ಶಾಲಾ ಮಕ್ಕಳೊಂದಿಗೆ ಪ್ರೀ ವೆಡ್ಡಿಂಗ್ ಶೂಟ್​ನಲ್ಲಿ ಗಾಯತ್ರಿ ಮತ್ತು ಅನಂತ ಯಲಿಗಾರ

ಅನಂತ ಯಲಿಗಾರ ಬೈಲಹೊಂಗಲ ಮೂಲದವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಮದುವೆಯಾಗಲಿರುವ ಗಾಯತ್ರಿ ಬಿಕಾಂ ಪದವೀಧರೆ. ಇವರಿಬ್ಬರೂ ಸರ್ಕಾರಿ ಶಾಲಾ ಉಳಿವಿಗಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ತಮ್ಮ ವಿವಾಹಪೂರ್ವ ಛಾಯಾಗ್ರಹಣ ಕಾರ್ಯಕ್ರಮವನ್ನು ಹೀಗೆ ಅವಿಸ್ಮರಣಿಯಗೊಳಿಸಿದ್ದಾರೆ.

ಈ ಅಪೂರ್ವ, ಅರ್ಥಪೂರ್ಣ ಘಳಿಗೆಗಳಿಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಸಾಕ್ಷಿಯಾಗಿದ್ದರು. ಅವರಿಗೆ ಅನಂತ ಮತ್ತು ಗಾಯತ್ರಿ ಪುಸ್ತಕ, ಕಲಿಕಾ ಸಾಮಗ್ರಿಗಳನ್ನು ನೀಡಿದರು. ಮದುವೆಯ ನಂತರ ಸರ್ಕಾರಿ ಶಾಲೆಗಳಿಗೆ ಗ್ರಾಮೀಣ ಭಾಗದ ಮಕ್ಕಳನ್ನು ಕರೆತರಲು ತಾವಿಬ್ಬರೂ ಶ್ರಮವಹಿಸುವುದಾಗಿ ಹೇಳಿದ್ದಾರೆ. ಅದಕ್ಕಾಗಿ ಸೂಕ್ತ ಯೋಜನೆಯನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

ಭಾವೀ ದಂಪತಿಗೆ ಶುಭಕೋರುತ್ತಿರುವ ಶಾಲಾ ಸಿಬ್ಬಂದಿ

‘ಸಮಾಜದಿಂದಲೇ ಬಂದಿರುವ ನಾವು ಸಮಾಜಕ್ಕೆ ಕಿಂಚಿತ್ತನ್ನಾದರೂ ಮರಳಿಸಬೇಕು ಎನ್ನುವ ಆಲೋಚನೆ ಸದಾ ಕಾಡುತ್ತಿತ್ತು. ಮದುವೆ ಎನ್ನುವ ನೆಪದಲ್ಲಿ ನನ್ನ ಭಾವೀಪತ್ನಿಯೊಂದಿಗೆ ಈ ಪರಿಕಲ್ಪನೆ ಹುಟ್ಟುಹಾಕಿದೆ. ಸರ್ಕಾರಿ ಶಾಲೆ ಉಳಿಸುವಲ್ಲಿ ಜನರೂ ಮುಂದಾಗಬೇಕೆಂದರೆ ನಮ್ಮ ಈ ಪ್ರೀವೆಡ್ಡಿಂಗ್ ಶೂಟ್ ಪ್ರೇರಣೆಯಾಗಬೇಕು ಎಂದು ಯೋಚಿಸಿ ತೊಡಗಿಕೊಂಡೆವು. ಇದು ಖಂಡಿತ ಪ್ರಚಾರಕ್ಕಾಗಿ ಅಲ್ಲ. ಸರ್ಕಾರಿ ಶಾಲೆಗಳು ಉಳಿಯಬೇಕು. ಹಳ್ಳಿಗಾಡಿನ ಮಕ್ಕಳು ಶಿಕ್ಷಣದ ಮೂಲಕ ಸಾಧನೆಯ ದಾರಿ ಕಂಡುಕೊಳ್ಳಬೇಕು ಎಂಬ ಆಶಯ ನಮ್ಮದು’ ಎಂದಿದ್ದಾರೆ ಅನಂತ ಯಲಿಗಾರ.

ಪ್ರತಿಜ್ಞಾ ಸಂದೇಶ

ಮದುವೆಯೆಂದರೆ ಎರಡು ಮನಸ್ಸು ದೇಹಗಳ ಮಿಲನವಷ್ಟೇ ಅಲ್ಲ, ಕುಟುಂಬಗಳ ಬಂಧವಷ್ಟೇ ಅಲ್ಲ ಅದು ಸಾಮಾಜಿಕ ಜವಾಬ್ಧಾರಿ ಕೂಡ. ಆದರೆ ಇದನ್ನು ಹೇಗೆ ಆಗುಮಾಡಿಕೊಳ್ಳಬೇಕು ಎಂದು ಯೋಚಿಸಿ ಪ್ರವೃತ್ತರಾಗುವಲ್ಲಿ ಇದರ ಸ್ವಾರಸ್ಯ ಅಡಗಿದೆ. ನವೆಂಬರ್ 11ರಂದು ಅನಂತ ಮತ್ತು ಗಾಯತ್ರಿ ನಿಶ್ಚಿತಾರ್ಥ ನಡೆದಿದೆ. ಮದುವೆ ಫೆಬ್ರುವರಿ 24ಕ್ಕೆ ಏರ್ಪಾಡಾಗಿದೆ. ಈ ಅವಧಿಯಲ್ಲಿ ಹೀಗೊಂದು ಅರ್ಥಪೂರ್ಣ ಪ್ರೀವೆಡ್ಡಿಂಗ್ ಫೋಟೋಶೂಟ್​ಗೆ ಸಾಕ್ಷಿಯಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಗಮನ ಸೆಳೆದಿದ್ದಾರೆ ಇವರಿಬ್ಬರೂ.


ಪ್ರತಿಜ್ಞಾ ಸಂದೇಶ

ವ್ಯಕ್ತಿಯಿಂದಲೇ ಸಮಾಜ ಸಮಾಜದಿಂದಲೇ ವ್ಯಕ್ತಿ, ಪರಸ್ಪರ ಬೆಸೆಕೊಂಡೇ ಸಾಗುವ ಈ ಹರಿವನ್ನು ಪೋಷಿಸಲೇಬೇಕಲ್ಲವೆ? ಅದಕ್ಕಾಗಿ ಸದಾ ಕ್ರಿಯಾಶೀಲವಾಗಿ, ಪ್ರಜ್ಞಾವಂತಿಕೆಯಿಂದ ಯೋಚಿಸಿ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಅನಂತ ಮತ್ತು ಗಾಯತ್ರಿ ಅವರ ನಡೆ ಇದು. ನಿಮ್ಮದು?
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:21 pm, Wed, 28 December 22